ಬೆಂಗಳೂರು:ಬೆಳಗಾವಿಯ ಸವದತ್ತಿ ಯಲ್ಲಮ್ಮ ಕ್ಷೇತ್ರದ ಶಾಸಕ ಆನಂದ್ ಮಾಮನಿ ಅವರು ವಿಧಾನಸಭೆಯ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಶಾಸಕ ಆನಂದ್ ಮಾಮನಿ ವಿಧಾನಸಭೆಯ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆ
ಮೂರು ಬಾರಿ ಶಾಸಕರಾಗಿರುವ ಆನಂದ್ ಅಲಿಯಾಸ್ ವಿಶ್ವನಾಥ ಚಂದ್ರಶೇಖರ್ ಮಾಮನಿ ಅವರು ವಿಧಾನಸಭೆಯ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇಂದು ವಿಧಾನಸಭೆ ಕಲಾಪ ಆರಂಭಗೊಳ್ಳುತ್ತಿದ್ದಂತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಉಪಾಧ್ಯಕ್ಷ ಚುನಾವಣೆಯ ಪ್ರಕ್ರಿಯೆ ಆರಂಭಿಸಿದರು. ಮೂರು ಬಾರಿ ಶಾಸಕರಾಗಿರುವ ಆನಂದ್ ಅಲಿಯಾಸ್ ವಿಶ್ವನಾಥ ಚಂದ್ರಶೇಖರ್ ಮಾಮನಿ ಅವರನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉಪಾಧ್ಯಕ್ಷ ಸ್ಥಾನಕ್ಕೆ ಸೂಚಿಸಿದರು. ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅನುಮೋದಿಸಿದರು. ನೂತನ ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಆನಂದ್ ಮಾಮನಿ ಅವರ ತಂದೆ ಚಂದ್ರಶೇಖರ ಮಲ್ಲಿಕಾರ್ಜುನ ಮಾಮನಿ ಕೂಡ ವಿಧಾನಸಭಾ ಉಪಾಧ್ಯಕ್ಷರಾಗಿದ್ದು, ನಾನು ಮೊದಲ ಬಾರಿ ಶಾಸಕನಾಗಿ ಆಯ್ಕೆಯಾಗಿ ಬಂದಾಗ ನಮಗೆಲ್ಲ ಎಸ್ಟಿಡಿ ಸೌಲಭ್ಯ ಇರಲಿಲ್ಲ. ಉಪಾಧ್ಯಕ್ಷರ ಕಚೇರಿಗೆ ಹೋಗಿ ಫೋನ್ ಸೌಲಭ್ಯ ಬಳಸಿಕೊಂಡು ಊರಿಗೆ ಕರೆ ಮಾಡುತ್ತಿದ್ದೆ ಎಂದು ನೆನಪಿಸಿದರು. ಇನ್ನು ಸವದತ್ತಿ ಯಲ್ಲಮ್ಮ ವಿಧಾನಸಭಾ ಕ್ಷೇತ್ರ ಇಂದು ಅಭಿವೃದ್ಧಿ ಕಾಣಬೇಕಾದರೆ ಯಲ್ಲಮ್ಮನ ಕೃಪೆ ಮತ್ತು ಚಂದ್ರಶೇಖರ ಮಲ್ಲಿಕಾರ್ಜುನ ಮಾಮನಿ ಅವರ ಕೊಡುಗೆ ಅಪಾರವಾಗಿದೆ. ಆ ಕ್ಷೇತ್ರದ 25 ಗ್ರಾಮಗಳಿಗೆ ಗುರುತ್ವಾಕರ್ಷಣೆ ಮೂಲಕ ಕಾಲುವೆ ನಿರ್ಮಿಸಿ ನೀರು ಪೂರೈಸಿದ ಕೀರ್ತಿ ಮಾಮನಿ ಕುಟುಂಬಕ್ಕೆ ಸಲ್ಲುತ್ತದೆ ಎಂದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಮಾತನಾಡಿ, ಆನಂದ್ ಮಾಮನಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರ ಹುದ್ದೆಯನ್ನು ಉತ್ತಮವಾಗಿ ನಿರ್ವಹಿಸುತ್ತಾರೆ. ಸ್ಪೀಕರ್ ಅವರ ಜೊತೆ ಕೈ ಜೋಡಿಸಿ ಒಳ್ಳೆಯ ಕೆಲಸ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದರು. ಜಗದೀಶ್ ಶೆಟ್ಟರ್, ಅಭಯ್ ಪಾಟೀಲ್, ಶಶಿಕಲಾ ಜೊಲ್ಲೇ, ಜೆಡಿಎಸ್ ನ ಹೆಚ್.ಡಿ.ರೇವಣ್ಣ, ಎ.ಟಿ.ರಾಮಸ್ವಾಮಿ, ಡಿಸಿಎಂ ಗೋವಿಂದ ಕಾರಜೋಳ ಮತ್ತಿತರರು ನೂತನ ಉಪಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು.