ಕರ್ನಾಟಕ

karnataka

ETV Bharat / state

ಕೇಂದ್ರದಿಂದ ದುರುದ್ದೇಶವಿಲ್ಲ; ರಾಜ್ಯದ ಟ್ಯಾಬ್ಲೋ ಕೈಬಿಟ್ಟದ್ದನ್ನು ಸಮರ್ಥಿಸಿಕೊಂಡ ಬಿ ವೈ ವಿಜಯೇಂದ್ರ - Republic Day Tableau

ಕರ್ನಾಟಕ ರಾಜ್ಯಕ್ಕೆ 14 ವರ್ಷಗಳಿಂದ ನಿರಂತರವಾಗಿ ಗಣರಾಜ್ಯೋತ್ಸವದಲ್ಲಿ ನಡೆಯುವ ಪಥಸಂಚಲನದಲ್ಲಿ ಅವಕಾಶ ಸಿಕ್ಕಿತ್ತು. ಈ ಬಾರಿ ಬೇರೆ ರಾಜ್ಯಗಳಿಗೆ ಅವಕಾಶ ಕೊಡಬೇಕೆನ್ನುವ ಕಾರಣದಿಂದ ರಾಜ್ಯದ ಟ್ಯಾಬ್ಲೋಗೆ ಅವಕಾಶ ಇಲ್ಲ ಎಂದು ಬಿ ವೈ ವಿಜಯೇಂದ್ರ ಹೇಳಿದ್ದಾರೆ.

State President Vijayendra
ರಾಜ್ಯಾಧ್ಯಕ್ಷ ವಿಜಯೇಂದ್ರ

By ETV Bharat Karnataka Team

Published : Jan 10, 2024, 12:30 PM IST

Updated : Jan 10, 2024, 2:01 PM IST

ಬಿ ವೈ ವಿಜಯೇಂದ್ರ ಹೇಳಿಕೆ

ಬೆಂಗಳೂರು:ಈ ಬಾರಿಯ ಗಣರಾಜ್ಯೋತ್ಸವದಲ್ಲಿ ನಡೆಯುವ ಪಥಸಂಚಲನದಲ್ಲಿ ರಾಜ್ಯದ ಟ್ಯಾಬ್ಲೋಗೆ ಅವಕಾಶ ಸಿಕ್ಕಿಲ್ಲ. ಇದರ ಹಿಂದೆ ಬೇರೆ ರಾಜ್ಯಗಳಿಗೂ ಅವಕಾಶ ಕೊಡಬೇಕು ಎನ್ನುವ ಉದ್ದೇಶವಿದೆಯೇ ಹೊರತು ಕರ್ನಾಟಕಕ್ಕೆ ಅವಕಾಶ ಕೊಡಬಾರದು ಎನ್ನುವ ದುರುದ್ದೇಶ ಇದರಲ್ಲಿ ಇಲ್ಲವೆಂದು ಕೇಂದ್ರದ ನಿರ್ಧಾರವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಸಮರ್ಥಿಸಿಕೊಂಡಿದ್ದಾರೆ.

ನಗರದ ಹೊರವಲಯದ ರಮಾಡ ರೆಸಾರ್ಟ್​ನಲ್ಲಿ ಇಂದು ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಕಾಂಗ್ರೆಸ್ ಸರ್ಕಾರ ಮತ್ತು ಕಾಂಗ್ರೆಸ್ ಮುಖಂಡರಿಗೆ ರಾಜ್ಯದ ನೆಲ, ಸಂಪತ್ತಿನ ಬಗ್ಗೆ ಅಪಾರ ಗೌರವ ಇದ್ದರೆ ಮೊದಲನೆಯದಾಗಿ ಬೆಳಗಾವಿ ವಿಚಾರದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಹೇಳಿಕೆ ಬಗ್ಗೆ ಸಚಿವರು ತಮ್ಮ ಅಭಿಪ್ರಾಯ ತಿಳಿಸಲಿ. ಈ ರಾಜ್ಯದ ನೆಲ ಜಲದ ವಿಚಾರದಲ್ಲಿ ಕಾಳಜಿಯಲ್ಲಿ ಇದ್ದರೆ ಕಾವೇರಿ ವಿಚಾರದಲ್ಲಿ ದಿಟ್ಟ ನಿರ್ಧಾರ ಕೈಗೊಳ್ಳಲಿ ಎಂದು ಸವಾಲು ಹಾಕಿದ್ದಾರೆ.

