ಬೆಂಗಳೂರು: ಮೈತ್ರಿ ಅಭ್ಯರ್ಥಿಗಳನ್ನು ಬೆಂಬಲಿಸಲು ಚಿಂತಕರು ಮುಂದಾಗಿದ್ದಾರೆ. ಲೇಖಕರು ಹಾಗೂ ಚಿಂತಕರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಸಭೆಯಲ್ಲಿ ಹೆಚ್. ಎಸ್. ದೊರೆಸ್ವಾಮಿ ಮಾತನಾಡಿ, ಮುಂದಿನ ದಿನಗಳಲ್ಲಿ ಪ್ರಜಾಪ್ರಭುತ್ವ ಉಳಿಯುತ್ತದೆಯೇ ಎಂಬ ಆತಂಕ ಶುರುವಾಗಿದೆ. ಪ್ರಧಾನಿ ನರೇಂದ್ರ ಮೋದಿ ಪರಮಾಧಿಕಾರದ ಧೋರಣೆ ತೋರುತ್ತಿದ್ದಾರೆ . ಪ್ರಜಾಪ್ರಭುತ್ವಕ್ಕಿಂತ ವ್ಯಕ್ತಿಯ ಸರ್ವಾಧಿಕಾರ ನಡೆಯುತ್ತಿದೆ. ಮತದಾನ ಎಂಬುದು ಪವಿತ್ರವಾದದ್ದು. ಹೀಗಾಗಿ, ಮತವನ್ನು ಎಸೆಯದೆ, ಮತ ಹಾಕುವ ಅಭ್ಯರ್ಥಿಯ ಯೋಗ್ಯತೆಯನ್ನು ಪರಿಗಣಿಸುವ ಮೂಲಕ ಆಯ್ಕೆ ಮಾಡಬೇಕು ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಬೆಂಬಲಿಗರು ದೇಶದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಕೇವಲ ಸೈನಿಕರ ಬಲಿದಾನದ ಕುರಿತು ಮಾತನಾಡುತ್ತಾ, ದೇಶದ ಯುವಕರನ್ನು ದಾರಿ ತಪ್ಪಿಸುತ್ತಿದ್ದಾರೆ. ಅಲ್ಲದೆ ಬಿಜೆಪಿಗೆ ಮತ ನೀಡದವರು ದೇಶದ್ರೋಹಿಗಳು ಎಂದು ಬಿಂಬಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪ್ರಜಾಪ್ರಭುತ್ವ ಉಳಿಯಲಿದೆಯೇ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಿದೆ ಎಂದು ಪ್ರೊ. ಮರುಳಸಿದ್ದಪ್ಪ ಆತಂಕ ವ್ಯಕ್ತಪಡಿಸಿದರು.
ಸಭೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್. ದೊರೆಸ್ವಾಮಿ, ಪ್ರೊ.ಮರುಳಸಿದ್ದಪ್ಪ, ಎಸ್. ಜಿ. ಸಿದ್ದರಾಮಯ್ಯ, ಪ್ರೊ. ಬಿ .ಕೆ. ಚಂದ್ರಶೇಖರ್, ಡಾ. ಕೆ. ಶರೀಫ, ಡಾ. ವಿಜಯಮ್ಮ, ಲಲಿತಾ ನಾಯಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.