ಬೆಂಗಳೂರು: ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲ ಇಲಾಖೆಯಲ್ಲೂ ವರ್ಗಾವಣೆ ದಂಧೆ ಶುರುವಾಗಿದೆ ಎಂದು ಮಾಜಿ ಸಚಿವ ಅಶ್ವತ್ಥ ನಾರಾಯಣ ಗಂಭೀರ ಆರೋಪ ಮಾಡಿದ್ದಾರೆ. ಬೆಂಗಳೂರಲ್ಲಿಂದು ಮಾತನಾಡಿದ ಅವರು, ಶಿಫಾರಸು ಪತ್ರ ಎಲ್ರೂ ಕೊಡ್ತಾರೆ, ಆದ್ರೆ ಈ ಸರ್ಕಾರದಲ್ಲಿ ಶಿಫಾರಸು ಪತ್ರ ಆಧರಿಸಿ ವರ್ಗಾವಣೆ ನಡೆಯುತ್ತಿಲ್ಲ. ಇದರ ಬದಲು ಹಣದ ಆಧಾರದಲ್ಲಿ ವರ್ಗಾವಣೆ ನಡೀತಿದೆ. ಸತ್ಯಹರಿಶ್ಚಂದ್ರ ಥರ ಮಾತಾಡ್ತಾರೆ ಇವರು. ಆದರೆ ಹಣ ಪಡೆದೇ ವರ್ಗಾವಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸಿದ್ದರಾಮಯ್ಯ ಸರ್ಕಾರದಲ್ಲಿ ವರ್ಗ ಆಗಿರೋರು ಸರ್ಟಿಫೈಡ್ ಅಧಿಕಾರಿಗಳಾ?. ಇವರ್ಯಾರೂ ಭ್ರಷ್ಟಾಚಾರಿಗಳಲ್ಲ, ಭ್ರಷ್ಟಾಚಾರ ಮಾಡಲ್ಲ ಅಂತ ಸರ್ಟಿಫಿಕೇಟ್ ಕೊಟ್ಟಿದ್ದಾರಾ?. ಈ ಸರ್ಕಾರ ಮೊದಲ ದಿನದಿಂದಲೇ ಭ್ರಷ್ಟಾಚಾರ ಮತ್ತು ವರ್ಗಾವಣೆ ದಂಧೆ ನಡೆಸ್ತಿದ್ದಾರೆ. ಇದು ಮೋಸದ ಸರ್ಕಾರ, ಜನತೆಗೆ ಮೋಸ ಮಾಡಿ ಬಂದ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.
ಸರ್ಕಾರದಿಂದ ತನಿಖಾಸ್ತ್ರ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ನಮ್ಮ ಕಾಲದ ಅಕ್ರಮ ಆರೋಪಗಳ ಬಗ್ಗೆ ಎಸ್‌ಐಟಿ ತನಿಖೆ ಮಾಡ್ತೀವಿ ಅಂದಿದ್ದಾರೆ. ತನಿಖೆ ಮಾಡಲಿ. ಆದ್ರೆ ನ್ಯಾಯಾಯಲಯ ಮಾನಿಟರ್ನಲ್ಲಿ ಎಸ್‌ಐಟಿ ರಚಿಸಲಿ. ಹಾಗೆಯೇ ಅವರ ಕಾಲದಲ್ಲೂ ಆಗಿರುವ ಅಕ್ರಮಗಳ ಬಗ್ಗೆಯೂ ತನಿಖೆ ನಡೆಸಲಿ. ಕೋರ್ಟ್ ಮಧ್ಯಸ್ಥಿಕೆಯಡಿ ಎಸ್‌ಐಟಿ ರಚಿಸಿ. ಎಸ್‌ಐಟಿ ತನಿಖೆಯನ್ನು ನಾವು ಸ್ವಾಗತ ಮಾಡ್ತೇವೆ ಎಂದು ಹೇಳಿದರು.
ಕಾಂಗ್ರೆಸ್ ಈಗ ಮಾಡ್ತಿರುವ ತನಿಖೆಯ ಉದ್ದೇಶ ಒಳ್ಳೆಯದಲ್ಲ. ದ್ವೇಷ, ಕಿರುಕುಳ ಕೊಡೋಕೆ ತನಿಖೆ ಮಾಡಲು ಹೊರಟಿದ್ದಾರೆ. ಅವರ ಕಾಲದ ಹಗರಣಗಳ ತನಿಖೆ ಮಾಡಿ. ಇವರೆಲ್ಲ ಸತ್ಯ ಹರಿಶ್ಚಂದ್ರರು. ಈ ಸತ್ಯ ಹರಿಶ್ಚಂದ್ರರ ಕಾಲದ್ದು ತನಿಖೆ ಮಾಡಿದರೆ ನಾನು ಸಾಷ್ಟಾಂಗ ನಮಸ್ಕಾರ ಮಾಡ್ತೇನೆ. ಗುತ್ತಿಗೆದಾರರಿಗೆ ಈಗ ಬಾಂಡಲಿಯಿಂದ ಬೆಂಕಿಗೆ, ಬೆಂಕಿಯಿಂದ ಬಾಂಡಲಿಗೆ ಬಿದ್ದಂತೆ ಆಗ್ತಾ ಇದೆ. ಈ ಸರ್ಕಾರದಲ್ಲಿ ಅವರ ಪರಿಸ್ಥಿತಿ ಈಗ ಹಾಗೆ ಇದೆ. ಸ್ಪಂದಿಸುವವರು ಬರ್ತಾರೆ ಅಂದರೆ ನಮ್ಮನ್ನೇ ನುಂಗುವವರು ಬಂದಿದ್ದಾರಲ್ಲಪ್ಪಾ ಎಂಬ ಸ್ಥಿತಿ ಗುತ್ತಿಗೆದಾರರದ್ದು. ಗುತ್ತಿಗೆದಾರರಿಗೆ ಏನು ಮಾಡಬೇಕು ಅಂತಾ ಗೊತ್ತಾಗುತ್ತಿಲ್ಲ ಎಂದರು.