ಬೆಂಗಳೂರು : ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೇತೃತ್ವದ ನೂತನ ಸಚಿವ ಸಂಪುಟ ರಚನೆಯಾಗಿದ್ದು, ಅದರಲ್ಲೂ ರಾಜಧಾನಿ ಬೆಂಗಳೂರಿಗೆ ಸಿಂಹಪಾಲು ದೊರೆತಿದೆ. ಬೆಂಗಳೂರಿನ ನಾಲ್ವರು ಶಾಸಕರಿಗೆ ಸಚಿವ ಸ್ಥಾನ ಸಿಕ್ಕಿದೆ.
ಆರ್. ಅಶೋಕ್ :ಬೆಂಗಳೂರಿನ ಪದ್ಮನಾಭನಗರ ಕ್ಷೇತ್ರದಿಂದ ಸತತ ಮೂರನೇ ಬಾರಿಗೆ ವಿಧಾನಸಭೆ ಪ್ರವೇಶಿಸಿರುವ ಆರ್.ಅಶೋಕ್ ಅವರು, ಈ ಬಾರಿಯೂ ಸಂಪುಟ ಸೇರಿದ್ದಾರೆ. ಒಕ್ಕಲಿಗ ಸಮುದಾಯದ ಅಶೋಕ್ ಬಿಜೆಪಿಯಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಪದ್ಮನಾಭನಗರ ಕ್ಷೇತ್ರವಾಗುವುದಕ್ಕೂ ಮುನ್ನ ಬೆಂಗಳೂರಿಗೆ ಅತಿದೊಡ್ಡ ಕ್ಷೇತ್ರವಾಗಿದ್ದ ಉತ್ತರಹಳ್ಳಿ ಕ್ಷೇತ್ರದಿಂದ ಆಯ್ಕೆಯಾಗಿ ವಿಧಾನಸಭೆ ಪ್ರವೇಶಿಸಿದ್ದರು. ಪಕ್ಷ ಸಂಘಟನೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ, ಗೃಹ ಸಚಿವರಾಗಿ ಹಾಗೂ ಸಾರಿಗೆ ಸಚಿವರಾಗಿ ಕೆಲಸ ಮಾಡಿದ್ದಾರೆ.
ನೂತನ ಸಚಿವ ಡಾ. ಸಿ ಎನ್ ಅಶ್ವತ್ಥನಾರಾಯಣ ಡಾ. ಸಿ ಎನ್ ಅಶ್ವತ್ಥನಾರಾಯಣ:ಮೈತ್ರಿ ಸರ್ಕಾರವನ್ನು ಪತನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಲ್ಲೇಶ್ವರಂ ಕ್ಷೇತ್ರದ ಶಾಸಕ ಡಾ. ಸಿ ಎನ್ ಅಶ್ವತ್ಥನಾರಾಯಣ ಅವರಿಗೆ ಅದೃಷ್ಟ ಖುಲಾಯಿಸಿದೆ. ಒಕ್ಕಲಿಗ ಸಮುದಾಯದ ಅಶ್ವತ್ಥನಾರಾಯಣ ಅವರು ಎರಡನೇ ಬಾರಿಗೆ ಮಲ್ಲೇಶ್ವರಂ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.
ನೂತನ ಸಚಿವ ಎಸ್. ಸುರೇಶ್ ಕುಮಾರ್ ಎಸ್. ಸುರೇಶ್ ಕುಮಾರ್ : ರಾಜಾಜಿನಗರ ಕ್ಷೇತ್ರದಿಂದ ಸತತ 3ನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಬ್ರಾಹ್ಮಣ ಸಮುದಾಯದ ಎಸ್.ಸುರೇಶ್ ಕುಮಾರ್ ಸರಳ, ಸಜ್ಜನಿಕೆ ವ್ಯಕ್ತಿ. ಬಿಜೆಪಿಯ ಕಟ್ಟಾ ಕಾರ್ಯಕರ್ತರಾಗಿರುವ ಅವರು ಒಳ್ಳೆಯ ವ್ಯಕ್ತಿತ್ವ ಹೊಂದಿದ್ದಾರೆ. ಹಾಗಾಗಿ, ಮತ್ತೆ ಅವರಿಗೆ ಸಚಿವ ಸ್ಥಾನ ಲಭಿಸಿದೆ. ಈ ಹಿಂದೆ ಬಿಜೆಪಿ ಸರ್ಕಾರವಿದ್ದ ಸಂದರ್ಭದಲ್ಲಿ ಕಾನೂನು ಸಂಸದೀಯ ವ್ಯವಹಾರಗಳ ಸಚಿವರಾಗಿ ಕೆಲಸ ಮಾಡಿದ್ದರು.
ವಿ.ಸೋಮಣ್ಣ :ಗೋವಿಂದರಾಜನಗರ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದು, ಇದೀಗ 3ನೇ ಬಾರಿಗೆ ಸಚಿವರಾಗಿದ್ದಾರೆ. ಜನತಾ ಪರಿವಾರದ ಮೂಲದಿಂದ ಬಂದ ವಿ. ಸೋಮಣ್ಣ, ಕಳೆದ ಬಾರಿ ಆಪರೇಷನ್ ಕಮಲಕ್ಕೆ ಒಳಗಾಗಿ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿ ವಸತಿ ಸಚಿವರಾಗಿ ಕೆಲಸ ಮಾಡಿದ್ದರು. ಇದಕ್ಕೂ ಮುನ್ನ ಜೆ ಹೆಚ್ ಪಟೇಲ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬಂಧೀಖಾನೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.