ಬೆಂಗಳೂರು:ಕರ್ನಾಟಕ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ರಾಜಕೀಯ ಪಕ್ಷಗಳು ಬಿರುಬಿಸಿನಲ್ಲಿ ಬಿರುಸಿನ ಪ್ರಾಚಾರದಲ್ಲಿ ತೊಡಗಿವೆ. ಕ್ಷೇತ್ರ ರಣಕಣದ ಹುರಿಯಾಳುಗಳ ಆಯ್ಕೆ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಸದ್ಯದ ಸನ್ನಿವೇಶದಲ್ಲಿ ರಾಜ್ಯದಲ್ಲಿ ಕೆಲ ಕ್ಷೇತ್ರಗಳಲ್ಲಿ ಚುನಾವಣಾ ಕದನ ಕುತೂಹಲಕ್ಕೆ ಕಾರಣವಾಗಿದೆ.
ಮೇ 10 ವಿಧಾನಸಭೆ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ. ಚುನಾವಣೆ ದಿನಾಂಕ ಘೋಷಣೆ ಆಗ್ತಾ ಇದ್ದ ಹಾಗೇ ರಾಜ್ಯದಲ್ಲಿ ಚುನಾವಣಾ ರಣಕಣ ರಂಗೇರುತ್ತಿದೆ. ರಾಜಕೀಯ ಪಕ್ಷಗಳು ಕ್ಷೇತ್ರಗಳ ಅಭ್ಯರ್ಥಿ ಹೆಸರುಗಳನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿವೆ. ಈಗಾಗಲೇ ಕೆಲ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಹೆಸರಿಸಲಾಗಿದೆ. ಜಯಭೇರಿ ಬಾರಿಸಲು ರಾಜಕೀಯ ಪಕ್ಷಗಳು ಚುನಾವಣಾ ಆಖಾಡದಲ್ಲಿ ನಾನಾ ಕಸರತ್ತು ಆರಂಭಿಸಿವೆ.
ಈ ಬಾರಿಯ ಚುನಾವಣೆ ಅತ್ಯಂತ ಜಿದ್ದಾಜಿದ್ದಿನಿಂದ ಕೂಡಿರಲಿದೆ. ಅದರಲ್ಲೂ ಕೆಲ ಕ್ಷೇತ್ರಗಳಲ್ಲಂತೂ ಚುನಾವಣಾ ಕಣ ರಣರೋಚಕವಾಗಿದೆ. ರಾಜ್ಯದಲ್ಲಿ ಡಜನ್ಗೂ ಹೆಚ್ಚು ಹೈ ಪ್ರೊಫೈಲ್ ಕ್ಷೇತ್ರಗಳು ಕದನ ಕುತೂಹಲಕ್ಕೆ ಕಾರಣವಾಗಿದೆ. ಕೆಲ ಪ್ರಮುಖರ ಕ್ಷೇತ್ರಗಳಲ್ಲಿ ತೀವ್ರ ಪೈಪೋಟಿ ಏರ್ಪಡುತ್ತಿದೆ. ಹೀಗಾಗಿ ಈ ಬಾರಿ ಚುನಾವಣೆಯಲ್ಲಿ ಕೆಲ ಕ್ಷೇತ್ರಗಳ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
ಕದನ ಕುತೂಹಲ ಮೂಡಿರುವ ಕ್ಷೇತ್ರ ಯಾವುದು?:
ವರುಣಾ ಕ್ಷೇತ್ರ: ಈ ಬಾರಿ ಕದನ ಕುತೂಹಲ ಕೆರಳಿಸಿರುವ ಕ್ಷೇತ್ರವಾಗಿದೆ. ಕಾರಣ ಈ ಕ್ಷೇತ್ರದ ಸ್ಪರ್ಧಾಳು ಮಾಜಿ ಸಿಎಂ ಸಿದ್ದರಾಮಯ್ಯ. ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯಗೆ ವರುಣಾ ಕ್ಷೇತ್ರದಲ್ಲಿ ಟಿಕೆಟ್ ನೀಡಿದೆ. 2018ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಜೆ.ಟಿ. ದೇವೇಗೌಡ ಎದುರು 1,996 ಮತಗಳ ಅಂತರದಿಂದ ಸೋತಿದ್ದ ಸಿದ್ದರಾಮಯ್ಯ, ಬಾದಾಮಿಯಲ್ಲಿ ಶ್ರೀರಾಮುಲು ವಿರುದ್ಧ ಗೆಲುವು ಸಾಧಿಸಿದ್ದರು. ಈಗ ತನ್ನ ತಂದೆಗಾಗಿ ಕ್ಷೇತ್ರವನ್ನು ಪುತ್ರ ಯತೀಂದ್ರ ಬಿಟ್ಟು ಕೊಟ್ಟಿದ್ದಾರೆ.