ಟ್ಯಾಬ್ಲೋ ವಿಚಾರದಲ್ಲಿ ಹೇಳುವುದಾದರೆ ಗಣರಾಜ್ಯೋತ್ಸವದಂದು ಪಥಸಂಚಲನದಲ್ಲಿ ಭಾಗವಹಿಸಲು ಕರ್ನಾಟಕ ರಾಜ್ಯಕ್ಕೆ 14 ವರ್ಷಗಳಿಂದ ನಿರಂತರವಾಗಿ ಅವಕಾಶ ಸಿಕ್ಕಿದೆ. ಈಗ ಕೊಡುವುದಿಲ್ಲ ಎಂದು ಹೇಳಿಲ್ಲ, ಕಳೆದ ಬಾರಿ ಅವಕಾಶ ಸಿಗದೇ ಇದ್ದಾಗ ನಮ್ಮ ಹಿರಿಯರೆಲ್ಲರ ಪ್ರಯತ್ನದ ನಂತರ ಅವಕಾಶ ಸಿಕ್ಕಿತ್ತು. ಆದರೆ ಈ ಬಾರಿ ಕರ್ನಾಟಕ ಮಾತ್ರವಲ್ಲ, ಗೋವಾ ಸೇರಿದಂತೆ ನಾಲ್ಕೈದು ರಾಜ್ಯಗಳಿಗೆ ಸಿಕ್ಕಿಲ್ಲ. ಯಾರಿಗೆ ಈ ಬಾರಿ ಅವಕಾಶ ಸಿಗುತ್ತಿಲ್ಲವೋ ಅವರಿಗೆ ವಸ್ತು ಪ್ರದರ್ಶನದಲ್ಲಿ ತಮ್ಮ ಟ್ಯಾಬ್ಲೋ ಇಡುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಇದನ್ನು ಅರ್ಥಮಾಡಿಕೊಳ್ಳುವುದನ್ನು ಬಿಟ್ಟು ನಾಡಿನ ಬಗ್ಗೆ ಕಾಂಗ್ರೆಸ್​ ಮೊಸಳೆ ಕಣ್ಣೀರು ಹಾಕುತ್ತಿದೆ ಎಂದು ವಿಜಯೇಂದ್ರ ವಾಗ್ದಾಳಿ ನಡೆಸಿದರು.

ರಾಜ್ಯ ಸರ್ಕಾರ ಕನ್ನಡಪರ ಹೋರಾಟಗಾರ ನಾರಾಯಣ ಗೌಡ ವಿಚಾರದಲ್ಲಿ ಯಾವ ರೀತಿ ನಡೆದುಕೊಂಡಿದೆ ಅನ್ನೋದನ್ನು ರಾಜ್ಯದ ಜನ ನೋಡುತ್ತಿದ್ದಾರೆ. ಮೊನ್ನೆ ಒಂದು ಪ್ರಕರಣದಲ್ಲಿ ಬಿಡುಗಡೆಯಾದರೆ ಮತ್ತೊಂದು ಪ್ರಕರಣದಲ್ಲಿ ಒಳಗಡೆ ಹಾಕಿಸುವ ಪಿತೂರಿಯನ್ನು ರಾಜ್ಯ ಸರ್ಕಾರ ಮಾಡಿದೆ ಎಂದು ಆರೋಪಿಸಿದರು.

ಟ್ಯಾಬ್ಲೋ ವಿಚಾರದಲ್ಲಿ ಕೇಂದ್ರದ ಜೊತೆ ಮಾತುಕತೆ ನಡೆಸಲು ಸಮಯ ಸಂದರ್ಭ ಬರಲಿದೆ. ಈಗಾಗಲೇ ಟ್ಯಾಬ್ಲೋಗಳ ಬಗ್ಗೆ ತೀರ್ಮಾನ ಆಗಿದೆ. ಮುಂದಿನ ವರ್ಷ ಅವಕಾಶ ಕೊಡುವುದಾಗಿ ಈಗಾಗಲೇ ತಿಳಿಸಿದ್ದಾರೆ. ಹಾಗಾಗಿ ಎಲ್ಲ ವಿಚಾರದಲ್ಲೂ ಕೇಂದ್ರ ಸರ್ಕಾರವು ರಾಜ್ಯದ ವಿರುದ್ಧವಾಗಿ ಇದೆ ಎಂದು ಕಾಂಗ್ರೆಸ್​ ಬಿಂಬಿಸುತ್ತಿರುವುದನ್ನು ನಾಡಿನ ಜನ ಗಮನಿಸುತ್ತಿದ್ದಾರೆ ಎಂದು ವಿಜಯೇಂದ್ರ ಹೇಳಿದರು.

ಇಂದಿನ ಸಭೆ ವಿಚಾರದ ಕುರಿತು ಮಾತನಾಡಿದ ಅವರು, ಬಿಜೆಪಿ ಸಂಘಟನಾ ದೃಷ್ಟಿಯಿಂದ, ಮುಂದಿನ ಲೋಕಸಭಾ ಚುನಾವಣೆ ದೃಷ್ಟಿಯಿಂದ ಕರೆದಿರೋ ಸಭೆ ಇದಾಗಿದ್ದು, ಎಲ್ಲರೂ ಒಟ್ಟಾಗಿ ಹೋಗುತ್ತೇವೆ ಎಂದರು.

ಇದನ್ನೂ ಓದಿ:ಗಣರಾಜ್ಯೋತ್ಸವ ಪಥಸಂಚಲನದಲ್ಲಿ ರಾಜ್ಯದ ಸ್ತಬ್ದಚಿತ್ರಗಳಿಗೆ ಅವಕಾಶ ನಿರಾಕರಿಸಿ ಕನ್ನಡಿಗರಿಗೆ ಅಪಮಾನ: ಸಿಎಂ ಕಿಡಿ

Last Updated : Jan 10, 2024, 2:01 PM IST

ABOUT THE AUTHOR

...view details