ಬೆಂಗಳೂರು: ನಾಳೆಯಿಂದ ಎರಡು ದಿನಗಳ ಕಾಲ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಹತ್ವದ ಸಭೆ ನಡೆಸಲಿದ್ದಾರೆ. ಶಾ ಬುಲಾವ್ ಮೇರೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ದೆಹಲಿಗೆ ತೆರಳಿದ್ದಾರೆ.
ದೆಹಲಿಗೆ ತೆರಳಿದ ಬಿ.ಎಸ್.ಯಡಿಯೂರಪ್ಪ ನವದೆಹಲಿಯಲ್ಲಿ ನಾಳೆಯಿಂದ ಎರಡು ದಿನಗಳ ಕಾಲ ರಾಜ್ಯಗಳ ಪದಾಧಿಕಾರಿಗಳ ಜೊತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಹತ್ವದ ಸಭೆ ನಡೆಸಲಿದ್ದಾರೆ. ಹಾಗಾಗಿ ರಾಜ್ಯ ಘಟಕಗಳ ಅಧ್ಯಕ್ಷರು, ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳಿಗೆ ಅಮಿತ್ ಶಾ ಬುಲಾವ್ ನೀಡಿದ್ದು, ಲೋಕಸಭೆ ಚುನಾವಣೆ ಗೆಲುವು, ರಾಜ್ಯಾಧ್ಯಕ್ಷರುಗಳ ಬದಲಾವಣೆ, ನಾನಾ ಹಂತದ ಪದಾಧಿಕಾರಿಗಳ ಚುನಾವಣೆ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ. ಹೀಗಾಗಿ ರಾಜ್ಯದಿಂದಲೂ ಬಿ.ಎಸ್.ಯಡಿಯೂರಪ್ಪ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿಗಳಿಗೆ ಬುಲಾವ್ ಬಂದಿದ್ದು, ದೆಹಲಿಗೆ ತೆರಳಿದರು.
ಲೋಕಸಭೆ ಚುನಾವಣೆ ಕುರಿತು ಸಮಗ್ರ ವರದಿ ಕೇಳಿರುವ ಅಮಿತ್ ಶಾ, ಜೊತೆಗೆ ಚುನಾವಣೆಯಲ್ಲಿ ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿದ ಮುಖಂಡರು, ಕಾರ್ಯಕರ್ತರ ಬಗ್ಗೆಯೂ ವರದಿ ಕೇಳಿದ್ದಾರೆ. ಅದರಂತೆ ಶಾ ಕೇಳಿರುವ ವರದಿಗಳನ್ನು ತಮ್ಮೊಂದಿಗೆ ಕೊಂಡೊಯ್ದಿರುವ ಯಡಿಯೂರಪ್ಪ, ಅವರಿಗೆ ಸಲ್ಲಿಕೆ ಮಾಡಲಿದ್ದಾರೆ. ಸಭೆಯಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆಯೂ ಮಹತ್ವದ ಚರ್ಚೆ ನಡೆಯಲಿದೆ ಎನ್ನಲಾಗಿದೆ.
ದೆಹಲಿಗೆ ತೆರಳುವ ಮುನ್ನ ಮಾತನಾಡಿದ ಯಡಿಯೂರಪ್ಪ, ನಾಳೆಯಿಂದ ಅಮಿತ್ ಶಾ ನೇತೃತ್ವದಲ್ಲಿ ಸಭೆ ಇದೆ. ನಮ್ಮ ರಾಷ್ಟ್ರೀಯ ಅಧ್ಯಕ್ಷರು ಸಭೆ ಕರೆದಿದ್ದಾರೆ. ಹಾಗಾಗಿ ನಾನು ಇಂದು ದೆಹಲಿಗೆ ಹೊರಟಿದ್ದೇನೆ. ಇಡೀ ದೇಶದಲ್ಲಿ ಬಿಜೆಪಿ ಸಂಘಟನಾತ್ಮಕ ಬದಲಾವಣೆ ಕುರಿತು ಚರ್ಚೆ ಇರಲಿದೆ. ಲೋಕಸಭೆ ಚುನಾವಣೆ ಕುರಿತೂ ಚರ್ಚಿಸಲಿದ್ದೇವೆ ಎಂದರು.