ಕರ್ನಾಟಕ

karnataka

By

Published : Apr 2, 2020, 12:12 PM IST

ETV Bharat / state

ಸಾಕು ಪ್ರಾಣಿ ಅಂಗಡಿಗಳ ಮೇಲೆ ದಾಳಿ: ಬಂಧಿಯಾಗಿದ್ದ ಜೀವಗಳ ರಕ್ಷಣೆ

ಮಾಲೀಕರು ಪೆಟ್ ಶಾಪ್​ಗಳನ್ನು ಬಂದ್ ಮಾಡಿಕೊಂಡು ಹೋಗಿರುವ ಪರಿಣಾಮ ಅನೇಕ ಪ್ರಾಣಿ, ಪಕ್ಷಿಗಳು ಆಹಾರ, ನೀರು ಇಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದವು.

pet shop
pet shop

ಬೆಂಗಳೂರು: ಕೊರೋನಾದಿಂದಾಗಿ ಲಾಕ್ ಡೌನ್ ಆದ ಪರಿಣಾಮ ಕೇವಲ ಜನ ಜೀವನದ ಮೇಲಷ್ಟೇ ಅಲ್ಲ ಪ್ರಾಣಿ, ಪಕ್ಷಿಗಳ ಮೇಲೆಯೂ ಅತೀವ ಪರಿಣಾಮ ಆಗುತ್ತಿರುವ ಪ್ರಕರಣಗಳು ಈಗಾಗಲೇ ದಾಖಲಾಗುತ್ತಲೇ ಇವೆ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿಯು ನಗರದ ಕೆಲ ಪ್ರಾಣಿ ದಯಾ ಸಂಘಗಳ ಜೊತೆಗೂಡಿ ಕಳೆದ ಭಾನುವಾರದಿಂದ ಹಲವು ಪೆಟ್ ಶಾಪ್​ಗಳ ಮೇಲೆ ಸತತ ದಾಳಿ ನಡೆಸುತ್ತಿದೆ.

ಎಲ್ಲ ಅಂಗಡಿ ಮುಂಗಟ್ಟುಗಳನ್ನ ಬಂದ್ ಮಾಡಲು ಸೂಚಿಸಿರುವುದನ್ನೇ ನೆಪ ಮಾಡಿಕೊಂಡ ಹಲವು ಮಾಲೀಕರುಗಳು ಪೆಟ್ ಶಾಪ್​ಗಳನ್ನು ಬಂದ್ ಮಾಡಿಕೊಂಡು ಹೋಗಿರುವ ಪರಿಣಾಮ ಅನೇಕ ಪ್ರಾಣಿ, ಪಕ್ಷಿಗಳು ಆಹಾರ, ನೀರು ಇಲ್ಲದೇ ಸಂಕಷ್ಟಕ್ಕೆ ಸಿಲುಕಿರುವ ಸಂಗತಿಗಳು ಈ ದಾಳಿಯ ವೇಳೆ ಅಧಿಕಾರಿಗಳಿಗೆ ಕಂಡುಬಂದಿವೆ.

ಪ್ರಾಣಿಗಳ ರಕ್ಷಣೆ

ಮೂರು ದಿನದಿಂದ ದಾಳಿ
ಸತತ ಮೂರು ದಿನಗಳಿಂದ ದಾಳಿ ಮಾಡುತ್ತಿರುವ ಕರ್ನಾಟಕ ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯರಾದ ಶಿವಾನಂದ್ ಡಂಬಳ್, ಇಂದೂ ದಾಳಿ ಮುಂದುವರೆಸಿದ್ದು, ಬೆಂಗಳೂರು ದಕ್ಷಿಣ ಭಾಗದ ಅನೇಕ ಪೆಟ್ ಶಾಪ್​ಗಳ ಸ್ಥಿತಿಗತಿಗಳನ್ನ ಪರಿಶೀಲಿಸಿದರು. ದಿಢೀರ್ ಎಂದು ಭೇಟಿ ನೀಡಿದ ಪರಿಣಾಮ ಅತೀವ ಸಂಕಷ್ಟದಲ್ಲಿರುವ ಪ್ರಾಣಿ, ಪಕ್ಷಿಗಳ ವಾಸ್ತವ ಸ್ಥಿತಿ ಅಧಿಕಾರಿಗಳ ಗಮನಕ್ಕೆ ಬಂದಿತು.