ಶಿಗ್ಗಾಂವಿ ಕ್ಷೇತ್ರ:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಸ್ವಕ್ಷೇತ್ರ. 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಯ್ಯದ್ ಅಜೀಂ ಪ್ರೀಮ್ ಖಾದ್ರಿ ವಿರುದ್ಧ 9,265 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಈ ಬಾರಿ ಬದಲಾದ ರಾಜಕೀಯ ಲೆಕ್ಕಾಚಾರದೊಂದಿಗೆ ಶಿಗ್ಗಾವಿ ಕ್ಷೇತ್ರವೂ ಕದನ ಕುತೂಹಲಕ್ಕೆ ಕಾರಣವಾಗಿದೆ. ಮೀಸಲಾತಿ ಗೊಂದಲ ಹಿನ್ನೆಲೆ ಸಿಎಂ ಬೊಮ್ಮಾಯಿಗೆ ಶಿಗ್ಗಾಂವಿ ಕ್ಷೇತ್ರ ಈಗ ಕಬ್ಬಿಣದ ಕಡಲೆಯಂತಾಗಿದೆ. ಅದರಲ್ಲೂ ಕಾಂಗ್ರೆಸ್ ಕ್ಷೇತ್ರದಲ್ಲಿ ಪಂಚಮಸಾಲಿ ಸಮುದಾಯದ ವಿನಯ್ ಕುಲಕರ್ಣಿಯನ್ನು ಕಣಕ್ಕಿಳಿಸಲು ಚಿಂತಿಸುತ್ತಿದೆ. ಇದರಿಂದ ಕ್ಷೇತ್ರದಲ್ಲಿ ತೀವ್ರ ಪೈಪೋಟಿ ಏರ್ಪಡುವುದು ಖಚಿತವಾಗಿದೆ.
ಹಾಸನ ಕ್ಷೇತ್ರ: ಬಿಜೆಪಿಯ ಪ್ರೀತಂ ಗೌಡ ಜೆಡಿಎಸ್ ಪ್ರಾಬಲ್ಯವನ್ನು ಮುರಿದು ಹಾಸನ ಕ್ಷೇತ್ರದಲ್ಲಿ ವಿಜಯಪಾತಾಕೆ ಹಾರಿಸಿದ್ದರು. ಕಳೆದ ಬಾರಿ ಸುಮಾರು 13 ಸಾವಿರ ಮತಗಳ ಅಂತರದಿಂದ ಜೆಡಿಎಸ್ ಹೆಚ್ಎಸ್ ಪ್ರಕಾಶ್ ಅವರನ್ನು ಸೋಲಿಸಿದ್ದರು. ಇದೀಗ ಹಾಸನಕ್ಕೆ ಪ್ರೀತಂ ಗೌಡ ಹುರಿಯಾಳಾಗುವುದು ಖಚಿತ. ಆದರೆ ಈ ಬಾರಿ ಜೆಡಿಎಸ್ಗೆ ಕೌಟುಂಬಿಕ ಕಲಹ ಎದುರಾಗಿದ್ದು, ದೇವೇಗೌಡರ ಸೊಸೆ ಹೆಚ್.ಡಿ ರೇವಣ್ಣ ಅವರ ಪತ್ನಿ ಭವಾನಿ ಹಾಸನದಿಂದ ಸ್ಪರ್ಧಿಸಲು ಟಿಕೆಟ್ಗೆ ಪಟ್ಟು ಹಿಡಿದಿದ್ದಾರೆ.
ಇತ್ತ ಮಾಜಿ ಸಿಎಂ ಕುಮಾರಸ್ವಾಮಿ ಸ್ವರೂಪ್ ಅವರನ್ನು ಕಣಕ್ಕಿಳಿಸಲು ಮುಂದಾಗಿದ್ದಾರೆ. ಹೀಗಾಗಿ ಈ ಬಾರಿ ಹಾಸನದಲ್ಲಿ ಯಾರಾಗಲಿದ್ದಾರೆ ಜೆಡಿಎಸ್ ಅಭ್ಯರ್ಥಿ ಎಂಬುದು ಎಲ್ಲರ ಕೌತುಕ. ಹೀಗಾಗಿ ಹಾಸನ ಅಖಾಡ ಮತ್ತೊಂದು ಹೈ ಪ್ರೊಫೈಲ್ ಕದನ ಕುತೂಹಲದ ಕ್ಷೇತ್ರವಾಗಿದೆ.
