ಆನೇಕಲ್:ತಾಲೂಕಿನ ಸರ್ಜಾಪುರ ಬಳಿಯಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಪ್ಲಿಮೆಂಟರಿ ನ್ಯುರ್ಟಿಷಿಯನ್ ಪ್ರೊಡಕ್ಷನ್ ಸೆಂಟರ್ ಮೇಲೆ ಬೆಂಗಳೂರು ಗ್ರಾಮಾಂತರ ಸಂಸದ ಡಿ ಕೆ ಸುರೇಶ್ ಹಾಗೂ ಶಾಸಕ ಬಿ ಶಿವಣ್ಣ ದಾಳಿ ನಡೆಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಪ್ಲಿಮೆಂಟರಿ ನ್ಯುರ್ಟಿಷಿಯನ್ ಪ್ರೊಡಕ್ಷನ್ ಸೆಂಟರ್ನಲ್ಲಿ ಬಿಜೆಪಿಯ ಸಿಂಬಲ್ ಹಾಗೂ ಮುಖಂಡರ ಭಾವಚಿತ್ರವಿರುವ ಪ್ಯಾಕೇಟ್ ಮಾಡಿ ಅಂಗನವಾಡಿಗೆ ಸರಬರಾಜು ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಮೇರೆಗೆ ದಾಳಿ ನಡೆಸಲಾಯಿತು. ಬಳಿಕ ಬಿಜೆಪಿಯ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಮಿತಿಮೀರಿತು. ಪೊಲೀಸರು ಎರಡು ಗುಂಪುಗಳನ್ನು ಚದುರಿಸಿ ಹತೋಟಿಗೆ ತಂದರು.
ಬಿಜೆಪಿ ಹೆಸರಿನಲ್ಲಿ ಸರ್ಕಾರದ ಪೌಷ್ಠಿಕ ಆಹಾರ ವಿತರಣೆ.. ಬಳಿಕ ಸಂಸದ ಡಿ ಕೆ ಸುರೇಶ್ ಮಾತನಾಡಿ, ಬಡ ಅಂಗನವಾಡಿ ಮಕ್ಕಳಿಗೆ ನೀಡುವ ಪದಾರ್ಥಗಳ ಮೇಲೆ ಬಿಜೆಪಿಯವರು ಕನ್ನ ಹಾಕಲು ಮುಂದಾಗಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಕೋವಿಡ್-19 ಹೆಸರಿನಲ್ಲಿ ಅಂಗನವಾಡಿ ಮಕ್ಕಳಿಗೆ ನೀಡುತ್ತಿದ್ದ ಪೌಷ್ಠಿಕ ಆಹಾರದ ಪ್ಯಾಕೇಟ್ಗಳ ಮೇಲೆ ಬಿಜೆಪಿಯ ಸಿಂಬಲ್ ಹಾಕಿ ರಾಜ್ಯಾದ್ಯಂತ ಹಂಚುತ್ತಿದ್ದಾರೆ. ಸಿಎಂ ಯಡಿಯೂರಪ್ಪ ಅವರನ್ನು ಅಕ್ರಮಗಳಲ್ಲಿ ಸಿಲುಕಿಸಿ ಸರ್ಕಾರ ಬೀಳಿಸುವ ಕುತಂತ್ರವನ್ನು ಬಿಜೆಪಿಯ ಮುಖಂಡರು ಹಾಗೂ ಕಾರ್ಯಕರ್ತರು ಮಾಡುತ್ತಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ.
ಬಿಜೆಪಿ ನಾಯಕರಿಗೆ ಎಲ್ಲಾ ವಿಚಾರ ತಿಳಿದಿದ್ದರೂ ಸಹ ಯಾಕೆ ಸುಮ್ಮನೆ ಇದ್ದಾರೆಂಬುದು ಗೊತ್ತಿಲ್ಲ. ಬಿಜೆಪಿ ಹೆಸರನ್ನು ಹೇಳಿಕೊಂಡು ಮುಖಂಡರು ಹಾಗೂ ಕಾರ್ಯಕರ್ತರು ದಂಧೆಗೆ ಇಳಿದಿದ್ದಾರೆ. ಬಡವರ ಅನ್ನಕ್ಕೆ ಕೈ ಹಾಕಿರುವ ಬಿಜೆಪಿಯವರಿಗೆ ನಾಚಿಕೆಯಾಗಬೇಕು, ಈ ಅಕ್ರಮಕ್ಕೆ ಹೊಣೆಗಾರಿಕೆಯಾಗಿರುವವರು ಕೂಡಲೇ ರಾಜೀನಾಮೆ ನೀಡಬೇಕು. ಸರ್ಕಾರಕ್ಕೆ ಈ ಕೂಡಲೇ ಅವರನ್ನು ಬಂಧಿಸಿ ಕಾನೂನು ರೀತಿ ಕ್ರಮ ಜರುಗಿಸಬೇಕು, ಇಲ್ಲವಾದರೆ ಇಂತಹ ಅಕ್ರಮ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.