ಪೆಟ್​ ಶಾಪ್​ನಲ್ಲಿ ಸಿಲುಕಿದ್ದ ಪ್ರಾಣಿ-ಪಕ್ಷಿಗಳು

ಹಲವು ಶಾಪ್​ಗಳು ಸಂಬಂಧಪಟ್ಟ ಇಲಾಖೆಗಳಿಂದ ಅಧಿಕೃತ ಪರವಾನಗಿ ಪಡೆಯದೇ ರಾಜಾರೋಷವಾಗಿ ಪ್ರಾಣಿ ಪಕ್ಷಿಗಳನ್ನ ಹಿಡಿದು ಹಾಕಿರುವುದು, ಮಾರಾಟ ಮಾಡುತ್ತಿರುವುದು ಈ ದಾಳಿಯ ವೇಳೆ ಬಹಿರಂಗವಾಗಿದೆ. ಈ ಎಲ್ಲ ಅಂಗಡಿ ಮಾಲೀಕರುಗಳ ಮೇಲೆ ಸೂಕ್ತ ಕ್ರಮ ಜರುಗಿಸುವುದಾಗಿ ಅಧಿಕಾರಿಗಳು ತಿಳಿಸಿದರು.

ಪೆಟ್​ ಶಾಪ್​ನಲ್ಲಿ ಸಿಲುಕಿದ್ದ ಪ್ರಾಣಿ-ಪಕ್ಷಿಗಳು

13 ಶಾಪ್ ಮೇಲೆ ದಾಳಿ
ಈ ವೇಳೆ ದಾಳಿ ಕುರಿತು ಸಂಪೂರ್ಣ ಮಾಹಿತಿ ನೀಡಿದ ಕರ್ನಾಟಕ ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯರಾದ ಶಿವಾನಂದ್ ಡಂಬಳ್, "ಕಳೆದ ಮೂರು ದಿನಗಳಿಂದ ಸುಮಾರು 13 ಪೆಟ್ ಶಾಪ್​ಗಳ ಮೇಲೆ ದಾಳಿ ಮಾಡಲಾಗಿದೆ. ಈ ವೇಳೆ, ಅಂಗಡಿ ಮಾಲೀಕರುಗಳು ಇಲಾಖೆಯಿಂದ ಅನುಮತಿ ಪಡೆಯದೇ ವಿವಿಧ ಪ್ರಾಣಿ, ಪಕ್ಷಿಗಳನ್ನ ಸಾಕುತ್ತಿರುವುದು, ಮಾರಾಟ ಮಾಡುತ್ತಿರುವುದು, ಕೆಲವೆಡೆ ಅಗತ್ಯ ಕಾಳಜಿ ವಹಿಸದೇ ಕೂಡಿ ಹಾಕಿರುವುದು ಕಂಡು ಬಂದಿದೆ. ಅಂತಹ ಶಾಪ್​ಗಳನ್ನು ಸೀಜ್ ಮಾಡಿದ್ದೇವೆ. ಅಲ್ಲಿರುವ ಪ್ರಾಣಿ, ಪಕ್ಷಿಗಳನ್ನ ಪುನರ್ವಸತಿ ಕೇಂದ್ರಗಳಿಗೆ ಕಳಿಸಿದ್ದೇವೆ. ಈ ಕುರಿತು ಸಮಗ್ರ ವರದಿಯನ್ನ ಮೇಲಧಿಕಾರಿಗಳಿಗೆ ಸಲ್ಲಿಸಿ, ಆ ನಂತರದಲ್ಲಿ ದಾಳಿ ಮಾಡಿದ ಶಾಪ್ ಓನರ್​ಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು," ಎಂದು ಹೇಳಿದರು.

ಪೆಟ್​ ಶಾಪ್​ನಲ್ಲಿ ಸಿಲುಕಿದ್ದ ಪ್ರಾಣಿ-ಪಕ್ಷಿಗಳು

ದಯನೀಯ ಸ್ಥಿತಿ
ದಾಳಿಯ ವೇಳೆ ಅಲಸೂರನಲ್ಲಿನ ಪೆಟ್ ಶಾಪ್ ಒಂದರಲ್ಲಿ ಪ್ರಾಣಿ, ಪಕ್ಷಿಗಳು ತೀರಾ ದಯನೀಯ ಸ್ಥಿತಿಯಲ್ಲಿದ್ದದ್ದು ಕಂಡು ಬಂದಿತು. ಕಳೆದ ಮೂರ್ನಾಲ್ಕು ದಿನಗಳಿಂದ ಆಹಾರ ಇಲ್ಲದೇ ಒಳಗಡೆಯೇ ಪರದಾಡುತ್ತಿದ್ದ ಕರುಣಾಜನಕ ನೋಟ ಮನಕಲಕುವಂತಿತ್ತು. ಅದಾಗಲೇ ಅಲ್ಲಿ ಎರಡು ಮೊಲಗಳು ಪ್ರಾಣ ಬಿಟ್ಟಿದ್ದು, ದೇಹ ಕೊಳೆತು ದುರ್ನಾತ ಹರಡಿತ್ತು. ಮಾಲೀಕರು ಕಳೆದ ಕೆಲ ದಿನಗಳಿಂದ ಶಾಪ್ ತೆರೆದೇ ಇಲ್ಲ ಎಂಬುದು ಅಲ್ಲಿನ ಸ್ಥಿತಿಯಿಂದ ಸ್ಪಷ್ಟವಾಗಿ ಮನವರಿಕೆಯಾಗುತ್ತಿತ್ತು. ಈ ವೇಳೆ ಶಾಪ್​ನ ಮಾಲೀಕರಿಗೆ ವಾರ್ನ್ ಮಾಡಿದ ಶಿವಾನಂದ ಡಂಬಳ್ ಪ್ರಾಣಿ, ಪಕ್ಷಿಗಳನ್ನ ಅಲ್ಲಿಂದ ಬಿಡುಗಡೆಗೊಳಿಸಿ ಕೂಡಲೇ ಪುನರ್ವಸತಿ ಕೇಂದ್ರಗಳಿಗೆ ರವಾನಿಸಿದರು.

