ಕರ್ನಾಟಕ

karnataka

ETV Bharat / state

ಕೋಟಿ ಮೊತ್ತದ ಅಪಘಾತ ವಿಮೆಗೆ ಸಿಕ್ತು ಅವಾರ್ಡ್: ತ್ರಿಶತಕ ದಾಟಿದ ಕೆಎಸ್​ಆರ್​ಟಿಸಿ ಪ್ರಶಸ್ತಿ ಸಂಖ್ಯೆ - ಸ್ಕಾಚ್ ಆರ್ಡರ್ ಆಫ್ ಮೆರಿಟ್

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಾರಿಗೆ ಸುರಕ್ಷಾ ವಿಮಾ ಯೋಜನೆಗೆ ಸ್ಕಾಚ್ ಆರ್ಡರ್ ಆಫ್ ಮೆರಿಟ್ ಮತ್ತು ಸ್ಕಾಚ್ ಗವರ್ನೆನ್ಸ್ ಪ್ರಶಸ್ತಿ ಲಭಿಸಿದೆ. ಈ ಮೂಲಕ ಒಟ್ಟು ಪ್ರಶಸ್ತಿಗಳ ಸಂಖ್ಯೆ ಮುನ್ನೂರರ ಗಡಿ ದಾಟಿದೆ.

award-for-ksrtc-intransport-insurance-scheme-total-number-of-awards-crossed-300
ಕೋಟಿ ಮೊತ್ತದ ಅಪಘಾತ ವಿಮೆಗೆ ಸಿಕ್ತು ಅವಾರ್ಡ್: ತ್ರಿಶತಕ ದಾಟಿದ ಕೆಎಸ್​ಆರ್​ಟಿಸಿ ಪ್ರಶಸ್ತಿ ಸಂಖ್ಯೆ

By ETV Bharat Karnataka Team

Published : Oct 3, 2023, 6:46 PM IST

ಬೆಂಗಳೂರು :ಇಡೀ ದೇಶದಲ್ಲಿ ಮಾದರಿ ಎನ್ನುವಂತೆ ಸಾರಿಗೆ ಸಿಬ್ಬಂದಿಗೆ ಕೋಟಿ ರೂ.ಮೊತ್ತದ ಅಪಘಾತ ವಿಮಾ ಯೋಜನೆ ಜಾರಿಗೊಳಿಸಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಮತ್ತೆರಡು ಪ್ರಶಸ್ತಿ ಲಭಿಸಿದೆ. ಕೆಎಸ್​ಆರ್​ಟಿಸಿಯ ಸಾರಿಗೆ ಸುರಕ್ಷಾ ವಿಮಾ ಯೋಜನೆಗೆ ಸ್ಕಾಚ್ ಆರ್ಡರ್ ಆಫ್ ಮೆರಿಟ್ ಮತ್ತು ಸ್ಕಾಚ್ ಗವರ್ನೆನ್ಸ್ ಪ್ರಶಸ್ತಿ ಲಭಿಸಿದೆ. ಈ ಮೂಲಕ ಕೆಎಸ್ಆರ್​​ಟಿಸಿ ಗಳಿಸಿದ ಪ್ರಶಸ್ತಿಗಳ ಸಂಖ್ಯೆ ತ್ರಿಶತಕವನ್ನು ದಾಟಿದೆ.

ಸಾರಿಗೆ ಸೇವೆಯಲ್ಲಿ ಸದಾ ಹೊಸತನ್ನು ಪರಿಚಯಿಸುತ್ತಾ ದೇಶದ ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ಹೊಸ ಹೊಸ ಮೈಲಿಗಲ್ಲು ಸ್ಥಾಪಿಸುತ್ತಿರುವ ಕೆಎಸ್ಆರ್​​ಟಿಸಿ ಮುಡಿಗೇರಿದ ಪ್ರಶಸ್ತಿಗಳ ಸಂಖ್ಯೆ 300 ದಾಟಿದ್ದು ಪ್ರಶಸ್ತಿಗಳ ಗಳಿಕೆಯಲ್ಲೂ ದಾಖಲೆ ನಿರ್ಮಿಸಿದೆ‌. ಕೆಎಸ್ಆರ್​​ಟಿಸಿ ಅನುಷ್ಠಾನ ಮಾಡಿರುವ ಕಾರ್ಮಿಕ ಕಲ್ಯಾಣ ಹಾಗೂ ಸಾಮಾಜಿಕ ಉಪಯುಕ್ತತೆಯ 3 ಉಪಕ್ರಮಗಳಿಗೆ ಸ್ಕಾಚ್ ಆರ್ಡರ್ ಆಫ್ ಮೆರಿಟ್ ಹಾಗೂ ಒಂದು ಸ್ಕಾಚ್ ಗವರ್ನೆಸ್ ಪ್ರಶಸ್ತಿ ಲಭಿಸಿದೆ.

ದೆಹಲಿ ಮೂಲದ ಸ್ವತಂತ್ರ ವಿಚಾರ ತಜ್ಞ ಸಂಸ್ಥೆಯಾದ ಸ್ಕಾಚ್ ಗ್ರೂಪ್ ಇಂಡಿಯಾ 2003ರಿಂದ ಸ್ಕಾಚ್ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ. ವಿವಿಧ ಸಂಸ್ಥೆಗಳು ಸಾಧಿಸಿರುವ ಉತ್ತಮ ಆಡಳಿತ ನಿರ್ವಹಣೆ, ಹಣಕಾಸು, ತಾಂತ್ರಿಕತೆ ಅಳವಡಿಕೆ ಹಾಗೂ ಆಂತರಿಕ ಬೆಳವಣಿಗೆಗೆ ಈ ಪ್ರಶಸ್ತಿ ನೀಡಲಾಗುತ್ತದೆ. ಸ್ಕಾಚ್ ಸಂಸ್ಥೆಯು ತನ್ನ ಅತ್ಯುನ್ನತ ಪ್ರಶಸ್ತಿಗಳನ್ನು ಸಂಸ್ಥೆಗಳು ಮಾಡಿರುವ ಅತ್ಯುತ್ತಮ ಸಾಧನೆ ಹಾಗೂ ಅವುಗಳಿಂದ ಉಂಟಾಗಿರುವ ಪರಿಣಾಮಗಳನ್ನು ಆಧರಿಸಿ ಆಯ್ಕೆ ಮಾಡಿ ನೀಡುತ್ತಿದ್ದು, ಈ ಬಾರಿ ಕೆಎಸ್ಆರ್​​ಟಿಸಿಗೆ ಈ ಪ್ರಶಸ್ತಿಗಳು ಲಭಿಸಿವೆ.

ಪ್ರಶಸ್ತಿ ವಿವರ:

1) ನಿಗಮದ ಸಿಬ್ಬಂದಿಗಳಿಗೆ ಜಾರಿಗೊಳಿಸಿರುವ ರೂ.1 ಕೋಟಿ ಅಪಘಾತ ಪರಿಹಾರ ವಿಮಾ ಯೋಜನೆ (ಸಾರಿಗೆ ಸುರಕ್ಷಾ ವಿಮಾ ಯೋಜನೆ)ಗೆ ಸ್ಕಾಚ್‌ ಅರ್ಡರ್‌ ಅಫ್‌ ಮೆರಿಟ್ ಪ್ರಶಸ್ತಿ ಮತ್ತು ಸ್ಕಾಚ್ ಗವರ್ನೆಸ್ ಪ್ರಶಸ್ತಿ.

2) ವಾಹನಗಳ ಪುನಶ್ಚೇತನ ಯೋಜನೆಗೆ ಸ್ಕಾಚ್‌ ಅರ್ಡರ್‌ ಅಫ್‌ ಮೆರಿಟ್ ಪ್ರಶಸ್ತಿ.

3) ಬಿಸಿನೆಸ್ ಇಂಟಲಿಜೆಂಟ್‌ ಡ್ಯಾಶ್‌ ಬೋರ್ಡ್ ಗೆ ಸ್ಕಾಚ್‌ ಅರ್ಡರ್‌ ಅಫ್‌ ಮೆರಿಟ್ ಪ್ರಶಸ್ತಿ ಲಭಿಸಿದೆ.

ಅಂತಾರಾಜ್ಯ ಬ್ಯಾಡ್ಮಿಂಟನ್​ನಲ್ಲಿ ಕೆಎಸ್​ಆರ್​ಟಿಸಿ ರನ್ನರ್ ಅಪ್ :ಗುಜರಾತ್​ನಲ್ಲಿ ನಡೆದ ದೇಶದಲ್ಲಿನ ಸಾರ್ವಜನಿಕ ಸಾರಿಗೆ ಸಂಸ್ಥೆಗಳ ಅಧಿಕಾರಿ/ಸಿಬ್ಬಂದಿಗಳಿಗೆ ಅಂತರ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಬ್ಯಾಡ್ಮಿಂಟನ್, ವಾಲಿಬಾಲ್ ಪಂದ್ಯಾವಳಿಗಳಲ್ಲಿ ಕೆಎಸ್​ಆರ್​ಟಿಸಿಯ ಪುರುಷರ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ತಂಡ ಹಾಗೂ ಸಿಂಗಲ್ಸ್ ಪಂದ್ಯಾವಳಿಗಳಲ್ಲಿ ರನ್ನರ್ ಅಪ್ ಸ್ಥಾನ ಪಡೆದಿದೆ.

