ಬೆಂಗಳೂರು :ಗ್ರಾಮಾಂತರ ಭಾಗದಲ್ಲೇ ಅನೀಮಿಯಾ ಹೆಚ್ಚಾಗುತ್ತಿದ್ದು, ಇದನ್ನ ತಡೆಗಟ್ಟವ ನಿಟ್ಟಿನಲ್ಲಿ, ಆರೋಗ್ಯ ಇಲಾಖೆ ಇಂದು ಅನೀಮಿಯಾ ಮುಕ್ತ ಭಾರತ ಎಂಬ ಅಭಿಯಾನ ಕಾರ್ಯಕ್ರಮ ಹಮ್ಮಿಕೊಂಡಿದೆ. ಕಾರ್ಯಕ್ರಮದಲ್ಲಿ ಎಲ್ಲ ಜಿಲ್ಲೆಗಳಿಂದ ವೈದ್ಯರು, ತಜ್ಞರು ಭಾಗಿಯಾಗಿ, ತಮ್ಮತಮ್ಮ ಭಾಗಗಳಲ್ಲಿ ಯಾವ ರೀತಿಯಲ್ಲಿ ಅನೀಮಿಯಾ ಪ್ರಮಾಣವನ್ನು ಕಡಿಮೆ ಮಾಡಬಹುದು ಎಂಬುದರ ಬಗ್ಗೆ ಚರ್ಚೆ ನಡೆಸಲಾಯಿತು.
ಅನೀಮಿಯ ಎಂದರೆ ?
ಅನೀಮಿಯ ಎಂದರೆ ರಕ್ತಹೀನತೆ ಎಂದರ್ಥ. ರಕ್ತ ಹೀನತೆಯ ಗಂಭೀರತೆಯಿಂದ ಬಳಲುತ್ತಿರುವ ದೇಶಗಳಲ್ಲಿ ಭಾರತವು ಸಹ ಒಂದು ದೇಶವಾಗಿದೆ. ನಮ್ಮ ದೇಶದ ಪ್ರತಿಶತ 50ರಷ್ಟು ಗರ್ಭಿಣಿಯರು, ಶೇ.54 ರಷ್ಟು ಹದಿಹರೆಯದವರಲ್ಲಿ ಶೇ.59 ರಷ್ಟು 5 ವರ್ಷದೊಳಗಿನ ಮಕ್ಕಳು ಶೇ 3ರಷ್ಟುಗರ್ಭಿಣಿಯರಲ್ಲಿ ರಕ್ತಹೀನತೆಯಿಂದ ಬಳಲುತ್ತಿದ್ದಾರೆ.
ಅನೀಮಿಯ ಪರಿಣಾಮಗಳು
ರಕ್ತಹೀನತೆಯ ಮಕ್ಕಳಲ್ಲಿ ಅರಿವು ಮತ್ತು ಬೌದ್ಧಿಕ ಬೆಳವಣಿಗೆಯನ್ನು ದುರ್ಬಲಗೊಳಿಸುತ್ತದೆ. ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ವಯಸ್ಕರಲ್ಲಿ ಕೆಲಸದ ಸಾಮರ್ಥ್ಯ ಮತ್ತು ಉತ್ಪಾದಕತೆ ಕುಂಠಿತಗೊಳಿಸುತ್ತದೆ. ಗರ್ಭಾವಸ್ಥೆಯಲ್ಲಿ ತಾಯಿ ಮತ್ತು ಶಿಶುವಿನ ಅಸ್ವಸ್ಥತೆ ಮತ್ತು ಸಾವಿನ ಪ್ರಮಾಣದ ಹೆಚ್ಚಳಕ್ಕೆ ಇದು ಕಾರಣವಾಗುತ್ತದೆ. ರಕ್ತಹೀನತೆಯ ಪ್ರಸೂತಿ ಸಂದರ್ಭದ ಅಪಾಯಗಳು ಅಸಮರ್ಪಕ ಭ್ರೂಣದ ಬೆಳವಣಿಗೆ, ಕಡಿಮೆ ತೂಕದ ಶಿಶು ಜನನ, ನರ ಕೊಳವೆಯಲ್ಲಿ ದೋಷ, ಪ್ರಸವಪೂರ್ವ ಮರಣ, ಅವಧಿ ಪೂರ್ವ ಜನನ ಹೆರಿಗೆಯ ನಂತರ ರಕ್ತಸ್ರಾವ ಮತ್ತು ತಾಯಿ ಮರಣಗಳಿಗೆ ಕಾರಣವಾಗುತ್ತದೆ.
ಅಂದಹಾಗೇ, ರಾಷ್ಟ್ರೀಯ ಆರೋಗ್ಯ ಮತ್ತು ಕುಟುಂಬ ಸಮೀಕ್ಷೆ -4ರ ಪ್ರಕಾರ ನಮ್ಮ ದೇಶದಲ್ಲಿ ಶೇ 53ರಷ್ಟು ಸಂತಾನೋತ್ಪತ್ತಿ ವಯಸ್ಸು (15-49 ವರ್ಷ) ಮಹಿಳೆಯರು, ಶೇ.23ರಷ್ಟು ಪುರುಷರು, ಶೇ.50ರಷ್ಟು ಗರ್ಭಿಣಿಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ.