ಬೆಂಗಳೂರು :ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ಆರೋಪ ಪ್ರಕರಣವನ್ನು ಕಾನೂನಾತ್ಮಕವಾಗಿ ತನಿಖೆ ಮಾಡಲು ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ವಿಧಾನಸಭೆಯಲ್ಲಿ ಇಂದು ತಿಳಿಸಿದ್ದಾರೆ.
ಶೂನ್ಯ ವೇಳೆಯಲ್ಲಿ ಕಾಂಗ್ರೆಸ್ ಶಾಸಕ ಟಿ ಡಿ ರಾಜೇಗೌಡ ಅವರು ಪ್ರಸ್ತಾಪಿಸಿದ ವಿಚಾರಕ್ಕೆ ಉತ್ತರಿಸಿದ ಸಚಿವರು, ಬಾಲಕಿ ಮೇಲೆ ಅತ್ಯಾಚಾರವೆಸಗಿರುವುದು ಅತ್ಯಂತ ಹೇಯ ಕೃತ್ಯ. ಈ ಬಗ್ಗೆ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು.
ಈ ವಿಚಾರದಲ್ಲಿ ಯಾವುದೇ ಪ್ರಭಾವಕ್ಕೊಳಗಾಗಿಲ್ಲ. ಯಾರೂ ಒತ್ತಡ ತಂದಿಲ್ಲ. ಪೊಲೀಸರು ಅವರ ಕೆಲಸ ಮಾಡುತ್ತಾರೆ. ಕಾನೂನಾತ್ಮಕವಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲು ಕ್ರಮ ಕೈಗೊಳ್ಳುತ್ತಾರೆ.
17 ಜನರ ಮೇಲೆ ಪ್ರಕರಣ ದಾಖಲಾಗಿದೆ. ನಿಷ್ಪಕ್ಷಪಾತ ತನಿಖೆಯಾಗಲಿದೆ. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮೇಲ್ವಿಚಾರಣೆ ನಡೆಸಲು ಸೂಚನೆ ನೀಡಲಾಗಿದೆ ಎಂದರು.
ಇದಕ್ಕೂ ಮುನ್ನ ಮಾತನಾಡಿದ ರಾಜೇಗೌಡ ಅವರು, ಶೃಂಗೇರಿಯಲ್ಲಿ ನಡೆದ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದ ಹಿಂದೆ ಪ್ರಭಾವಿಗಳಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಈ ವೇಳೆ ಸಚಿವರು ಮಾತನಾಡಿ, ಈ ಪ್ರಕರಣದಲ್ಲಿ ಯಾರೂ ಕೂಡ ನನ್ನ ಮೇಲೆ ಒತ್ತಡ ತಂದಿಲ್ಲ. ಪೊಲೀಸರು ಪ್ರಾಮಾಣಿಕವಾಗಿ ಕೆಲಸ ಮಾಡುತಿದ್ದಾರೆ. ಈ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.
17 ಜನರ ಮೇಲೆ ಕ್ರಮ ಕೈಗೊಳ್ಳಬೇಕೆನ್ನುವುದು ಸರಿ ಇದೆ. ಆದರೆ, ಪ್ರಕರಣದಿಂದ ಯಾರನ್ನು ಕೈ ಬಿಡಬೇಕು. ಸೇರಿಸಬೇಕು ಎಂದು ನಾವು ನಿರ್ಧರಿಸಲು ಸಾಧ್ಯವಿಲ್ಲ ಎಂದರು.