ನವದೆಹಲಿಯ ರಸ್ತೆ ಸಾರಿಗೆ ಸಂಸ್ಥೆಗಳ ಒಕ್ಕೂಟ ಆಯೋಜನೆ ಮಾಡಿದ್ದ ಪಂದ್ಯಾವಳಿಯಲ್ಲಿ ಬ್ಯಾಡ್ಮಿಂಟನ್ ತಂಡದಲ್ಲಿ ಭಾಗವಹಿಸಿ ರನ್ನರ್ ಅಪ್ ಪ್ರಶಸ್ತಿ ಪಡೆದ ತಂಡದ ಆಟಗಾರರಾದ ಕೆಎಸ್​ಆರ್​ಟಿಸಿ ಮುಖ್ಯ ಕಾನೂನು ಅಧಿಕಾರಿ ಪ್ರಸನ್ನಕುಮಾರ್ ಬಾಳಾನಾಯ್ಕ, ಮಂಗಳೂರು ವಿಭಾಗದ ಹಿರಿಯ ವಿಭಾಗ ನಿಯಂತ್ರಣಾಧಿಕಾರಿ ಎಂ. ರಾಜೇಶ್ ಶೆಟ್ಟಿ, ಸಿಬ್ಬಂದಿ ಮೇಲ್ವಿಚಾರಕ ಕೆ. ಅಶ್ವಥನಾರಾಯಣ, ಪಾರುಪತ್ತೆಗಾರ ವಿ. ಹರೀಶ್ ಮತ್ತು ಚಾಲಕ ಕಂ ನಿರ್ವಾಹಕ ಜಿ.ಎಸ್. ಜಗನ್ನಾಥ ಇವರುಗಳನ್ನು ಕೆಎಸ್​ಆರ್​ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ ಅನ್ಬುಕುಮಾರ್ ಅಭಿನಂದಿಸಿದರು.

ವಾಲಿಬಾಲ್‌ ತಂಡದಲ್ಲಿ ನಿಗಮದ ಕಾನ್​ಸ್ಟೇಬಲ್​ ಕುಪ್ಪುಸ್ವಾಮಿ ವಿ., ಸಹಾಯಕ ಸುರೇಶ ಪಿ.ವಿ, ಚಾಲಕ-ಕಂ-ನಿರ್ವಾಹಕ ದಿವಾಕರ ಟಿ.ಎಂ., ಚಾಲಕ ರಾಮಾಂಜಿನಪ್ಪ, ತಾಂತ್ರಿಕ ಸಹಾಯಕರಾದ ಆರ್.‌ ರಾಹುಲ್‌, ಮಹದೇವಯ್ಯ, ನಿಗಮದ ಪೇದೆ ನವೀನ್‌ ಕುಮಾರ್‌ ಎಂ.ಎ., ಚಾಲಕ ಕಂ ನಿರ್ವಾಹಕ
ಪ್ರಸನ್ನಕುಮಾರ್‌ ಎಸ್., ಮತ್ತು ಸಹಾಯಕ ಕುಶಲಕರ್ಮಿ ಜೇಮ್ಸ್‌ ಪಾಂಡ್ಯನ್‌ ಭಾಗವಹಿಸಿದ್ದು ಇವರನ್ನೂ ಅಭಿನಂದಿಸಲಾಯಿತು.

ಕ.ರಾ.ರ.ಸಾ.ನಿಗಮದ ವತಿಯಿಂದ ಬ್ಯಾಡ್ಮಿಂಟನ್ ಮತ್ತು ವಾಲಿಬಾಲ್ ಪಂದ್ಯಾವಳಿಗಳಲ್ಲಿ ಭಾಗವಹಿಸಿದ ಎಲ್ಲಾ 15 ಕ್ರೀಡಾಪಟುಗಳಿಗೆ ತಲಾ ರೂ. 5000/- ನಗದು ಪುರಸ್ಕಾರವನ್ನು ನಿಗಮದ ಎಂಡಿ ವಿ.ಅನ್ಬುಕುಮಾರ್ ಘೋಷಣೆ ಮಾಡಿ, ಶುಭ ಹಾರೈಸಿದರು. ಕ್ರೀಡೆಯಲ್ಲಿ ಸೋಲು ಗೆಲುವು ಸಹಜ, ಭಾಗವಹಿಸುವುದು ಮುಖ್ಯ ಎಂದು ಉತ್ತೇಜನಾತ್ಮಕ ನುಡಿಗಳ ಮೂಲಕ ಕ್ರೀಡಾ ಸ್ಪೂರ್ತಿ ತುಂಬಿದರು.

ಇದನ್ನೂ ಓದಿ :ಕೆಎಸ್​ಆರ್​ಟಿಸಿ ಚೊಚ್ಚಲ 'ಇವಿ ಪವರ್ ಪ್ಲಸ್' ಬಸ್​ಗೆ ರಾಷ್ಟ್ರೀಯ ಪ್ರಶಸ್ತಿ

ABOUT THE AUTHOR

...view details