ಬೆಂಗಳೂರು:ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಮತ್ತೆ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ. ಅಂತಹ ಚರ್ಚೆಯೇ ಅನಗತ್ಯವಾಗಿದ್ದು, ಎಲ್ಲರೂ ಈ ವಿಷಯವನ್ನು ಇಲ್ಲಿಗೇ ನಿಲ್ಲಿಸಿ ಎಂದು ನಾಯಕತ್ವ ಬದಲಾವಣೆ ವದಂತಿಗೆ ಮಾಜಿ ಸಿಎಂ ಬಿ. ಎಸ್ ಯಡಿಯೂರಪ್ಪ ತೆರೆ ಎಳೆದಿದ್ದಾರೆ.
ಮಂತ್ರಾಲಯಕ್ಕೆ ತೆರಳುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚುನಾವಣೆಗೆ 7-8 ತಿಂಗಳು ಇರುವಾಗ ಬದಲಾವಣೆ ಪ್ರಶ್ನೆ ಬರುವುದಿಲ್ಲ. ಮುಖ್ಯಮಂತ್ರಿಗಳಾಗಿ ಬೊಮ್ಮಾಯಿ ಅವರೇ ಮುಂದುವರೆಯುತ್ತಾರೆ. ಅನಗತ್ಯವಾದ ಚರ್ಚೆ ಸರಿ ಅಲ್ಲ. ಇವತ್ತು ಎಲ್ಲರೂ ಇಲ್ಲಿಗೆ ನಿಲ್ಲಿಸಬೇಕು. ಯಾರೂ ಕೂಡ ಸಿಎಂ ಬದಲಾವಣೆ ಬಗ್ಗೆ ಚರ್ಚೆ ಮಾಡುವ ಅವಶ್ಯಕತೆಯೂ ಇಲ್ಲ. ಯಾರೂ ಏನೇ ಹೇಳಿದರೂ ಆ ರೀತಿಯ ಬದಲಾವಣೆಗಳಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳುವುದೇ ನಮ್ಮ ಉದ್ದೇಶ. ನಾನು ಈಗಾಗಲೇ ವಿಧಾನಸಭೆಯಲ್ಲಿಯೇ ಇದನ್ನು ಹೇಳಿದ್ದೇನೆ. ಯಾರೋ ಒಂದಿಬ್ಬರು ತಾವು ಮುಂದೆ ಮುಖ್ಯಮಂತ್ರಿ ಆಗುತ್ತೇವೆ ಅನ್ನೋ ಭ್ರಮೆಯಲ್ಲಿದ್ದಾರೆ. ಆದರೆ, ಅವರಿಗೆ ನಾವು ಅವಕಾಶ ಮಾಡಿಕೊಡುವುದಿಲ್ಲ. ನಿಶ್ಚಿತವಾಗಿ ಬಿಜೆಪಿಯವರೇ ಮುಂದಿನ ಮುಖ್ಯಮಂತ್ರಿಗಳಾಗ್ತಾರೆ. ನಾವೆಲ್ಲರೂ ಸಾಮೂಹಿಕವಾಗಿ ಪ್ರವಾಸ ಮಾಡಿ, ಪಕ್ಷ ಅಧಿಕಾರಕ್ಕೆ ಬರಲು 135 ಸ್ಥಾನಗಳನ್ನು ಗೆಲ್ಲುತ್ತೇವೆ. ನಮಗೆ ನರೇಂದ್ರ ಮೋದಿಯಂತಹ ನಾಯಕ ಇರುವುದರಿಂದ ಕರ್ನಾಟಕದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರುವ ವಿಶ್ವಾಸ ಇದೆ ಎಂದು ಹೇಳಿದರು.
ಮೊನ್ನೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯ ರಾಜಕಾರಣದ ಬಗ್ಗೆ ಚರ್ಚೆ ಮಾಡಿದರು ಅಷ್ಟೇ. ಆದರೆ, ನಾಯಕತ್ವದ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ಆದಷ್ಟು ಬೇಗ ಸಚಿವ ಸಂಪುಟ ವಿಸ್ತರಣೆ ಬಗ್ಗೆ ನಿರ್ಧಾರ ಆಗುತ್ತದೆ. ಇದಕ್ಕೆ ಹೈಕಮಾಂಡ್ ನಾಯಕರು ಕೂಡ ಸಹಕಾರ ಕೊಡುತ್ತಾರೆ ಎಂದು ಬಿಎಸ್ವೈ ಸ್ಪಷ್ಟಪಡಿಸಿದರು.