ಕರ್ನಾಟಕ

karnataka

ETV Bharat / state

ಕಾನೂನು ತೊಡಕಿನ ಭೀತಿ ಮಧ್ಯೆ ಲವ್ ಜಿಹಾದ್ ತಡೆ ಬಿಲ್ ತರಲು ಸರ್ಕಾರದ ಎಚ್ಚರಿಕೆಯ ನಡೆ!

ಕೂಲಂಕಷ ಅಧ್ಯಯನ ನಡೆಸಿದ ಬಳಿಕವಷ್ಟೇ ವಿಧೇಯಕ ಮಂಡಿಸಲು ಸರ್ಕಾರ ಮುಂದಾಗಿದೆ. ತರಾತುರಿಯಲ್ಲಿ ವಿಧೇಯಕ ಮಂಡಿಸಿದ್ರೆ, ಬಳಿಕ ಕಾನೂನು ತೊಡಕು ಉಂಟಾಗುವ ಸಾಧ್ಯತೆ ಹೆಚ್ಚಿದೆ ಎಂಬ ಆತಂಕ ಸರ್ಕಾರಕ್ಕಿದೆ. ಹೀಗಾಗಿ ಇತರ ರಾಜ್ಯಗಳಾದ ಮಧ್ಯಪ್ರದೇಶ, ಹರ್ಯಾಣ, ಅಸ್ಸೋಂ ಸರ್ಕಾರಗಳು ಜಾರಿಗೆ ತರಲಿರುವ ಲವ್ ಜಿಹಾದ್ ಕಾನೂನಿನ ರೂಪುರೇಷೆ ಪರಿಶೀಲಿಸಿ ಬಳಿಕ ರಾಜ್ಯದಲ್ಲಿ ಕಾನೂನು ರೂಪಿಸಲು ಚಿಂತನೆ ನಡೆಸಿದೆ..

Amidst fears of legal complications state is to bring love jihad act
ರಾಜ್ಯದಲ್ಲೂ ಲವ್ ಜಿಹಾದ್ ಕಾಯ್ದೆಯ ಸದ್ದು; ಕಾನೂನು ತೊಡಕಿನ ಭೀತಿ ಮಧ್ಯೆ ಲವ್ ಜಿಹಾದ್ ತಡೆ ಬಿಲ್ ತರಲು ಸರ್ಕಾರದ ಎಚ್ಚರಿಕೆಯ ನಡೆ!

By

Published : Dec 7, 2020, 6:44 AM IST

ಬೆಂಗಳೂರು :ಉತ್ತರಪ್ರದೇಶ ಮಾದರಿ ಕರ್ನಾಟಕದಲ್ಲೂ ವಿವಾದಾತ್ಮಕ ಲವ್ ಜಿಹಾದ್ ತಡೆ ಕಾನೂನು ತರುವುದಾಗಿ ಸರ್ಕಾರ ಹೇಳಿದೆ. ಈ ಸಂಬಂಧ ಈಗಾಗಲೇ ಪೂರ್ವ ತಯಾರಿ ನಡೆಸಲು ಸರ್ಕಾರ ಮುಂದಾಗಿದೆ. ಅಸಲಿಗೆ ಕರ್ನಾಟಕದಲ್ಲಿ ಕೇಳಿ ಬರುತ್ತಿರುವ ಲವ್ ಜಿಹಾದ್ ಕೂಗು ಏನು?, ಸರ್ಕಾರ ಲವ್ ಜಿಹಾದ್ ಕಾನೂನು ತರುವ ಸಂಬಂಧ ಏನು ಮಾಡುತ್ತಿದೆ ಎಂಬ ವರದಿ ಇಲ್ಲಿದೆ.

