ಬೆಂಗಳೂರು:ಉತ್ತರಾಖಂಡದಲ್ಲಿ ಹಿಮಪಾತವಾಗಿ ಬಹಳಷ್ಟು ಜನ ಅಸುನೀಗಿದ್ದಾರೆ. ಅದರಲ್ಲಿ ಕರ್ನಾಟಕದ ವಿಕ್ರಮ್, ರಕ್ಷಿತ್ ಇಬ್ಬರು ಸಹ ಮೃತಪಟ್ಟಿದ್ದಾರೆ. ಅವರ ಮೃತದೇಹಗಳನ್ನು ಸರ್ಕಾರದ ವೆಚ್ಚದಲ್ಲಿ ರಾಜ್ಯಕ್ಕೆ ತರಲಾಗುವುದು ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಉತ್ತರಾಖಂಡದಲ್ಲಿ ನೆಹರು ಇನ್ಸಿಟ್ಯೂಟ್ ಆಫ್ ಮೌಂಟೇನಿಯರಿಂಗ್ (NIM) ನಲ್ಲಿ ಅಡ್ವಾನ್ಸ್ ಮೌಂಟೇನಿಯರಿಂಗ್ ಕೋರ್ಸ್ ಬ್ಯಾಚ್-217, ಸೆಪ್ಟೆಂಬರ್ 21 ರಿಂದ ಪ್ರಾರಂಭವಾಗಿತ್ತು. ಅಕ್ಟೋಬರ್ 4 ರಂದು ತರಬೇತಿ ವೇಳಾಪಟ್ಟಿಯಂತೆ, ಪ್ರಶಿಕ್ಷಣಾರ್ಥಿಗಳು ಮತ್ತು ಬೋಧಕರು ಪರ್ವತದಿಂದ ಹಿಂತಿರುಗುವಾಗ ಬೆಳಗ್ಗೆ 04.00 ಗಂಟೆಗೆ ದೌಪದಿ ಕಾ ದಂಡ (17000 ಅಡಿ) ಪರ್ವತಕ್ಕೆ ನ್ಯಾವಿಗೇಷನ್ಗೆ ತೆರಳಿದರು.
ಅಲ್ಲಿ ಹಿಮಕುಸಿತ ಉಂಟಾಗಿತ್ತು. ಶಿಬಿರ-1 ರ ನಲ್ಲಿ 34 ಪ್ರಶಿಕ್ಷಣಾರ್ಥಿಗಳು ಮತ್ತು ಪರ್ವತಾರೋಹಣ ಬೋಧಕರು ಬೆಳಗ್ಗೆ 8.45 ಗಂಟೆಗೆ ಹಿಮಪಾತದಲ್ಲಿ ಸಿಕ್ಕಿಬಿದ್ದರು. ಸಿಕ್ಕಿಬಿದ್ದಿರುವ ಪ್ರಶಿಕ್ಷಣಾರ್ಥಿಗಳಲ್ಲಿ ಬೆಂಗಳೂರು ನಗರ ಜಿಲ್ಲೆಯ ವಿಕ್ರಮ್ ಎಂ ಮತ್ತು ರಕ್ಷಿತ್ ಮೃತಪಟ್ಟಿದ್ದಾರೆ.12 ಬೋಧಕರು ಮತ್ತು ಪ್ರಶಿಕ್ಷಣಾರ್ಥಿಗಳನ್ನು ರಕ್ಷಿಸಲಾಗಿದೆ ಎಂದರು.
ಸಂತಾಪ ಸೂಚಿಸಿದ ಸಚಿವರು: ಉತ್ತರಾಖಂಡದಲ್ಲಿ ಹಿಮಪಾತವಾಗಿ ಬಹಳಷ್ಟು ಜನರು ಅಸುನೀಗಿದ್ದಾರೆ. ವಿಕ್ರಮ್ ಹಾಗೂ ರಕ್ಷಿತ್ ಮೃತದೇಹಗಳು ಸಿಕ್ಕಿದೆ. ಡಿಸಾಸ್ಟರ್ ಮ್ಯಾನೇಜ್ಮೆಂಟ್ ನವರಿಗೆ ಎಲ್ಲ ರೀತಿಯ ನೆರವು ನೀಡಲು ಸೂಚನೆ ನೀಡಿದ್ದೇನೆ. ಬೆಂಗಳೂರಿಗೆ ತರುವ ವ್ಯವಸ್ಥೆ ಮಾಡಲಾಗಿದೆ. ಇಂದು ವಿಮಾನದ ಮೂಲಕ ರಕ್ಷಿತ್ ಮೃತದೇಹ ಬರಲಿದೆ. ವಿಕ್ರಮ್ ಮೃತದೇಹ ರಾತ್ರಿ 9.15ಕ್ಕೆ ಬೆಂಗಳೂರು ಏರ್ ಪೋರ್ಟ್ ಗೆ ಬರಲಿದೆ. ಅದರ ಪೂರ್ಣ ವೆಚ್ಚ ಸರ್ಕಾರವೇ ಭರಿಸಲಿದೆ. ಇಬ್ಬರ ಕುಟುಂಬಕ್ಕೆ ದುಃಖ ಬರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದರು.
ಸರ್ಕಾರಕ್ಕೆ ಎಲ್ಲರೂ ಒಂದೇ: ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಅಶೋಕ್, ಬಡವ, ಮಧ್ಯಮ, ಸಾಹುಕಾರ ಅನ್ನುವ ಪ್ರಶ್ನೆ ಇಲ್ಲ. ರಾಜಕಾಲುವೆ ಒತ್ತುವರಿ ಮಾಡಿರುವವರನ್ನು ಸಮಾನವಾಗಿ ನೋಡಬೇಕು. ಹಾಗೆಯೇ ನೋಡುತ್ತೇವೆ. ಸರ್ಕಾರಕ್ಕೆ ಎಲ್ಲರೂ ಕೂಡ ಒಂದೇ. ಎಲ್ಲವನ್ನೂ ಸಮಾನವಾಗಿ ನೋಡಿ, ಒತ್ತುವರಿ ತೆರವು ಮಾಡಲು ಸೂಚಿಸಿದ್ದೇನೆ.