ಬೆಂಗಳೂರು : ರಾಜ್ಯಕ್ಕೆ ನೀಡಬೇಕಾದ ಹಣದ ಪಾಲನ್ನು ನೀಡದೇ ಕೇಂದ್ರ ಸರ್ಕಾರ ಅನ್ಯಾಯ ಮಾಡಿದ್ದು, ಇದನ್ನು ಸರಿಪಡಿಸಿಕೊಳ್ಳದಿದ್ದರೆ ಸರ್ಕಾರ ನಡೆಸಲು ಆಗುವುದಿಲ್ಲ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ವಿಧಾನಸಭೆಯಲ್ಲಿ ಇಂದು ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪರಿಸ್ಥಿತಿಯನ್ನು ನೋಡಿದರೆ ಸರ್ಕಾರಿ ನೌಕರರ ವೇತನ, ಮಾಡಿರುವ ಸಾಲದ ಮೇಲಿನ ಅಸಲು, ಬಡ್ಡಿ ತೀರಿಸುವುದು, ಆಡಳಿತಾತ್ಮಕ ವೆಚ್ಚ ಭರಿಸುವುದನ್ನು ಬಿಟ್ಟು ಬೇರೆ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ವಿಧಾನಸಭೆಯಲ್ಲಿಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಸಿದ್ದರಾಮಯ್ಯ ಸರ್ಕಾರಿ ನೌಕರರ ವೇತನ ನೀಡಲು, ಸಾಲದ ಮೇಲಿನ ಅಸಲು - ಬಡ್ಡಿ ತೀರಿಸಲು,ಆಡಳಿತಾತ್ಮಕ ವೆಚ್ಚ ಭರಿಸಲು ನಾವು ಇಲ್ಲಿಗೆ ಬರುವುದರಲ್ಲಿ ಯಾವುದೇ ಅರ್ಥವಿಲ್ಲ. ರಾಜ್ಯದ ಅಭಿವೃದ್ಧಿ ನಮ್ಮಿಂದ ಸಾಧ್ಯವಾಗದಿದ್ದರೆ ನಮಗೆ ಗೌರವವೂ ಇರುವುದಿಲ್ಲ. ಯಡಿಯೂರಪ್ಪ ಸರ್ಕಾರ ಸಾಲದ ಸರ್ಕಾರ. ಈ ಬಾರಿ ಅದು 57ಸಾವಿರ ಕೋ.ರೂ ಸಾಲ ಮಾಡುತ್ತಿದೆ. ಇದೇ ವೇಗದಲ್ಲಿ ಅದು ಸಾಲ ಮಾಡುತ್ತಿದ್ದರೆ ಸರ್ಕಾರದ ಅವಧಿ ಮುಗಿಯುವುದರ ಒಳಗೆ ಸಾಲದ ಪ್ರಮಾಣ 5.65 ಲಕ್ಷ ಕೋಟಿ ರೂ.ಗೆ ಏರುತ್ತದೆ. ನೀವು ಈ ಪ್ರಮಾಣದ ಸಾಲ ಮಾಡುವ ಪರಿಸ್ಥಿತಿ ಯಾಕೆ ಬಂದಿದೆ ಎಂಬ ಸತ್ಯ ಕಣ್ಣ ಮುಂದಿದೆ ಎಂದರು.
ಕೇಂದ್ರ ಸರ್ಕಾರದಿಂದ ನಮಗೆ ಸಿಗಬೇಕಿದ್ದ ಅನುದಾನ ಕಡಿತವಾಗಿದೆ. ಜಿಎಸ್‍ಟಿಯ ಮೂಲಕ ನಮಗೆ ದೊರೆಯಬೇಕಿದ್ದ ಪಾಲು ಸಿಕ್ಕಿಲ್ಲ. ಯೋಜನಾ ಆಯೋಗ ನಮಗೆ ಕಡಿಮೆ ಪಾಲನ್ನು ನಿಗದಿ ಮಾಡಿದೆ. ಈ ಅನ್ಯಾಯ ಸರಿಪಡಿಸಲು ಕೇಂದ್ರಕ್ಕೆ ಹೇಳುತ್ತೇವೆ ಎಂದು ರಾಜ್ಯ ಸರ್ಕಾರವೇ ಹೇಳಿದೆ. ಆದರೆ, ಇದು ಸಾಲದು. ನೀವು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರ ಬಳಿ ಹೋಗಿ, ನಮಗೇಕೆ 5,000 ಕೋಟಿ ರೂ.ಗಳಷ್ಟು ಹಣವನ್ನು ಕಡಿಮೆ ನಿಗದಿ ಮಾಡಿದ್ದೀರಿ ಎಂದು ಪ್ರಶ್ನಿಸಿ. ಇಷ್ಟು ಮಂದಿ ಸಂಸದರು ನಿಮ್ಮ ಪಕ್ಷದಿಂದ ಗೆದ್ದಿದ್ದಾರಲ್ಲ ಅವರು ಹೋಗಿ ಸಂಸತ್ತಿನಲ್ಲಿ ಧರಣಿ ಕೂರಲಿ, ಪ್ರತಿಭಟನೆ ಮಾಡಲಿ. ಯಾವ ರೂಪದಲ್ಲಾದರೂ ರಾಜ್ಯಕ್ಕೆ ಆಗಿರುವ ಕೊರತೆಯನ್ನು ಸರಿಪಡಿಸಿಕೊಳ್ಳದಿದ್ದರೆ ಸರ್ಕಾರ ನಡೆಸಲು ಸಾಧ್ಯವಿಲ್ಲ ಎಂದರು.
