ಬೆಂಗಳೂರು :ಮೂರು ದಿನಗಳ ಹಿಂದೆ ನಡೆದಿದ್ದ ನೇಪಾಳ ಮೂಲದ ಯುವಕನ ಹತ್ಯೆ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬೆಳ್ಳಂದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಡೇವಿಡ್ ಎಂಬಾತನನ್ನು ಕೊಲೆ ಪ್ರಕರಣದಲ್ಲಿ ನೇಪಾಳದ ಸೂರಜ್ ಸಾಪ್, ಸುರೇಂದ್ರ ಹಾಗೂ ಬಿನೋದ್ ಎಂಬವರನ್ನು ಬಂಧಿಸಲಾಗಿದೆ.
ಜೂನ್ 25ರಂದು ಕಸವನಹಳ್ಳಿಯ ಹರಳೂರಿನಲ್ಲಿ ಡೇವಿಡ್ ಹತ್ಯೆಯಾಗಿತ್ತು. ಡೇವಿಡ್ ಹಾಗೂ ಮೂವರು ಆರೋಪಿಗಳು ಹರಳೂರಿನ ಮನೆಯೊಂದರಲ್ಲಿ ವಾಸವಿದ್ದರು. ನಾಲ್ವರೂ ಸಹ ಹೊಟೇಲ್ ವೊಂದರಲ್ಲಿ ಅಡುಗೆ ಕೆಲಸ ಮಾಡಿ ಜೀವನ ಕಟ್ಟಿಕೊಂಡಿದ್ದರು. ಮೊದಲ ಆರೋಪಿ ಸೂರಪ್ ಸಾಪ್ ಎಂಬಾತನ ಮೊಬೈಲ್ ಅನ್ನು ಡೇವಿಡ್ ತೆಗೆದುಕೊಂಡು ಹಣ ನೀಡದೇ ಸತಾಯಿಸುತ್ತಿದ್ದನಂತೆ. ಈ ವಿಚಾರವನ್ನು ಸಹಚರರೊಂದಿಗೆ ಹೇಳಿಕೊಂಡಿದ್ದ. ಡೇವಿಡ್‌ಗೆ ಬುದ್ದಿ ಕಲಿಸಲು ಆರೋಪಿಗಳೆಲ್ಲರೂ ಒಗ್ಗೂಡಿ ಪಾರ್ಟಿ ಮಾಡುವ ನೆಪವೊಡ್ಡಿ ಆಹ್ವಾನಿಸಿದ್ದರು. ಪಾರ್ಟಿ ವೇಳೆ ಮೊಬೈಲ್ ವಿಚಾರ ಪ್ರಸ್ತಾಪವಾಗಿದೆ. ಹಣ ನೀಡಲು ಒತ್ತಾಯಿಸಿದ್ದ ಸೂರಪ್ ತಾಯಿ ಬಗ್ಗೆ ಡೇವಿಡ್ ಕೆಟ್ಟದಾಗಿ ಮಾತನಾಡಿದ್ದ.
ಇದರಿಂದ ಕೋಪಗೊಂಡ ಸೂರಜ್ ಹಾಗು ಆತನ ಸಹಚರರು ಚಾಕುವಿಂದ ಡೇವಿಡ್‌ಗೆ ಚುಚ್ಚಿ ಹತ್ಯೆ ಮಾಡಿ ಪರಾರಿಯಾಗಿದ್ದರು. ಬೆಳ್ಳಂದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಪತ್ನಿ ಮೇಲೆ ಅನುಮಾನ- ಚಾಕು ಇರಿತ : ಮೊಬೈಲ್ ಫೋನ್‌ನಲ್ಲಿ ಹೆಚ್ಚು ಮಾತನಾಡುತ್ತಿರುತ್ತಾಳೆ ಎಂದು ಅನುಮಾನಪಟ್ಟ ಪತಿ ಆಕೆಗೆ ಚಾಕುವಿನಿಂದ ಇರಿದ ಘಟನೆ ಜೂನ್ 25ರಂದು ಭಾನುವಾರ ರಾತ್ರಿ 9.45ರ ಸುಮಾರಿಗೆ ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಬಜಾರ್ ಸ್ಟ್ರೀಟ್ನಲ್ಲಿ ನಡೆದಿತ್ತು. ನೀಲಸಂದ್ರದ ಬಜಾರ್ ಸ್ಟ್ರೀಟ್ನಲ್ಲಿ ಆರೋಪಿ ದಯಾನಂದ್ ಹಾಗೂ ಪ್ರಿಯಾಂಕಾ ಮದುವೆಯಾಗಿ ವಾಸವಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಸದಾ ಕುಡಿದು ಬರುತ್ತಿದ್ದ ದಯಾನಂದ್ ಪತ್ನಿ ಮೇಲೆ ಅನುಮಾನಪಟ್ಟು ಗಲಾಟ ಮಾಡುತ್ತಿದ್ದ. ಭಾನುವಾರ ರಾತ್ರಿಯೂ ಸಹ ಕಂಠಪೂರ್ತಿ ಕುಡಿದು ಬಂದಿದ್ದ ದಯಾನಂದ್ ಮಲಗಿದ್ದ ಪತ್ನಿ ಜತೆ ಜಗಳ ಆರಂಭಿಸಿ ನೋಡ ನೋಡುತ್ತಿದ್ದಂತೆ ಮಕ್ಕಳ ಮುಂದೆಯೇ ಚಾಕುವಿನಿಂದ ಪತ್ನಿಯ ಹೊಟ್ಟೆಯ ಕೆಳಭಾಗಕ್ಕೆ ಇರಿದಿದ್ದಾನೆ. ತೀವ್ರ ರಕ್ತಸ್ರಾವವಾದಿಂದ ಪತ್ನಿ ಕಿರುಚಾಡುತ್ತಿದ್ದಂತೆ ಸ್ಥಳದಿಂದ ಕಾಲ್ಕಿತ್ತಿದ್ದ.
ಕಿರುಚಾಟ ಕೇಳಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ತಿಳಿಸಿದ ತಕ್ಷಣ ಸ್ಥಳಕ್ಕೆ ಬಂದ ಹೊಯ್ಸಳ ಸಿಬ್ಬಂದಿ ಪ್ರಿಯಾಂಕಾ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಸದ್ಯ ಪ್ರಿಯಾಂಕಾ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಆರೋಪಿ ದಯಾನಂದ್ ನನ್ನು ಆಡುಗೋಡಿ ಠಾಣಾ ಪೊಲೀಸರು ಬಂಧಿಸಿ ವಿಚಾರಣೆ ಒಳಪಡಿಸಿದ್ದಾರೆ.
ಇದನ್ನೂ ಓದಿ :Bengaluru crime: ವಿಳಾಸ ಕೇಳುವ ನೆಪದಲ್ಲಿ ವಕೀಲನನ್ನೇ ಅಪಹರಿಸಿದ ಗ್ಯಾಂಗ್: 20 ಸಾವಿರ ರೂ. ಸುಲಿಗೆ ಮಾಡಿದ ಅಪಹರಣಕಾರರು