ಬೆಂಗಳೂರು :ನಾಳೆ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಕೃಷಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ಶಿಕ್ಷಣ, ಉನ್ನತ ಶಿಕ್ಷಣ, ಆರ್ಥಿಕ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಹಾಗೂ ಲೋಕೋಪಯೋಗಿಯೂ ಸೇರಿದಂತೆ ಹಲವು ಇಲಾಖೆಗಳಿಗೆ ಸಂಬಂಧಿಸಿದ ಮಹತ್ವದ ಅನುಮೋದನೆ ದೊರೆಯುವ ಸಾಧ್ಯತೆ ಇದೆ.
ಇದರ ಜೊತೆಗೆ ಹಲವು ತಿದ್ದುಪಡಿ ವಿಧೇಯಕಕ್ಕೆ ಅನುಮೋದನೆ ಸಿಗಲಿದೆ ಎಂದು ಹೇಳಲಾಗುತ್ತಿದೆ. ರಾಜ್ಯದಲ್ಲಿ 2020 -21ನೇ ಸಾಲಿನಿಂದ 2022-23ನೇ ಸಾಲಿನವರೆಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅನುಷ್ಠಾನ ಸಂಬಂಧ ಕ್ಲಸ್ಟರ್ವಾರು ವಿಮಾ ಸಂಸ್ಥೆಗಳನ್ನು ನಿಗದಿಪಡಿಸಿ ಆದೇಶ ಹೊರಡಿಸಿರುವ ಕ್ರಮಕ್ಕೆ ಅನುಮೋದನೆ ನೀಡುವ ಬಗ್ಗೆ ನಾಳಿನ ಸಂಪುಟದಲ್ಲಿ ಚರ್ಚೆ ನಡೆಯಲಿದೆ.
ಕರ್ನಾಟಕ ಕೃಷಿ ಬೆಲೆ ಆಯೋಗವನ್ನು 3ನೇ ಅವಧಿಗೆ (2020-2023) ಮುಂದುವರೆಸಲು ಅನುಮೋದನೆ ನೀಡುವ ಬಗ್ಗೆ ರಾಜ್ಯದಲ್ಲಿ ಜಲಾನಯನ ಅಭಿವೃದ್ಧಿ ಯೋಜನೆಯನ್ನು ವಿಶ್ವಬ್ಯಾಂಕ್ ನೆರವಿನೊಂದಿಗೆ ಅನುಷ್ಠಾನಗೊಳಿಸುವ ಬಗ್ಗೆ ಚರ್ಚೆ ನಡೆಯಲಿದೆ. ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ಖಾಲಿ ಇರುವ ಅಪರ ನಿಬಂಧಕರ ಹುದ್ದೆಗಳಿಗೆ ನಿವೃತ್ತ ನ್ಯಾಯಾಧೀಶರನ್ನು ಗುತ್ತಿಗೆ ಆಧಾರದ ಮೇಲೆ ಮರು ನೇಮಕ ಮಾಡುವ ಬಗ್ಗೆ, ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆಯಡಿ ಕೈಗೊಂಡ ಕಾಮಗಾರಿಗಳಿಗೆ ಸಂಬಂಧಿಸಿದಂತೆ ತಾಂತ್ರಿಕ ಸಲಹಾ ಸಮಿತಿ ಸಲಹೆಗಳನ್ನು ಅನುಮೋದಿಸುವ ಹಾಗೂ ಒಟ್ಟು 77 ಯೋಜನೆಗಳ ಪೈಕಿ 25 ಯೋಜನೆಗಳಿಗೆ ಹೊಂದಾಣಿಕೆ ಪರಿಗಣಿಸುವ ಬಗ್ಗೆ ಅನುಮೋದನೆ ಸಿಗಿಲಿದೆ ಎನ್ನಲಾಗಿದೆ.
ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ತಿದ್ದುಪಡಿ) ವಿಧೇಯಕ 20-20ಕ್ಕೆ ಅನುಮೋದನೆ ನೀಡುವ ಬಗ್ಗೆ, ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕ 20-20ಕ್ಕೆ ಅನುಮೋದನೆ, ಕರ್ನಾಟಕ ಮಾಹಿತಿ ತಂತ್ರಜ್ಞಾನ ಕಾರ್ಯನೀತಿ 2020-25ಕ್ಕೆ ಅನುಮೋದನೆ ಸಿಗಲಿದೆ ಎನ್ನಲಾಗ್ತಿದೆ. ಕೇಂದ್ರ ಪುರಸ್ಕೃತ ಯೋಜನೆಯಡಿ ಹಾವೇರಿಯಲ್ಲಿ ಹೊಸ ವೈದ್ಯಕೀಯ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿಯ ಪರಿಷ್ಕೃತ ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ. ಅದೇ ರೀತಿ ಯಾದಗಿರಿಯಲ್ಲಿ ಹೊಸ ವೈದ್ಯಕೀಯ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿಯ ಪರಿಷ್ಕೃತ ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ಸಿಗಲಿದೆ.
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಪೊನ್ನಂಪೇಟೆಯ ಪ್ರವಾಸಿ ಮಂದಿರದ ಆವರಣದಲ್ಲಿ ನ್ಯಾಯಾಲಯ ಸಂಕೀರ್ಣ ಕಟ್ಟಡ ನಿರ್ಮಾಣ ಕಾಮಗಾರಿಯ ಪರಿಷ್ಕೃತ ಅಂದಾಜು ಮೊತ್ತ 13. 08 ಕೋಟಿ ರೂ.ಗಳಿಗೆ ಅನುಮೋದನೆ ನೀಡುವ ಸಾಧ್ಯತೆ ಇದೆ. ವಿದ್ಯುನ್ಮಾನ ವ್ಯವಸ್ಥೆಗಳ ವಿನ್ಯಾಸ ಮತ್ತು ತಯಾರಿಕೆ ವಲಯಕ್ಕಾಗಿ ವಿಶೇಷ ಪ್ರೋತ್ಸಾಹಕಗಳ ಯೋಜನೆಗೆ ಅನುಮೋದನೆ ದೊರೆಯುವ ಸಾಧ್ಯತೆ ಇದೆ.
ಕರ್ನಾಟಕ ಮುನಿಸಿಪಲ್ ಕಾರ್ಪೊರೇಷನ್ (ಎರಡನೇ ತಿದ್ದುಪಡಿ) ವಿಧೇಯಕ 2020ಕ್ಕೆ ಅನುಮೋದನೆ ಸಿಗುವ ಸಾಧ್ಯತೆ ಇದೆ. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನ ಐದು ಗ್ರಾಮಪಂಚಾಯತ್‌ಗಳಲ್ಲಿ ಬರುವ 84 ಸಣ್ಣನೀರಾವರಿ/ಜಿಲ್ಲಾ ಪಂಚಾಯತ್ ಕೆರೆಗಳನ್ನು ಬೇಡ್ತಿ ನದಿಯ ಉಪನದಿಯಾದ ಕವಳಗಿ ಹಳ್ಳದಿಂದ ತುಂಬಿಸುವ ಯೋಜನೆಯ 225 ಕೋಟಿ ರೂ. ಮೊತ್ತದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡಿರುವ ಕ್ರಮಕ್ಕೆ ಘಟನೋತ್ತರ ಅನುಮೋದನೆ ಸಿಗುವ ಸಾಧ್ಯತೆ ಇದೆ.