ಕೋಲಾರ ಕ್ಷೇತ್ರ: ಕೋಲಾರ ಈ ಬಾರಿಯ ಮತ್ತೊಂದು ಹೈ ಪ್ರೊಪೈಲ್ ಕ್ಷೇತ್ರವಾಗುವ ಸಾಧ್ಯತೆ ಹೆಚ್ಚಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಟ್ರಿ ಈ ಕ್ಷೇತ್ರದ ಕದನ ಕುತೂಹಲವನ್ನು ಹೆಚ್ಚಿಸಿದೆ. ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸಲು ಇಚ್ಛೆ ವ್ಯಕ್ತಪಡಿಸಿದ್ದಾರೆ. ವರುಣಾ ಜೊತೆ ಕೋಲಾರದಲ್ಲೂ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಬಹುತೇಕ ಸಿದ್ದರಾಮಯ್ಯಗೆ ಹೈಕಮಾಂಡ್ ಕೋಲಾರ ಟಿಕೆಟ್ ನೀಡುವ ಸಾಧ್ಯತೆ ಇದೆ.
ಸಿದ್ದರಾಮಯ್ಯ ಕೋಲಾರ ಅಖಾಡಕ್ಕಿಳಿದರೆ, ರಾಜಕೀಯ ಚಿತ್ರಣ ಬದಲಾಗಲಿದೆ. ಕೋಲಾರ ರಣಕಣ ಭಾರೀ ಜಿದ್ದಾಜಿದ್ದಿನಿಂದ ಕೂಡಲಿದೆ. ಜೆಡಿಎಸ್ ಹಾಗೂ ಬಿಜೆಪಿ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಮುಂದಾಗಿದ್ದು, ಸಿದ್ದರಾಮಯ್ಯಗೆ ತೀವ್ರ ಪೈಪೋಟಿ ನೀಡಲು ನಿರ್ಧರಿಸಿದೆ. ಇತ್ತ ಕಾಂಗ್ರೆಸ್ನಲ್ಲಿನ ಆಂತರಿಕ ಕಲಹವೂ ಕೋಲಾರ ರಣಕಣದ ಕದನ ಕೌತುಕವನ್ನು ಇಮ್ಮಡಿಗೊಳಿಸಲಿದೆ.
ರಾಮನಗರ ಕ್ಷೇತ್ರ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರ ಸೊಸೆ ಹಾಗೂ ಹೆಚ್ ಡಿ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಗೆದ್ದು ಶಾಸಕರಾಗಿದ್ದರು. ಈ ಬಾರಿ ನಿಖಿಲ್ ಕುಮಾರ ಸ್ವಾಮಿ ಸ್ಪರ್ಧಿಸುತ್ತಿದ್ದಾರೆ. ತಮ್ಮ ಮಗನಿಗೆ ಹಾಲಿ ಶಾಸಕಿ ಅನಿತಾ ಕುಮಾರಸ್ವಾಮಿ ಕ್ಷೇತ್ರ ಬಿಟ್ಟು ಕೊಟ್ಟಿದ್ದಾರೆ. ಮಾಜಿ ಸಿಎಂ ಪುತ್ರ ಕಣಕ್ಕಿಳಿದಿರುವುದರಿಂದ ರಾಮನಗರ ಕ್ಷೇತ್ರ ಹೈ ಪ್ರೊಫೈಲ್ ಕ್ಷೇತ್ರವಾಗಿ ಬದಲಾಗಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಈ ಕ್ಷೇತ್ರದಲ್ಲಿ ತನ್ನದೇ ಲೆಕ್ಕಾಚಾರದೊಂದಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ.
ಚನ್ನಪಟ್ಟಣ ಕ್ಷೇತ್ರ: 2018ರಲ್ಲಿ ರಾಮನಗರದ ಬದಲು ಇಲ್ಲಿಂದ ಸ್ಪರ್ಧಿಸಿದ್ದ ಹೆಚ್ ಡಿ ಕುಮಾರಸ್ವಾಮಿ, ಸಿ.ಪಿ. ಯೋಗೇಶ್ವರ್ ಅವರನ್ನು ಸೋಲಿಸಿದ್ದರು. ಕುಮಾರಸ್ವಾಮಿ ಮತ್ತೆ ಅದೇ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಸಹಜವಾಗಿಯೇ ಈ ಕ್ಷೇತ್ರ ಹೈ ಪ್ರೊಫೈಲ್ ರಣಕಣ. ಬಿಜೆಪಿಯಿಂದ ಪ್ರಬಲ ಅಭ್ಯರ್ಥಿ ಕ್ಷೇತ್ರದ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಕುಮಾರಸ್ವಾಮಿ ಹಾಗೂ ಸಿ.ಪಿ.ಯೋಗೇಶ್ವರ್ ಮಧ್ಯೆ ಹಿಂದಿನಿಂದಲೂ ಜಿದ್ದು ಇದ್ದು, ಈ ಬಾರಿಯ ಚುನಾವಣೆಯಲ್ಲಿ ಅದು ಪ್ರತಿಬಿಂಬಿಸಲಿದೆ. ಹೀಗಾಗಿ ಕ್ಷೇತ್ರದಲ್ಲಿ ಹೈ ಪ್ರೊಫೈಲ್ ಪೈಪೋಟಿ ಏರ್ಪಡಲಿದ್ದು, ರಣರೋಚಕವಾಗಿರಲಿದೆ.