ಪ್ರತಿಪಕ್ಷ ನಾಯಕರ ಆರೋಪಕ್ಕೆ ಸಿಎಂ ಉತ್ತರ:ಆರ್ಥಿಕ ಪರಿಸ್ಥಿತಿ ಎಷ್ಟೇ ಬಿಗಡಾಯಿಸಿರಲಿ, ಆದರೆ, ಹೆದ್ದಾರಿಗಳ ವಿಷಯದಲ್ಲಿ ಈ ದೇಶದ ಯಾವುದಾದರೂ ರಾಜ್ಯ ಅತ್ಯಂತ ಹೆಚ್ಚು ನೆರವನ್ನು ಕೇಂದ್ರ ಸರ್ಕಾರದಿಂದ ಪಡೆದಿದ್ದರೆ ಅದು ಕರ್ನಾಟಕ ಎಂದು ಸಮರ್ಥಿಸಿಕೊಂಡರು. ಈ ಮಧ್ಯ ಸಿ.ಟಿ.ರವಿ ಮಾತನಾಡಿ, ಹಿಂದಿನ ಎಲ್ಲ ಸರ್ಕಾರಗಳೂ ಸಾಲ ಮಾಡಿಕೊಂಡೇ ಬಂದಿವೆ. ಆದರೆ, ಅದು ಆರ್ಥಿಕ ಶಿಸ್ತಿನ ಮಿತಿಯಲ್ಲಿದೆ. ಈ ಮಿತಿ ಮೀರಿ ನೀವೂ ಸಾಲ ಮಾಡಿಲ್ಲ, ನಾವೂ ಸಾಲ ಮಾಡಲು ಸಾಧ್ಯವಿಲ್ಲ ಎಂದರು.
ಕೇಂದ್ರದಿಂದ ರಾಜ್ಯಕ್ಕೆ ಬರಬೇಕಿರುವ ಹಣದ ಪಾಲಿನಲ್ಲಿ ಕಡಿಮೆಯಾಗಿರುವುದು ನಿಜ. ಆದರೆ, ಅದಕ್ಕೊಂದು ಕಾರಣವಿದೆ. ಕೇಂದ್ರ ಸರ್ಕಾರ ತನಗೆ ಲಭ್ಯವಾಗಿರುವ ಸಂಪನ್ಮೂಲದಲ್ಲಿ ಪಾಲು ಕೊಡುತ್ತಿದೆ. ಹೀಗಾಗಿ ಹಿಂದಿನ ದಿನಗಳಿಗೂ,ಈಗಿನ ದಿನಗಳಿಗೂ ಹೋಲಿಸಿದರೆ ಕಡಿಮೆ ಪಾಲು ಬರುತ್ತಿದೆ ಅನ್ನಿಸುತ್ತಿರಬಹುದು. ನಮ್ಮಲ್ಲಿ ಸರ್ಕಾರದ ಆದಾಯದ ಪೈಕಿ ಉಳ್ಳವರಿಂದ ಇಲ್ಲದವರಿಗೆ ಹೇಗೆ ತಂದುಕೊಡುವ ಕೆಲಸವಾಗುತ್ತದೋ ಹಾಗೆಯೇ ಕೇಂದ್ರ ಸರ್ಕಾರ ಕೂಡಾ ತಲಾ ಆದಾಯ ಹೆಚ್ಚಿರುವ ರಾಜ್ಯಗಳಿಂದ ಹೆಚ್ಚಿನ ಹಣ ಪಡೆದು ತಲಾದಾಯ ಕಡಿಮೆ ಇರುವ ರಾಜ್ಯಗಳಿಗೆ ಪಾಲು ನೀಡುತ್ತದೆ ಎಂದು ಅವರು ವಿವರ ನೀಡಿದರು.