ಬೆಂಗಳೂರು: ಈ ಬಾರಿಯೂ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ನೋಟಾ ಆಟ ಜೋರಾಗಿದೆ. ಈ ಬಾರಿಯೂ ರಾಜ್ಯಾದ್ಯಂತ ಮತದಾರರು ನೋಟಾಗೆ ಮತ ಹಾಕಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಈ ಚುನಾವಣೆಯಲ್ಲಿ ನೋಟಾ ಆಟ ಹೇಗಿತ್ತು ಎಂಬ ವರದಿ ಇಲ್ಲಿದೆ.
ನೋಟಾ (NONE OF THE ABOVE). ಮತದಾರರಿಗೆ ಕಣದಲ್ಲಿನ ಯಾವ ಅಭ್ಯರ್ಥಿಗಳು ಇಷ್ಟವಿಲ್ಲದಿದ್ದರೆ ನೋಟಾ ಚಲಾಯಿಸಬಹುದು. 2018ರ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ನೋಟಾ ಎಂಟ್ರಿ ಕೊಟ್ಟಿತ್ತು. ಅಂದೂ ಸಾಕಷ್ಟು ಮಂದಿ ನೋಟಾದತ್ತ ನೋಟಾ ಬೀರಿದ್ದರು. ಈ ಬಾರಿಯ ಚುನಾವಣೆಯಲ್ಲೂ ಲಕ್ಷಾಂತರ ಮಂದಿ ನೋಟಾಗೆ ಮತ ಹಾಕಿದ್ದಾರೆ. ಚುನಾವಣಾ ಆಯೋಗ ನೀಡಿರುವ ಮಾಹಿತಿಯಂತೆ ಈ ಬಾರಿಯ ಚುನಾವಣೆಯಲ್ಲಿ 2,69,763 ಮತದಾರರು ನೋಟಾ ಚಲಾಯಿಸಿದ್ದಾರೆ. ಅಂದರೆ ಒಟ್ಟು ಮತದಾನದ ಸುಮಾರು 0.69% ಮತದಾರರು ನೋಟಾದತ್ತ ತಮ್ಮ ನೋಟವನ್ನು ಬೀರಿದ್ದಾರೆ.
2018ರ ಚುನಾವಣೆಯಲ್ಲಿ ರಾಜ್ಯದಲ್ಲಿ ಒಟ್ಟು ಸುಮಾರು 3,22,381 ಮತದಾರರು ನೋಟಾ ಆಯ್ಕೆ ಮಾಡಿದ್ದರು. ಅಂದರೆ ಒಟ್ಟು ಮತದಾನದ 0.9% ನೋಟಾ ಚಲಾವಣೆ ಆಗಿತ್ತು. ಕಳೆದ ಬಾರಿಗೆ ಹೋಲಿಸದರೆ ಈ ಬಾರಿಯ ಚುನಾವಣೆಯಲ್ಲಿ ನೋಟಾ ಪ್ರಮಾಣ ಕಡಿಮೆಯಾಗಿದೆ. ಆದರೂ ಹಲವೆಡೆ ನೋಟಾ ಸೋಲು-ಗೆಲುವಿನಲ್ಲಿ ಪರೋಕ್ಷವಾಗಿ ತನ್ನ ಕೊಡುಗೆ ನೀಡಿದೆ.
ನೋಟಾದ ಆಟ ಹೇಗಿತ್ತು?:ಈ ಬಾರಿಯ ಚುನಾವಣೆಯಲ್ಲಿ ರಾಜ್ಯಾದ್ಯಂತ ಸುಮಾರು 2.69 ಲಕ್ಷ ಮತದಾರರು ನೋಟಾ ಹಾಕಿದ್ದಾರೆ. ಸರಾಸರಿ ಲೆಕ್ಕ ಹಾಕಿದರೆ ಪ್ರತಿ 224 ಕ್ಷೇತ್ರಗಳಲ್ಲಿ ಸುಮಾರು 1,200 ಮತದಾರರು ನೋಟಾ ಆಯ್ಕೆ ಮಾಡಿದ್ದಾರೆ. ಅನೇಕ ಕಡೆ ಪ್ರಮುಖ ರಾಜಕೀಯ ಪಕ್ಷಗಳಿಗಿಂತ ನೋಟಾ ಮುಂದಿದೆ. ಪ್ರಮುಖವಾಗಿ ಎಎಪಿ ಅಭ್ಯರ್ಥಿಗಳ ಪರ ಈ ಬಾರಿ ಒಟ್ಟು 2.25. ಲಕ್ಷ ಮತಬಿದ್ದಿದೆ. ಒಟ್ಟು ಮತದಾನದ 0.58% ಮತ AAPಗೆ ಬಿದ್ದಿದೆ. ಅಂದರೆ ಎಎಪಿಗಿಂತ ನೋಟಾವನ್ನೇ ಮತದಾರರು ಹೆಚ್ಚಿಗೆ ಆಯ್ಕೆ ಮಾಡಿದ್ದಾರೆ. ಬಿಎಸ್ಪಿ, ಎನ್ಸಿಪಿ ಪಕ್ಷಗಳಿಗಿಂತ ನೋಟಾ ಮೇಲಿದೆ.
