ಬೆಂಗಳೂರು: ರಾಜ್ಯದಲ್ಲಿ ಉಂಟಾದ ಪ್ರವಾಹದಿಂದ ಸಾಕಷ್ಟು ನಷ್ಟ ಆಗಿದೆ. ಸಮೀಕ್ಷೆಯನುಸಾರ ಅಂದಾಜು38 ಸಾವಿರ ಕೋಟಿ ರೂ.ನಷ್ಟು ನಷ್ಟವಾಗಿರುವ ಬಗ್ಗೆ ಕೇಂದ್ರಕ್ಕೆ ವರದಿ ಕೊಟ್ಟಿದ್ದೇವೆ ಎಂದು ಕಂದಾಯ ಸಚಿವ ಆರ್. ಅಶೋಕ್ ಮಾಹಿತಿ ನೀಡಿದ್ದಾರೆ.
ವಿಧಾನಸೌಧದಲ್ಲಿ ಇಂದು ನೆರೆ ಪರಿಹಾರ ಕುರಿತು ಕಂದಾಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಎಸ್ಡಿಆರ್ಎಫ್ ಮಾರ್ಗಸೂಚಿಯನುಸಾರ 38 ಸಾವಿರ ಕೋಟಿ ರೂ. ಪರಿಹಾರಕ್ಕೆ ಮನವಿ ಮಾಡಲಾಗಿದೆ ಎಂದು ಹೇಳಿದರು.
ಪ್ರವಾಹದಿಂದ ಒಟ್ಟು 2,47,628 ಮನೆಗಳಿಗೆ ಹಾನಿಯಾಗಿದೆ. ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಒಟ್ಟು 8.88 ಲಕ್ಷ ಹೆಕ್ಟೇರ್ ನಷ್ಟು ಹಾನಿಯಾಗಿದೆ. ಒಟ್ಟು 21,818 ಕಿ.ಮೀ ರಸ್ತೆ ಹಾನಿಯಾಗಿದ್ದು, (ರಾಜ್ಯ ಹೆದ್ದಾರಿ 4119, ಗ್ರಾಮೀಣ ರಸ್ತೆ 14,921 ಮತ್ತು ನಗರ ರಸ್ತೆ 2778 ಕಿ.ಮೀ), 2,193 ಸೇತುವೆಗಳು ಹಾನಿಯಾಗಿವೆ.10,988 ಸರ್ಕಾರಿ ಕಟ್ಟಡಗಳು (ಅಂಗನವಾಡಿ, ಶಾಲೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರ ಇತರೆ) ಹಾನಿಯಾಗಿವೆ. 1,550 ಸಣ್ಣ ನೀರಾವರಿ ಹಾಗೂ ಜಿಲ್ಲಾ ಪಂಚಾಯಿತಿ ಟ್ಯಾಂಕುಗಳು ಹಾನಿಯಾಗಿವೆ. 26 ಕಾಳಜಿ ಕೇಂದ್ರಗಳಲ್ಲಿ 5632 ಜನರಿದ್ದಾರೆ ಎಂದು ವಿವರಿಸಿದರು. 2,258 ಲಕ್ಷ ಕುಟುಂಬಗಳಿಗೆ 10 ಸಾವಿರ ರೂ. ನೀಡಲಾಗಿದೆ. ಇನ್ನು1929 ಕುಟುಂಬಗಳು ಮಾತ್ರ ಬಾಕಿ ಇದೆ. ಎಲ್ಲಾ ಜಿಲ್ಲೆಗಳ ಪಿಡಿ ಖಾತೆಯಲ್ಲಿ 380.44 ಕೋಟಿ ರೂ. ಇದೆ. ಒಟ್ಟು 414 ಕೋಟಿ ರೂ. ಒಟ್ಟು ಬಿಡುಗಡೆಯಾಗಿದೆ ಎಂದು ಹೇಳಿದರು.
ಹಾನಿಗೊಳಗಾದ ಮನೆಗಳಿಗೆ 25,000 ರೂ. ತಕ್ಷಣ ಬಿಡುಗಡೆಗೆ ಸೂಚನೆ ನೀಡಲಾಗಿದೆ. ಹಂತ ಹಂತವಾಗಿ 5 ಲಕ್ಷ ರೂ. ನೀಡಲಾಗುವುದು. ಮೂರು ಹಂತಗಳಲ್ಲಿ ಮನೆ ನಷ್ಟವಾದವರನ್ನು ಗುರುತಿಸಲಾಗಿದೆ. ಅಕ್ರಮ ತಡೆಯಲು ಆರ್ಟಿಜಿಎಸ್ ಮೂಲಕ ನೇರವಾಗಿ ಸಂತ್ರಸ್ತರ ಅಕೌಂಟ್ ಗೆ ಹಣ ನೀಡಲಾಗಿದೆ ಎಂದು ಮಾಹಿತಿ ನೀಡಿದರು.