ಬೆಂಗಳೂರು: ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿದೆ ಎನ್ನುವುದು ನಿಜ. ಆದರೆ, ಇತರ ದೇಶಗಳ ರೂಪಾಯಿ ಜೊತೆಯಲ್ಲಿಯೂ ನಮ್ಮ ರೂಪಾಯಿ ಮೌಲ್ಯವನ್ನು ಹೋಲಿಕೆ ಮಾಡಿ ನೋಡಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಭಾರತ ಸರ್ಕಾರದ ಸಂಸ್ಕೃತಿ ಮಂತ್ರಾಲಯ ಮತ್ತು ಭಾರತೀಯ ಕೈಗಾರಿಕಾ ಒಕ್ಕೂಟ ನಗರದಲ್ಲಿ ಆಯೋಜಿಸಿದ್ದ ಸಂಕಲ್ಪದಿಂದ ಸಿದ್ಧಿ ಸಮ್ಮೇಳನದ ಮೂರನೇ ಆವೃತ್ತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೊರೊನಾ ನಂತರ ಭಾರತದ ಜಿಡಿಪಿ 7.4 ಆಗಿದೆ. ವಿಶ್ವದ ಶ್ರೀಮಂತ ರಾಷ್ಟ್ರಗಳ ಜಿಡಿಪಿ ಬಿದ್ದು ಹೋಗಿದೆ. Ease of doing business ನಲ್ಲಿ 143 ನೇ ಸ್ಥಾನದಿಂದ 63 ಕ್ಕೆ ಬಂದಿದ್ದೇವೆ. ರೂಪಾಯಿ ಮೌಲ್ಯದ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಆದರೆ, ಚೀನಾ, ಯುರೋಪ್, ಜಪಾನ್ ರೂಪಾಯಿಗಳ ಬಗ್ಗೆಯೂ ನಾವು ಹೋಲಿಕೆ ಮಾಡಿಕೊಳ್ಳಬೇಕು. ಪಿಎಂ ಗತಿಶಕ್ತಿಯಿಂದ ಉದ್ಯಮಗಳಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದರು.
ಪಾಲಿಸಿ ಮೂಲಕ ಅಭಿವೃದ್ಧಿ: ನಾವು ರಾಷ್ಟ್ರೀಯ ಶಿಕ್ಷಣ ನೀತಿ, ಆರೋಗ್ಯ ನೀತಿ, ಎಲೆಕ್ಟ್ರಾನಿಕ್ಸ್ ನೀತಿ, ಡಿಜಿಟಲ್ ಇಂಡಿಯಾ, ಉಡಾನ್, ಗ್ರೀನ್ ಇಂಡಿಯಾ, ಸ್ವಚ್ಛ ಭಾರತ ಭಾರತ ಅಭಿಯಾನ ಮಾಡಿದೆವು. ಅದರ ಪರಿಣಾಮ ಸ್ವಸ್ಥ ಭಾರತ ನಿರ್ಮಾಣ ಮಾಡಲು ಸಾಧ್ಯವಾಯಿತು. ಭಾರತವನ್ನು ಉತ್ಪಾದನಾ ಹಬ್ ಮಾಡಲು ಯೋಜನೆ ರೂಪಿಸಲಾಗುತ್ತಿದೆ. ನೀತಿಗಳ ಮೂಲಕ ನಾವು ದೇಶದ ಅಭಿವೃದ್ಧಿ ಮಾಡುತ್ತಿದ್ದೇವೆ ಎಂದು ಹೇಳಿದರು.