ಬಲವಂತದ ಕಾನೂನು ಬಾಹಿರ ಧಾರ್ಮಿಕ ಮತಾಂತರ ತಡೆ(ಲವ್ ಜಿಹಾದ್) ಕಾಯ್ದೆಯನ್ನು ಉತ್ತರಪ್ರದೇಶ ಸರ್ಕಾರ ಈಗಾಗಲೇ ಜಾರಿಗೆ ತಂದಿದೆ. ಅದರ ಬೆನ್ನಲ್ಲೇ ರಾಜ್ಯ ಬಿಜೆಪಿ ಸರ್ಕಾರವೂ ಕರ್ನಾಟಕದಲ್ಲಿ ಅಂತಹುದೇ ಲವ್ ಜಿಹಾದ್ ತಡೆ ಕಾನೂನು ತರಲು ಮುಂದಾಗಿದೆ. ಈಗಾಗಲೇ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಕರ್ನಾಟಕದಲ್ಲೂ ಲವ್ ಜಿಹಾದ್ ತಡೆ ಕಾಯ್ದೆ ಜಾರಿಗೆ ತರಲು ತೀರ್ಮಾನಿಸಿದೆ.

ಅದರಂತೆ ಸರ್ಕಾರಕ್ಕೆ ಕಾನೂನು ರೂಪಿಸುವಂತೆ ಒತ್ತಾಯಿಸಿದೆ. ಸಿಎಂ ಕೂಡ ಲವ್ ಜಿಹಾದ್ ತಡೆ ಕಾನೂನು ತರಲು ಒಲವು ತೋರಿದ್ದಾರೆ. ಹೀಗಾಗಿ ಗೃಹ ಇಲಾಖೆ ರಾಜ್ಯದಲ್ಲೂ ಲವ್ ಜಿಹಾದ್ ತಡೆ ಕಾನೂನು ತರುವ ಪೂರ್ವ ಸಿದ್ಧತೆ ನಡೆಸಲು ಅಣಿಯಾಗಿದೆ.

ರಾಜ್ಯದಲ್ಲಿನ ಲವ್ ಜಿಹಾದ್ ಕೂಗು ಏನು? :ರಾಜ್ಯದಲ್ಲಿ ‌ಮೊದಲ‌ ಬಾರಿಗೆ ಲವ್ ಜಿಹಾದ್ ಕೂಗು ಕೇಳಿ ಬಂದಿದ್ದು 2009ರಲ್ಲಿ. ಚಾಮರಾಜನಗರದ ಹಿಂದೂ ಹುಡುಗಿ ಮುಸ್ಲಿಂ ಹುಡುಗನ ಜೊತೆ ಓಡಿ ಹೋಗಿರುವ ಪ್ರಕರಣ ಸದ್ದು ಮಾಡಿತ್ತು. ಹುಡುಗಿ ತಂದೆ ಹೈಕೋರ್ಟ್ ಮೊರೆ ಹೋಗಿ ಲವ್ ಜಿಹಾದ್ ನಡೆದಿದೆ ಎಂದು ಆರೋಪಿಸಿದ್ದರು.

ಹೈಕೋರ್ಟ್ ಈ ಪ್ರಕರಣವನ್ನು ಸಿಐಡಿಗೆ ತನಿಖೆಗೆ ನೀಡಿತ್ತು. ಆದರೆ, ತನಿಖೆಯಲ್ಲಿ ಲವ್ ಜಿಹಾದ್ ಅಂಶಗಳು ಸಾಬೀತಾಗಿರಲಿಲ್ಲ. ಹುಡುಗಿ ಸ್ವ ಇಚ್ಛೆಯಿಂದ ಮತಾಂತರವಾಗಿ ಮುಸ್ಲಿಂ ಹುಡುಗನ ಜೊತೆ ಮದುವೆಯಾಗಿದ್ದಳು ಎಂಬುದು ತನಿಖೆಯಲ್ಲಿ ಸಾಬೀತಾಗಿತ್ತು. ಯಾವುದೇ ಒತ್ತಾಯದ ಮತಾಂತರ ಇಲ್ಲ ಎಂಬ ತನಿಖಾ ವರದಿ ಸಲ್ಲಿಸಲಾಗಿತ್ತು.

ಕರಾವಳಿ ಕರ್ನಾಟಕ ಜಿಲ್ಲೆಗಳಾದ ದ.ಕನ್ನಡ, ಉಡುಪಿ, ಉ.ಕನ್ನಡದಲ್ಲಿ ಬಹುವಾಗಿ ಲವ್ ಜಿಹಾದ್ ಆರೋಪ ಕೇಳಿ ಬರುತ್ತಲೇ ಇದೆ. 2011ರಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಲವ್ ಜಿಹಾದ್ ವಿಚಾರ ಸದನದಲ್ಲೇ ಚರ್ಚೆಯಾಗಿತ್ತು. ದ.ಕನ್ನಡ ಜಿಲ್ಲೆಯಲ್ಲಿ 84 ಯುವತಿಯರು ನಾಪತ್ತೆಯಾಗಿದ್ದು, ಆ ಪೈಕಿ ಕೇವಲ 69 ಯುವತಿಯರು ಪತ್ತೆಯಾಗಿದ್ದಾರೆ ಎಂದು ಬಿಜೆಪಿ ಶಾಸಕಿ ಮಲ್ಲಿಕಾ ಪ್ರಸಾದ್ ಪ್ರಸ್ತಾಪಿಸಿದ್ದರು.

ಯುವತಿಯರು ನಾಪತ್ತೆಯಾಗುತ್ತಿರುವ ಹಿಂದೆ ಲವ್ ಜಿಹಾದ್ ಇದೆ‌ ಎಂದು ಆರೋಪಿಸಿದ್ದರು. ಈ ಬಗ್ಗೆ ಅಂದು ಕಾನೂನು ಸಚಿವರಾಗಿದ್ದ ಸುರೇಶ್ ಕುಮಾರ್ ತನಿಖೆ ಮಾಡಿಸುವುದಾಗಿ ಭರವಸೆ ನೀಡಿದ್ದರು. 2017ರಲ್ಲಿ ಹಿಂದೂ ಯುವತಿಯ ತಂದೆಯೊಬ್ಬರು ಶಿವಮೊಗ್ಗ ಪೊಲೀಸರಿಗೆ ದೂರು ನೀಡಿ, ತಮ್ಮ ಮಗಳನ್ನು ಬಲವಂತದ ಅಂತರ ಧರ್ಮೀಯ ವಿವಾಹ‌ ಮಾಡಿಸಲಾಗಿದೆ ಎಂದು ಆರೋಪಿಸಿದ್ದರು.

ಬಿಇ ವಿದ್ಯಾರ್ಥಿನಿಯಾಗಿದ್ದ ತನ್ನ ಮಗಳು ಮುಸ್ಲಿಂ ಹುಡುಗನನ್ನು ಮದುವೆಯಾಗಲು ಬಲವಂತ ಮಾಡಲಾಗಿದೆ ಎಂದು ಆರೋಪಿಸಿದ್ದರು. ಆ‌ ಮೂಲಕ ಲವ್ ಜಿಹಾದ್ ಅನುಮಾನ ವ್ಯಕ್ತಪಡಿಸಿದ್ದರು. 2018ರಲ್ಲಿ ಕಾಸರಗೋಡು ಮೂಲದ ಹಿಂದೂ ಪರ ಸಂಘಟನೆಯ ಮುಖಂಡನ ಮಗಳು ಮುಸ್ಲಿಂ ಹುಡುಗನ‌ ಜೊತೆ ಓಡಿ ಹೋಗಿದ್ದಾಳೆ ಎಂಬ ಆರೋಪ ಕೇಳಿ ಬಂದಿತ್ತು. ಆ ಸಂದರ್ಭವೂ ಲವ್ ಜಿಹಾದ್ ಕೂಗು ಬಲವಾಗಿ ಕೇಳಿ ಬಂದಿತ್ತು. ಆದರೆ, ಇದುವರೆಗೂ ಯಾವುದೇ ಲವ್ ಜಿಹಾದ್ ಆರೋಪಗಳು ತನಿಖೆಯಲ್ಲಿ ಸಾಬೀತಾಗಿಲ್ಲ.

