ಬೆಂಗಳೂರು: ಈಶ್ವರಪ್ಪನವರಿಗೆ ಮುಖ್ಯಮಂತ್ರಿಗಳ ಬಗ್ಗೆ ಬೇಸರ ಇದ್ರೆ ಅವರು ಸಂಪುಟದಿಂದ ಆಚೆ ಇದ್ದು ಮಾತನಾಡಲಿ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಕಿಡಿಕಾರಿದ್ದಾರೆ.
ಇಂದು ಶಾಸಕರ ಭವನದಲ್ಲಿ ಮಾತನಾಡಿದ ಅವರು, ಸಂಪುಟದ ಒಳಗೆ ಇದ್ದು ಈಶ್ವರಪ್ಪ ಮಾತಾಡುವುದು ಸರಿಯಲ್ಲ. ಈಶ್ವರಪ್ಪನವರು ರಾಜ್ಯಪಾಲರಿಗೆ ದೂರು ಕೊಟ್ಟಿದ್ದು, ನನಗೆ ನೋವು ತಂದಿದೆ ಎಂದಿದ್ದಾರೆ.
ಈಶ್ವರಪ್ಪ ನಮ್ಮ ಜಿಲ್ಲೆಯವರೇ ಆಗಿರಬಹುದು. ಆದರೆ ಅವರು ದೂರು ಕೊಟ್ಟಿದ್ದು ಸರಿಯಲ್ಲ. ಮುಖ್ಯಮಂತ್ರಿಗಳಿಗೆ ಪರಮಾಧಿಕಾರ ಇದೆ. ಇಲಾಖೆಗಳಿಗೆ ಅನುದಾನ ಕೊಡುವ ವಾಪಸ್ ಪಡೆಯುವ ಅಧಿಕಾರ ಸಿಎಂಗೆ ಇದೆ. ಪ್ರಧಾನಿಯವರ ಬಳಿ ಯಾವುದೇ ಖಾತೆ ಇಲ್ಲ. ಹಾಗಂತ ಇಲಾಖೆಗಳ ವಿಚಾರದಲ್ಲಿ ಪ್ರಧಾನಿ ಮಧ್ಯಪ್ರವೇಶ ಮಾಡಬಾರದು ಅಂತ ಇದ್ಯಾ?. ಈಶ್ವರಪ್ಪ ನವರ ಹೇಳಿಕೆ, ದೂರು ಪಕ್ಷಕ್ಕೆ ಮುಜುಗರ ತಂದಿದೆ ಎಂದು ಕಿಡಿಕಾರಿದರು.
ಈಶ್ವರಪ್ಪ ಹೇಳಿಕೆ ಸಮುದಾಯದವರೆಗೂ ಹೋಗಿ ಮುಟ್ಟಬಹುದು. ಈಶ್ವರಪ್ಪನವರು ಸಿಎಂ ಜೊತೆ ಮಾತಾಡಿ ಬಗೆಹರಿಸಿಕೊಳ್ಳಲಿ. ವಿಷಯ ಎಲ್ಲಿಂದ ಎಲ್ಲಿಗೋ ಹೋಗಿ ಮುಟ್ಟುವ ಅಪಾಯ ಇದೆ. ಈಶ್ವರಪ್ಪನವರು ಮುಖ್ಯಮಂತ್ರಿಗಳ ಜೊತೆ ಕುಳಿತು ಮಾತನಾಡಲಿ. ರಾಜ್ಯಪಾಲರು ಬಗೆಹರಿಸಲಿ ಅನ್ನೋ ನಿಲುವು ಒಳ್ಳೆಯದಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಯತ್ನಾಳ್, ಈಶ್ವರಪ್ಪರಂತೆ ಮಾತಾಡುವ ವಿಚಾರದಲ್ಲಿ ಪಕ್ಷ ಗಟ್ಟಿ ನಿಲುವು ತಳೆಯಬೇಕು. ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ದುರ್ಬಲ ನಾಯಕರಲ್ಲ. ಇಂಥ ಸಂದರ್ಭದಲ್ಲಿ ಅವರು ಸುಮ್ಮನಿರೋದು ಸರಿಯಲ್ಲ ಎಂದು ಪರೋಕ್ಷವಾಗಿ ಕ್ರಮ ಕೈಗೊಳ್ಳುವಂತೆ ಆಯನೂರು ಮಂಜುನಾಥ್ ಆಗ್ರಹಿಸಿದರು.