ಪುಸ್ತಕ ನೋಡಿ ಅರ್ಥಶಾಸ್ತ್ರ ಹೇಳ್ಬೇಡಿ: ಪುಸ್ತಕ ಓದಿ ಅರ್ಥಶಾಸ್ತ್ರ ಹೇಳಬೇಡಿ, ವಾಸ್ತವ ನೋಡಿ ಅರ್ಥಶಾಸ್ತ್ರ ಹೇಳಬೇಕು. ಪ್ರತಿ ಮನೆಗೆ ನೀರು ಬಂದರೆ, ವಿದ್ಯುತ್ ಬಂದರೆ ಜಿಡಿಪಿ ಅಭಿವೃದ್ಧಿ ಆಗುವುದಿಲ್ಲವೇ, ಅದನ್ನು ಪುಸ್ತಕದಲ್ಲಿ ಬರೆದಿಲ್ಲ ಎಂದು ಚಿಂತಿಸಬೇಡಿ, ನಾವು ಜಿಡಿಪಿಯನ್ನು ಸುಸ್ಥಿತಿಯಲ್ಲಿ ಇಟ್ಟಿದ್ದೇವೆ. ಉದ್ಯಮಗಳು ಸ್ಕೇಲ್ ಬದಲಾಯಿಸಬೇಕಿದೆ. ಆರ್ ಆಂಡ್ ಡಿ ಕಡೆಗೆ ಹೆಚ್ಚಿನ ಗಮನ ಹರಿಸಬೆಕಿದೆ. ದೇಶದ ವ್ಯಾಪ್ತಿಯಲ್ಲಿ ಆರ್ ಅಂಡ್ ಡಿ ಮಾಡಬೇಕು. ಸ್ಟಾರ್ಟ್ ಅಪ್ ಗಳು ಮತ್ತು ಉದ್ಯಮಗಳ ನಡುವೆ ಜೋಡಣೆ ಮಾಡಿ ಅಭಿವೃದ್ಧಿಯಾಗಬೇಕು. ಉದ್ಯಮಗಳು ಕಚ್ಚಾ ವಸ್ತುವಿನಿಂದ ಹಿಡಿದು ಉತ್ಪಾದನೆಯಾದ ವಸ್ತುವನ್ನು ರಫ್ತು ಮಾಡುವವರೆಗೂ ಎಲ್ಲವೂ ಆತ್ಮನಿರ್ಭರವಾಗಬೇಕು. ಉದ್ಯಮ ಪ್ರತ್ಯೇಕವಾಗಿ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ದೇಶದ ಜನರ ಜೊತೆಗೆ ಅಭಿವೃದ್ಧಿ ಮಾಡುವುದು ನಮ್ಮ ಉದ್ದೇಶವಾಗಿದೆ. ದೇಶದ ಅಭಿವೃದ್ಧಿಯಲ್ಲಿ ನಿಮ್ಮ ಸಹಕಾರ ಇರಲಿ ಎಂದು ಅಮಿತ್ ಶಾ ಮನವಿ ಮಾಡಿದರು.
ಸರ್ವವ್ಯಾಪಿ ಸರ್ವಸ್ಪರ್ಶಿ: ಗ್ರಾಮೀಣ ಭಾರತದಲ್ಲಿ ಸೂರು ಇಲ್ಲದವರಿಗೆ ಸೂರು ಕಲ್ಪಿಸಿ, ಮನೆ ಮನೆಗೆ ಶುದ್ಧ ಕುಡಿಯುವ ನೀರು ಪೂರೈಸಿ, ಉರುವಲು ಸೌದೆಯನ್ನು ಬಳಸಿ ಅಡುಗೆ ಮಾಡುತ್ತಿದ್ದ ಮಹಿಳೆಯರ ಆರೋಗ್ಯ ಕಾಪಾಡಲು ಅಡುಗೆ ಅನಿಲದ ಸಿಲಿಂಡರ್ಗಳನ್ನು ಉಚಿತವಾಗಿ ಒದಗಿಸಿ ಹಾಗೂ ಬೆಳಕು ಇಲ್ಲದೇ ಕತ್ತಲಲ್ಲೇ ಜೀವಿಸುತ್ತಿದ್ದ ಬಡವರ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ, ಎಲ್ಲೆಡೆ ಸಂಪತ್ತು ಸೃಜಿಸಿ, ಕೇಂದ್ರ ಸರ್ಕಾರ ಸರ್ವವ್ಯಾಪಿ ಹಾಗೂ ಸರ್ವಸ್ಪರ್ಶಿ ಸರ್ಕಾರ ಎನಿಸಿದೆ ಎಂದು ಬಣ್ಣಿಸಿದರು.