ಬೆಂಗಳೂರು :ಕೋವಿಡ್ ಸಂಕಷ್ಟದ ಹಿನ್ನೆಲೆ ಶಾಸಕ ಅರವಿಂದ ಲಿಂಬಾವಳಿ ಅವರು ವರ್ಚುವಲ್ ಸಾರ್ವಜನಿಕ ಸಂಪರ್ಕ ಸಭೆ ಏರ್ಪಡಿಸಿ ದೊಡ್ಡನೆ ಕುಂದಿ ವಾರ್ಡ್ ವ್ಯಾಪ್ತಿಯ ಜನರ ಕುಂದು ಕೊರತೆ ಆಲಿಸಿದರು.
ಸಾರ್ವಜನಿಕ ಸಂಪರ್ಕ ಸಭೆ ನಡೆಸಿದ ಶಾಸಕ ಅರವಿಂದ ಲಿಂಬಾವಳಿ ಸಂಚಾರ ದಟ್ಟಣೆ, ರಾಜಕಾಲುವೆ, ಒಳಚರಂಡಿ, ಕೆಳ ಸೇತುವೆ, ಕೆರೆಗಳ ಅಭಿವೃದ್ಧಿ, ವಿವಿಧ ಇಲಾಖೆಯ ಕಾಮಗಾರಿಗಳ ಬಗ್ಗೆ ಸಾರ್ವಜನಿಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಮಂದಗತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳಿಗೆ ಚುರುಕು ಮುಟ್ಟಿಸಲು ಸೂಚಿಸಿದರು.
ಆಶ್ರಯ ಬಡಾವಣೆಯ ಆನಂದ್ ರಾಜಕಾಲುವೆ ಅಭಿವೃದ್ಧಿಯ ಬಗ್ಗೆ ಮನವಿ ಮಾಡಿದರು. ಕುಂದಲಹಳ್ಳಿ ಕಾಲೋನಿಯ ವಿಕ್ರಮ್, ಮಾರತ್ತಹಳ್ಳಿ ರಸ್ತೆಯಲ್ಲಿ ಉಂಟಾಗುತ್ತಿರುವ ಸಂಚಾರ ದಟ್ಟಣೆಗೆ ಮುಕ್ತಿ ಕಲ್ಪಿಸಲು ಕೋರಿದರು. ಕುಂದಲಹಳ್ಳಿ ನಿವಾಸಿ ಸುದರ್ಶನ ಅವರು ರಸ್ತೆ ಗುಂಡಿ ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಮನವಿ ಮಾಡಿದರು.
ಬಳಿಕ ಮಾತನಾಡಿದ ಶಾಸಕ ಅರವಿಂದ ಲಿಂಬಾವಳಿ, ನೆನೆಗುದಿಗೆ ಬಿದ್ದಿರುವ ಕಾಮಗಾರಿಗಳಿಗೆ ಚುರುಕು ನೀಡಲಾಗುವುದು. ರಸ್ತೆ ಗುಂಡಿ ದುರಸ್ತಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.