ಉತ್ತರ ಪ್ರದೇಶದ ಕಾಯ್ದೆ ಹೇಗಿದೆ?:ಉತ್ತರಪ್ರದೇಶ ಜಾರಿಗೆ ತಂದಿರುವ ಕಾಯ್ದೆ ಪ್ರಕಾರ ಧಾರ್ಮಿಕ ಮತಾಂತರವನ್ನು ಜಾಮೀನು ರಹಿತ ಅಪರಾಧವಾಗಿದೆ. ತಪ್ಪಿತಸ್ಥನೆಂದು ಸಾಬೀತಾದರೆ ಗರಿಷ್ಠ 10 ವರ್ಷ ಸೆರೆಮನೆವಾಸ ಜೈಲು ಶಿಕ್ಷೆ ವಿಧಿಸಲಾಗುತ್ತದೆ.

ಈ‌ ಕಾಯ್ದೆಯ ನಿಯಮ ಉಲ್ಲಂಘಿಸಿದರೆ ಕನಿಷ್ಟ 1 ವರ್ಷದಿಂದ 5 ವರ್ಷದ ವರೆಗೆ ಜೈಲು ಶಿಕ್ಷೆಯ ಜೊತೆಗೆ 15,000 ರೂ.‌ದಂಡ ವಿಧಿಸಲಾಗುತ್ತದೆ. ಅದೇ ಎಸ್‌ಸಿ, ಎಸ್‌ಟಿ ಯುವತಿಯರನ್ನು ಬಲವಂತವಾಗಿ ಮತಾಂತರಗೊಳಿಸಿದ್ರೆ ಕನಿಷ್ಟ 3 ರಿಂದ 10 ವರ್ಷದವರೆಗೆ ಜೈಲು ಶಿಕ್ಷೆ ಇರಲಿದೆ‌.‌ ಅದರ ಜೊತೆಗೆ 25,000 ರೂ.‌ದಂಡ ಇರುತ್ತೆ.

ಈ ಕಾಯ್ದೆ ಪ್ರಕಾರ ಸಾಮೂಹಿಕ ಮತಾಂತರ ಆಯೋಜಿಸುವ ಸಾಮಾಜಿಕ ಸಂಘಟನೆ ನೋಂದಣಿ ರದ್ದು ಜೊತೆಗೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಸಾಮೂಹಿಕ ಮತಾಂತರ 3-10 ವರ್ಷದವರೆಗೆ ಸಜೆ ಜೊತೆಗೆ ₹50,000 ದಂಡ ವಿಧಿಸಲಾಗುತ್ತದೆ. ಒಂದು ವೇಳೆ ಮದುವೆ ಉದ್ದೇಶಕ್ಕಾಗಿ ಮತಾಂತರವಾದ್ರೆ, ವಿವಾಹವನ್ನು ನಿರಸನಗೊಳಿಸಲಾಗುತ್ತದೆ. ಕಾಯ್ದೆಯಡಿ ಮತಾಂತರ ಯಾವುದೇ ಬಲವಂತ, ದುರುದ್ದೇಶ, ಪ್ರಭಾವ, ವಂಚನೆಯಿಂದ ಆಗಿಲ್ಲ ಎಂಬುದನ್ನು ಸಾಬೀತು ಪಡಿಸುವ ಹೊಣೆಗಾರಿಕೆ ಮತಾಂತರಗೊಳ್ಳುತ್ತಿರುವ ವ್ಯಕ್ತಿಯೇ ಮೇಲಿರುತ್ತದೆ.

ವಿವಾಹದ ಉದ್ದೇಶದಿಂದ ಮತಾಂತರಗೊಳ್ಳುವ ವ್ಯಕ್ತಿ ಎರಡು ತಿಂಗಳ ಮುನ್ನ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಮಾಹಿತಿ ನೀಡಬೇಕು. ಒಂದು ವೇಳೆ ಅನುಮತಿ ಸಿಕ್ಕರೆ ವಿವಾಹದ ಜೊತೆಗೆ ಮತಾಂತರ ಆಗಬಹುದಾಗಿದೆ. ಈ ನಿಯಮವನ್ನು ಉಲ್ಲಂಘಿಸಿದರೆ 6 ತಿಂಗಳಿಂದ 3 ವರ್ಷ ಸಜೆ ಹಾಗೂ ₹10,000 ದಂಡ ವಿಧಿಸಲಾಗುತ್ತದೆ.

