ಬೆಂಗಳೂರು: ಚಹಾದಲ್ಲಿ ನಿದ್ರೆ ಮಾತ್ರೆ ಬೆರೆಸಿ ಕಾಂಡಿಮೆಂಟ್ಸ್ ಮಾಲೀಕನ ಪ್ರಜ್ಞೆ ತಪ್ಪಿಸಿ ಚಿನ್ನಾಭರಣ ಕಳವು ಮಾಡಿ ಪರಾರಿ ಆಗಿದ್ದ ಇಬ್ಬರು ಆರೋಪಿಗಳನ್ನು ಮಲ್ಲೇಶ್ವರಂ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಕಾರ್ತಿಕ್ ಹಾಗೂ ಮಂಜುಶ್ರೀ ಎಂಬುವರು ಬಂಧಿತರು. ಮಲ್ಲೇಶ್ವರಂನ ಕಾಂಡಿಮೆಂಟ್ಸ್ ಆ್ಯಂಡ್ ಚಾಟ್ಸ್ ಅಂಗಡಿಯ ಮಾಲೀಕನನ್ನು ಪರಿಚಯಿಸಿಕೊಂಡಿದ್ದ ಆರೋಪಿಗಳು, ಸೆಪ್ಟೆಂಬರ್ 22ರಂದು ಆತನೊಂದಿಗೆ ಒಟ್ಟಿಗೆ ಟೀ ಕುಡಿಯುವ ನೆಪದಲ್ಲಿ ಪ್ರಜ್ಞೆ ತಪ್ಪಿಸಿ ಮೈಮೇಲಿದ್ದ 35 ಗ್ರಾಂ ತೂಕದ ಚಿನ್ನದ ಸರ ದೋಚಿ ಪರಾರಿಯಾಗಿದ್ದರು.
ಸ್ನೇಹ ಬೆಳೆಸಿ ಮೈಮೇಲಿದ್ದ ಚಿನ್ನಾಭರಣ ಕದಿಯುವ ಆರೋಪಿಗಳು: ಈ ಇಬ್ಬರು ಆರೋಪಿಗಳು ರಸ್ತೆ ಬದಿ ವ್ಯಾಪಾರಿಗಳು, ಕಾಂಡಿಮೆಂಟ್ಸ್ ಅಂಗಡಿ ಮಾಲೀಕರನ್ನು ಟಾರ್ಗೆಟ್ ಮಾಡುತ್ತಿದ್ದರು. ಪದೇ ಪದೆ ಅಂಗಡಿಗೆ ಬಂದು ಪರಿಚಯ ಮಾಡಿಕೊಂಡು, ನಂತರ ಅವರ ಜಾತಿ, ಊರು ತಿಳಿದುಕೊಂಡು ನಮ್ಮದು ಅದೇ ಜಾತಿ ನಿಮ್ಮೂರಿನ ಪಕ್ಕದವರೇ ಎನ್ನುತ್ತ ಹತ್ತಿರವಾಗಿ ಸ್ನೇಹ ಬೆಳೆಸಿಕೊಳ್ಳುತ್ತಿದ್ದರು. ನಂತರ ಅವರ ಪ್ರಜ್ಞೆ ತಪ್ಪಿಸಿ ಮೈಮೇಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದರು.
ಸದ್ಯ ಇಬ್ಬರೂ ಆರೋಪಿಗಳನ್ನು ಬಂಧಿಸಿರುವ ಪೊಲೀಸರು 6.5 ಲಕ್ಷ ಮೌಲ್ಯದ 115 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ಪೈಕಿ ಕಾರ್ತಿಕ್, ಈ ಹಿಂದೆ ಕಾಡುಗೋಡಿ ಠಾಣೆ ವ್ಯಾಪ್ತಿಯಲ್ಲಿ ಹತ್ಯೆ ಪ್ರಕರಣ ಹಾಗೂ ವಿಜಯನಗರ ಠಾಣೆಯ ವ್ಯಾಪ್ತಿಯಲ್ಲಿ ಅಪಹರಣ ಪ್ರಕರಣವೊಂದರಲ್ಲಿ ಸೆರೆವಾಸ ಅನುಭವಿಸಿ ಹೊರಬಂದಿರುವುದು ವಿಚಾರಣೆ ವೇಳೆ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಲ್ಲೇಶ್ವರಂ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ಮುಂದುವರಿದಿದೆ.