ಬೆಂಗಳೂರು:ರಾಜ್ಯದಲ್ಲಿ ಕೊರೊನಾ ಸೋಂಕು ಏರಿಕೆಯಾಗುತ್ತಲೇ ಇದೆ. ಇತ್ತ 1ರಿಂದ 9ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಬೇಕಾ ಅಥವಾ ಬೇಡ್ವಾ ಎಂಬುದರ ಕುರಿತು ಇನ್ನೂ ಯಾವುದೇ ನಿರ್ಧಾರವನ್ನು ಶಿಕ್ಷಣ ಇಲಾಖೆ ಕೈಗೊಂಡಿಲ್ಲ.
ಒಂದು ಕಡೆ ಕೋವಿಡ್ ಹೆಚ್ಚಾಗುತ್ತಿರುವುದರಿಂದ ಈ ಸಂದರ್ಭದಲ್ಲಿ ಪರೀಕ್ಷೆ ನಡೆಸುವುದು ಶಿಕ್ಷಣ ಇಲಾಖೆಗೆ ಸವಾಲೇ ಎನಿಸಿದೆ. ಇದರ ಜೊತೆಗೆ ಇನ್ನೇನು ಕೆಲ ದಿನಗಳಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ವಾರ್ಷಿಕ ಪರೀಕ್ಷೆಗಳಿಗೂ ಇಲಾಖೆ ತಯಾರಿ ಮಾಡಿಕೊಳ್ಳಬೇಕು. ಹಾಗಾಗಿ 1 ರಿಂದ 5 ತರಗತಿ ಮಕ್ಕಳಿಗೆ ಆನ್ಲೈನ್ ಪರೀಕ್ಷೆ, 6-9 ನೇ ತರಗತಿ ವಿದ್ಯಾರ್ಥಿಗಳಿಗೆ ಆನ್ಲೈನ್ ಪರೀಕ್ಷೆ ನಡೆಸುವ ಕುರಿತು ಚರ್ಚಿಸಬೇಕಿದೆ.