ಬಿಜೆಪಿ ಸರ್ಕಾರದ ಎಚ್ಚರಿಕೆ ನಡೆ ಏನು ? :ಬಿಜೆಪಿ ಸರ್ಕಾರ ಕಠಿಣ ಲವ್ ಜಿಹಾದ್ ತಡೆ ಕಾನೂನು ತರಲು ಮುಂದಡಿ ಇಟ್ಟಿದೆ. ಆದರೆ, ಕಾನೂನು ತಜ್ಞರ ಸಲಹೆ, ಸಾಧಕ- ಬಾಧಕ ಅಧ್ಯಯನ ನಡೆಸಿ ಕಾನೂನು ಜಾರಿಗೆ ತರಲು ಮುಂದಾಗಿದೆ ಎಂದು ಗೃಹ ಇಲಾಖೆ ಮೂಲಗಳು ತಿಳಿಸಿವೆ. ಈಗಾಗಲೇ ಅಲಹಾಬಾದ್ ಮತ್ತು ಕರ್ನಾಟಕ ಹೈಕೋರ್ಟ್ ತಮ್ಮ ಸಂಗಾತಿಗಳನ್ನು ಆಯ್ಕೆ ಮಾಡುವಲ್ಲಿ ವಯಸ್ಕರು ಸ್ವತಂತ್ರರಾಗಿದ್ದಾರೆ ಎಂದು ಸ್ಪಷ್ಟ ತೀರ್ಪನ್ನು ನೀಡಿದೆ.

ಹೀಗಾಗಿ ಈ ಬಗ್ಗೆ ಕಾನೂನು ತಜ್ಞರ ಸಲಹೆ ಪಡೆದು, ಕೂಲಂಕಷ ಅಧ್ಯಯನ ನಡೆಸಿದ ಬಳಿಕವಷ್ಟೇ ವಿಧೇಯಕ ಮಂಡಿಸಲು ಸರ್ಕಾರ ಮುಂದಾಗಿದೆ. ತರಾತುರಿಯಲ್ಲಿ ವಿಧೇಯಕ ಮಂಡಿಸಿದ್ರೆ, ಬಳಿಕ ಕಾನೂನು ತೊಡಕು ಉಂಟಾಗುವ ಸಾಧ್ಯತೆ ಹೆಚ್ಚಿದೆ ಎಂಬ ಆತಂಕ ಸರ್ಕಾರಕ್ಕಿದೆ. ಹೀಗಾಗಿ ಇತರ ರಾಜ್ಯಗಳಾದ ಮಧ್ಯಪ್ರದೇಶ, ಹರ್ಯಾಣ, ಅಸ್ಸೋಂ ಸರ್ಕಾರಗಳು ಜಾರಿಗೆ ತರಲಿರುವ ಲವ್ ಜಿಹಾದ್ ಕಾನೂನಿನ ರೂಪುರೇಷೆ ಪರಿಶೀಲಿಸಿ ಬಳಿಕ ರಾಜ್ಯದಲ್ಲಿ ಕಾನೂನು ರೂಪಿಸಲು ಚಿಂತನೆ ನಡೆಸಿದೆ.

ಅದರ ಜೊತೆಗೆ ರಾಜ್ಯದಲ್ಲಿ ದಾಖಲಾಗಿರುವ ಬಲವಂತದ ಮತಾಂತರ ಪ್ರಕರಣಗಳು, ಪ್ರಕರಣದ ತನಿಖಾ ಹಂತ, ಸ್ಥಿತಿಗತಿ ಬಗ್ಗೆ ವರದಿ ತರಿಸಿ ಪರಿಶೀಲಿಸಲು ನಿರ್ಧರಿಸಿದೆ. ಆ ಬಳಿಕವಷ್ಟೇ ಮುಂಬರುವ ಅಧಿವೇಶನದಲ್ಲಿ ವಿಧೇಯಕ ಮಂಡಿಸಲು ನಿರ್ಧರಿಸಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ABOUT THE AUTHOR

...view details