ಬೆಂಗಳೂರು:ಬಕ್ರೀದ್ ಹಬ್ಬದ ಅಂಗವಾಗಿ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಭಾನುವಾರ ನಡೆದ ಸಾಮೂಹಿಕ ಪ್ರಾರ್ಥನಾ ಸಭೆಯಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಭಾಗವಹಿಸಿದ್ದರು. ಇದೆ ವೇಳೆ ಮುಸ್ಲಿಂ ಬಾಂಧವರಿಗೆ ಹಬ್ಬದ ಶುಭಾಶಯ ಕೋರಿದರು. ಮಾಜಿ ಸಚಿವ ಜಮೀರ್ ಅಹಮದ್ ಹಾಗೂ ಅವರ ಮಗ ಜಾಯೆದ ಖಾನ್ ಭಾಗಿಯಾಗಿದ್ದರು.
ಬಕ್ರೀದ್ ಹಿನ್ನೆಲೆ ಚಾಮರಾಜಪೇಟೆ ಈದ್ಗಾ ಆಟದ ಮೈದಾನ ಸುತ್ತಮುತ್ತ ಭಾರಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ಬಂದೋಬಸ್ತ್ಗಾಗಿ 500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿತ್ತು. 9 ಗಂಟೆಗೆ ಮೈದಾನದಲ್ಲಿ ಮುಸ್ಲಿಂ ಬಾಂಧವರಿಗೆ ಪ್ರಾರ್ಥನೆ ಮಾಡಲು ಅವಕಾಶ ಕಲ್ಪಿಸಲಾಗಿತ್ತು.
ಈದ್ಗಾ ಮೈದಾನಕ್ಕೆ ಸಿದ್ದರಾಮಯ್ಯ ಭೇಟಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದ ಹಿನ್ನೆಲೆ ವಿಶೇಷ ಕಾಳಜಿ ವಹಿಸಲಾಗಿತ್ತು. ಭದ್ರತೆಗಾಗಿ ಓರ್ವ ಡಿಸಿಪಿ, ಮೂವರು ಎಸಿಪಿ, 6 ಇನ್ಸ್ಪೆಕ್ಟರ್, 11 ಪಿಎಸ್ಐ, 21ಎಎಸ್ಐ, 500 ಜನ ಕಾನ್ಸ್ಟೇಬಲ್, 100ಕ್ಕೂ ಹೆಚ್ಚಿನ ಸಂಚಾರ ಪೊಲೀಸರು ಭದ್ರತೆ ಒದಗಿಸಿದ್ದರು.
ಇದನ್ನೂ ಓದಿ:ಸಿದ್ದರಾಮೋತ್ಸವ ಬದಲಾಗಿ ಸಿದ್ದರಾಮ ಉರಿಸೋ ಉತ್ಸವ ಮಾಡಬೇಕಿತ್ತು: ಯತ್ನಾಳ ವ್ಯಂಗ್ಯ
ಬಕ್ರೀದ್ ಹಬ್ಬದ ಪ್ರಾರ್ಥನೆಯಲ್ಲಿ ಪಾಲ್ಗೊಂಡ ಬಳಿಕ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪಕ್ಕದಲ್ಲಿರುವ ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಅವರ ಜೊತೆ ಜಮೀರ್ ಅಹಮ್ಮದ್ ಖಾನ್, ಪಾಲಿಕೆ ಸದಸ್ಯ ಚಂದ್ರಶೇಖರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.