ಪೆಟ್​ ಶಾಪ್​ನಲ್ಲಿ ಸಿಲುಕಿದ್ದ ಪ್ರಾಣಿ-ಪಕ್ಷಿಗಳು

ಎಲ್ಲೆಲ್ಲಿ ದಾಳಿ?
ಕಳೆದ ಮೂರು ದಿನಗಳಿಂದ ಆಯಿಲ್ ಮಿಲ್ ರೋಡ್, ಅಶೋಕ್ ಪಿಲ್ಲರ್, ಕೋರಮಂಗಲ, ಮಹಾಲಕ್ಷ್ಮೀ ಲೇ ಔಟ್, ಶಿವಾಜಿನಗರ, ಬಸವೇಶ್ವರನಗರ, ಅಲಸೂರು ಹೀಗೆ ನಗರದ ವಿವಿಧ ಭಾಗಗಳಲ್ಲಿ ಪೆಟ್ ಶಾಪ್​ಗಳ ಮೇಲೆ ದಾಳಿ ಮಾಡಲಾಗಿದೆ. ಎಲ್ಲೆಲ್ಲಿ ಅನಧಿಕೃತವಾಗಿ ಪ್ರಾಣಿ, ಪಕ್ಷಿಗಳನ್ನ ಕೂಡಿ ಹಾಕಲಾಗಿದೆಯೋ ಅಲ್ಲಿಂದ ಅವುಗಳನ್ನ ಮುಕ್ತಗೊಳಿಸಲಾಗಿದೆ. ಹಾಗೆಯೇ ದಾಳಿಯಲ್ಲಿ ಒಟ್ಟು 2 ಪರ್ಶಿಯನ್ ಬೆಕ್ಕುಗಳು, 8 ಮೊಲಗಳು, 10 ಪಾರಿವಾಳಗಳು, ವೈವಿಧ್ಯಮಯ ಗಿಣಿಗಳು, ಲವ್ ಬಡ್ರ್ಸ್ ಸೇರಿದಂತೆ 100ಕ್ಕೂ ಅಧಿಕ ಪಕ್ಷಿಗಳನ್ನ ಶಾಪ್​ಗಳಿಂದ ಮುಕ್ತಗೊಳಿಸಿ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗಿದೆ.

ಪೆಟ್​ ಶಾಪ್​ನಲ್ಲಿ ಸಿಲುಕಿದ್ದ ಪ್ರಾಣಿ-ಪಕ್ಷಿಗಳು

ಈ ಮೂಲಕ ಎಲ್ಲಾ ಪೆಟ್ ಶಾಪ್ ಮಾಲೀಕರಿಗೂ ಕಡ್ಡಾಯವಾಗಿ ಅಂಗಡಿ ತೆರೆದಿಟ್ಟುಕೊಳ್ಳುವಂತೆ ಸೂಚಿಸಿದ ಕರ್ನಾಟಕ ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯ ಶಿವಾನಂದ್ ಡಂಬಳ್, ಈ ನಿಟ್ಟಿನಲ್ಲಿ ಯಾವುದೇ ನೆರವಿನ ಅಗತ್ಯವಿದ್ದರೂ ತಮ್ಮ ಗಮನಕ್ಕೆ ತರಬೇಕೆಂದು ತಿಳಿಸಿದ್ದಾರೆ. ಹಾಗೆಯೇ ಪ್ರಾಣಿ, ಪಕ್ಷಿಗಳನ್ನ ಮಾರಾಟ ಮಾಡಲು ಪಶುಸಂಗೋಪನಾ ಇಲಾಖೆಯಿಂದ ಅನುಮತಿ ಪಡೆಯಲೇಬೇಕು. ಇಲ್ಲವಾದಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ABOUT THE AUTHOR

...view details