ಅದರಲ್ಲೂ ಜೆಡಿಎಸ್ ಪಕ್ಷ ಸುಮಾರು 41 ಕ್ಷೇತ್ರಗಳಲ್ಲಿ 1,000 ಮತಗಳಿಸಲು ಸಾಧ್ಯವಾಗಿಲ್ಲ. ಆ ಕ್ಷೇತ್ರಗಳ ಪೈಕಿ ಸುಮಾರು 30 ಕಡೆ ಅಭ್ಯರ್ಥಿಗಳು ಪಡೆದ ಮತಗಿಂತ ನೋಟಾ ಹೆಚ್ಚು ಚಲಾವಣೆ ಆಗಿದೆ. ಆಳಂದ, ಅರಭಾವಿ, ಅಥಣಿ, ಔರಾದ್, ಬಿಟಿಎಂ ಲೇಔಟ್, ಬಬಲೇಶ್ವರ, ಬಂಟ್ವಾಳ ಸೇರಿ ಉತ್ತರ ಕರ್ನಾಟಕದ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳಿಗಿಂತ ನೋಟಾ ಹೆಚ್ಚು ಮತ ಬಿದ್ದಿದೆ. ಇನ್ನು ಇತ್ತ ಎಎಪಿ ಪಕ್ಷವಂತೂ ರಾಜ್ಯ ಚುನಾವಣೆಯಲ್ಲಿ ಹೀನಾಯ ಪ್ರದರ್ಶನ ನೀಡಿದೆ. ಸುಮಾರು 110 ಕ್ಷೇತ್ರಗಳಲ್ಲಿ ಎಎಪಿ ಅಭ್ಯರ್ಥಿಗಳಿಗಿಂತ ನೋಟಾಗೆ ಹೆಚ್ಚು ಮತ ಬಿದ್ದಿದೆ. ಸುಮಾರು 130 ಎಎಪಿ ಅಭ್ಯರ್ಥಿಗಳು ಸಾವಿರದ ಗಡಿ ದಾಟಲು ಸಾಧ್ಯವಾಗಿಲ್ಲ. ಸುಮಾರು 95ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ನೋಟಾ ಮತಗಳು ಸಾವಿರದ ಗಡಿ ದಾಟಿದೆ.
ಬೆಂಗಳೂರಲ್ಲಿ 60,000 ನೋಟಾ: ಬೆಂಗಳೂರಿನ 28 ಕ್ಷೇತ್ರಗಳಲ್ಲಿ ಸುಮಾರು 60,000 ನೋಟಾ ಚಲಾವಣೆ ಆಗಿದೆ. ಮಹದೇವಪುರದಲ್ಲಿ ಅತಿ ಹೆಚ್ಚು 4775 ನೋಟಾ ಚಲಾವಣೆ ಆಗಿದೆ. ಇನ್ನು ಕೆ.ಆರ್.ಪುರಂನಲ್ಲಿ 4396 ನೋಟಾ ಆಯ್ಕೆ ಮಾಡಿದ್ದಾರೆ. ಬಿಟಿಎಂ ಲೇಔಟ್ 1785, ಗಾಂಧಿನಗರ 1692, ಜಯನಗರ 1192, ಬಸವನಗುಡಿ 1656, ಬೊಮ್ಮನಹಳ್ಳಿ 2456, ಸಿ.ವಿ. ರಾಮನ್ ನಗರ 1999, ಚಿಕ್ಕಪೇಟೆ 1,287,ಬೆಂಗಳೂರು ದಕ್ಷಿಣ 4006, ಬ್ಯಾಟರಾಯನಪುರ 2383 ನೋಟಾ ಆಯ್ಕೆ ಮಾಡಿದ್ದಾರೆ.