ಬೆಂಗಳೂರು:ಕೋವಿಡ್ನಿಂದಾಗಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ನೇಕಾರರಿಗೆ ನೆರವು ನೀಡುವ ನಿಟ್ಟಿನಲ್ಲಿ ಇನ್ನು ಮುಂದೆ ಕೈಮಗ್ಗಗಳಿಂದ ತಯಾರಿಸಿದ ಶಾಲಾ ಸಮವಸ್ತ್ರಗಳನ್ನು ಖರೀದಿಸಲು ಸರ್ಕಾರ ಚಿಂತನೆ ನಡೆಸಲಿದೆ ಎಂದು ಕೈಮಗ್ಗ ಮತ್ತು ಜವಳಿ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಶ್ರೀಮಂತ ಪಾಟೀಲ ತಿಳಿಸಿದರು.
ವಿಧಾನಸಭೆಯಲ್ಲಿ ಇಂದು ಪ್ರಶ್ನೋತ್ತರ ವೇಳೆ ಬಿಜೆಪಿ ಶಾಸಕ ಸಿದ್ದು ಸವದಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ಚೆನ್ನೈನಲ್ಲಿ ಅಲ್ಲಿನ ನೇಕಾರರು ತಯಾರಿಸಿದ ಬಟ್ಟೆಗಳನ್ನು ಶಿಕ್ಷಣ ಇಲಾಖೆ ಖರೀದಿಸಿ ಮಕ್ಕಳಿಗೆ ವಿತರಿಸುತ್ತಿದೆ. ಇದೇ ಮಾದರಿಯನ್ನು ನಾವು ಅಳವಡಿಸಿಕೊಳ್ಳುವ ಸಂಬಂಧ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಹಾಗೂ ಆಯುಕ್ತರನ್ನು ಅಲ್ಲಿಗೆ ಕಳುಹಿಸಿಕೊಡಲಾಗಿತ್ತು ಎಂದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಚರ್ಚೆ ಮಾಡಿ ಇನ್ನು ಮುಂದೆ ನೇಕಾರರು ತಯಾರಿಸಿದ ಬಟ್ಟೆಗಳನ್ನು ಖರೀದಿಸಿ ಶಾಲಾ ಸಮವಸ್ತ್ರಕ್ಕೆ ಬಳಸಿಕೊಳ್ಳುವ ಚಿಂತನೆ ಇದೆ ಎಂದರು. ಬೇರೆ ರಾಜ್ಯದವರು ಬಂದರೆ ಹೆಚ್ಚಿನ ಆರ್ಥಿಕ ಹೊರೆ ಬೀಳಲಿದೆ. ನಮ್ಮ ರಾಜ್ಯದ ನೇಕಾರರೇ ತಯಾರಿಸಿದ ಬಟ್ಟೆಗಳನ್ನು ಖರೀದಿಸುವುದರಿಂದ ಇವರಿಗೆ ಅನುಕೂಲವಾಗಲಿದೆ ಎಂದರು.
ಕೋವಿಡ್ ನಂತರ ತೀವ್ರ ಸಂಕಷ್ಟದಲ್ಲಿರುವ ನೇಕಾರರಿಗೆ ಅನೇಕ ರೀತಿಯ ಸೌಲಭ್ಯಗಳನ್ನು ಕಲ್ಪಿಸಿದೆ. ನೇಕಾರರು ತಯಾರಿಸಿದ 6 ಲಕ್ಷ ಸೀರೆಗಳನ್ನು ಖರೀದಿಸಿ ಕೋವಿಡ್ ವಾರಿಯರ್ಸ್‍ಗೆ ವಿತರಣೆ ಮಾಡಬೇಕೆಂದು ಆರ್ಥಿಕ ಇಲಾಖೆಗೆ ಪತ್ರ ಬರೆದಿದ್ದೆವು. ಆದರೆ, ಹಣಕಾಸು ಇಲಾಖೆ ಇದನ್ನು ತಿರಸ್ಕರಿಸಿದೆ. ನೇಕಾರರಿಗೆ ಆರ್ಥಿಕ ಬೆಂಬಲ ನೀಡುವ ಸಲುವಾಗಿ ವಿದ್ಯುತ್ ಚಾಲಿತ ಘಟಕ, ಮಗ್ಗಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಒಂದು ವರ್ಷಕ್ಕೆ ಎರಡು ಸಾವಿರ ಪರಿಹಾರ ನೀಡುತ್ತಿದ್ದೇವೆ. ಈವರೆಗೂ 59,779 ಫಲಾನುಭವಿಗಳು ಸೇವಾ ಸಿಂಧು ಫೋರ್ಟಲ್‍ನಲ್ಲಿ ಅರ್ಜಿ ಸಲ್ಲಿಸಿದ್ದು, 51,249 ಫಲಾನುಭವಿಗಳಿಗೆ ಡಿಬಿಟಿ ಮೂಲಕ ಹಣ ವರ್ಗಾಯಿಸಲಾಗಿದೆ ಎಂದು ತಿಳಿಸಿದರು.
ಎಂಎಸ್‍ಎಂಇ ಅಡಿಯಲ್ಲಿ ಬರುವ ಕೈಮಗ್ಗಗಳಿಗೆ ವಿದ್ಯುತ್ ಬಿಲ್‍ನ ನಿಗದಿತ ಶುಲ್ಕವನ್ನು ಮನ್ನಾ ಮಾಡಲಾಗಿದೆ. ವಿವಿಧ ಸಹಕಾರಿ ಬ್ಯಾಂಕುಗಳಲ್ಲಿ ಒಂದು ಲಕ್ಷದವರೆಗೆ ಪಡೆದಿದ್ದ ಅಸಲು ಮತ್ತು ಬಡ್ಡಿಯನ್ನು ಮನ್ನಾ ಮಾಡಲಾಗಿದೆ. ಈಗಾಗಲೇ 1586 ನೇಕಾರರ ಫಲಾನುಭವಿಗಳಿಗೆ 5,42,06,919 ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ನೇಕಾರರು ತಯಾರಿಸಿದ 6 ಲಕ್ಷ ಸೀರೆಗಳನ್ನು ಖರೀದಿಸಬೇಕೆಂದು ಸಲ್ಲಿಸಲಾಗಿದ್ದ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆ ತಿರಸ್ಕರಿಸಿದ್ದರೂ ಮತ್ತೊಮ್ಮೆ ಸಲ್ಲಿಸಲಾಗುವುದು. ಅಲ್ಲದೇ ಇಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರು ಅಸಂಘಟಿತ ವಲಯಕ್ಕೂ ಸೇರ್ಪಡೆಯಾಗುತ್ತಿದ್ದಾರೆ. ನಮ್ಮ ಸರ್ಕಾರ ನೇಕಾರರ ಹಿತ ಕಾಪಾಡಲು ಬದ್ಧವಾಗಿದೆ ಎಂದು ಭರವಸೆ ನೀಡಿದರು.