ಬೆಂಗಳೂರು :ನಗರದಲ್ಲಿ ಕಳೆದ ನಾಲ್ಕು ದಿನಗಳಿಂದ 300ಕ್ಕೂ ಮೇಲ್ಪಟ್ಟು ಕೋವಿಡ್ ಸೋಂಕಿತರು ಮೃತಪಡುತ್ತಿದ್ದಾರೆ. ಶುಕ್ರವಾರ (ಮೇ 7) ರಂದು 346 ಮಂದಿ ಮೃತಪಟ್ಟಿದ್ದರು.
ಇದರಿಂದ ಕೋವಿಡ್ ವಿದ್ಯುತ್ ಚಿತಾಗಾರಗಳು ಹಾಗೂ ತಾತ್ಕಾಲಿಕ ಚಿತಾಗಾರಗಳ ಮೇಲೆ ಒತ್ತಡ ಹೆಚ್ಚಿದೆ. ಮತ್ತೆ ಆ್ಯಂಬುಲೆನ್ಸ್‌ಗಳಲ್ಲಿ ಕ್ಯೂ ನಿಂತು, ರಾತ್ರಿ-ಹಗಲು ಕಾದು ಮೃತದೇಹದ ಅಂತ್ಯಕ್ರಿಯೆ ಮಾಡಲಾಗ್ತಿದೆ.
ಚಿತಾಗಾರಗಳ ಮುಂದೆ ಹೆಚ್ಚಿದ ಆ್ಯಂಬುಲೆನ್ಸ್ಗಳ ಕ್ಯೂ.. ಕೆಂಗೇರಿಯಲ್ಲಿ 25 ರಿಂದ 30 ಶವ, ಮೇಡಿ ಅಗ್ರಹಾರದಲ್ಲಿ 40 ರಿಂದ 50 ಶವ, ಚಾಮರಾಜಪೇಟೆ ಟಿ.ಆರ್.ಮಿಲ್ ಸ್ಮಶಾನದಲ್ಲಿ 35 ಶವ ಅಂತ್ಯಸಂಸ್ಕಾರ ಮಾಡಲಾಗ್ತಿದೆ.
ಸುಮನಹಳ್ಳಿ ಹಾಗೂ ವಿಲ್ಸನ್ ಗಾರ್ಡನ್, ಬನಶಂಕರಿ ವಿದ್ಯುತ್ ಚಿತಾಗಾರಗಳು ರಿಪೇರಿಯಾಗುತ್ತಿರುವ ಹಿನ್ನೆಲೆ, ಸದ್ಯ ಏಳು ಚಿತಾಗಾರಗಳಲ್ಲಿ ಮಾತ್ರ ಅಂತ್ಯಕ್ರಿಯೆಗೆ ಅವಕಾಶವಿದ್ದು, ಮೇಡಿ ಅಗ್ರಹಾರ, ಕೂಡ್ಲು, ಪಣತ್ತೂರು, ಕೆಂಗೇರಿ, ಸುಮನಹಳ್ಳಿ, ಪೀಣ್ಯ, ಬನಶಂಕರಿ ವಿದ್ಯುತ್ ಚಿತಾಗಾರಗಳಲ್ಲಿ ರಾತ್ರಿಯಿಡೀ ಕಾಯಬೇಕಾದ ಸ್ಥಿತಿಯಿದೆ.
ಸುಮನಹಳ್ಳಿ ಹಾಗೂ ವಿಲ್ಸನ್ ಗಾರ್ಡನ್ನ ಎರಡು ಮಷಿನ್ಗಳಲ್ಲಿ ದಿನಕ್ಕೆ 48 ಮೃತದೇಹ ಸುಡಲಾಗುತ್ತಿದೆ. ಇನ್ನು ನಗರದ ಹೊರಭಾಗದಲ್ಲಿರುವ ವಿದ್ಯುತ್ ಚಿತಾಗಾರಕ್ಕೂ ಒತ್ತಡ ಹೆಚ್ಚಾದ ಹಿನ್ನೆಲೆ, ದಿನವಿಡಿ ಹೊಗೆ ವಾತಾವರಣದಲ್ಲಿ ಹರಡಿದ್ದು, ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ತಾತ್ಕಾಲಿಕವಾಗಿ ನಿರ್ಮಾಣವಾಗಿರುವ ಗಿಡ್ಡೇನಹಳ್ಳಿ ಹಾಗೂ ತಾವರೆಕೆರೆ ಚಿತಗಾರದಲ್ಲಿ 120ಕ್ಕೂ ಹೆಚ್ಚು ಮೃತರ ಅಂತ್ಯ ಸಂಸ್ಕಾರ ನಡೆಯುತ್ತಿದೆ. ಗಿಡ್ಡೇನಹಳ್ಳಿಯಲ್ಲಿ 50, ತಾವರೇಕೆರೆಯಲ್ಲಿ 70 ಮೃತ ದೇಹಗಳ ಅಂತ್ಯ ಸಂಸ್ಕಾರ ನಡೆಸುತ್ತಿದ್ದರೂ ಆ್ಯಂಬುಲೆನ್ಸ್ಗಳು ಕ್ಯೂ ನಿಂತಿವೆ.
ಈ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಗಳು, ಜನರು ಕಟ್ಟಿಗೆಯ ಅಂತ್ಯಸಂಸ್ಕಾರಕ್ಕೆ ಹೆಚ್ಚು ಪ್ರಾಶಸ್ತ್ಯ ಕೊಡ್ತಾರೆ. ಕಟ್ಟಿಗೆಯ ಅಂತ್ಯಸಂಸ್ಕಾರದಿಂದ ಹೆಣ ಸುಡಲು ಬೇಗ ಸಾಧ್ಯವಾಗುತ್ತದೆ. ಅಲ್ಲದೆ ಧಾರ್ಮಿಕ ನಂಬಿಕೆ ಪ್ರಕಾರ ಕುಟುಂಬಸ್ಥರೇ ಚಿತೆಗೆ ಬೆಂಕಿ ಇಡಬಹುದು ಎಂದು ಹೆಚ್ಚಿನ ಜನ ಬೇಡಿಕೆ ಇಡುತ್ತಿದ್ದಾರೆ ಎಂದರು.
ಕ್ಯೂ ನಿಲ್ಲುವುದನ್ನು ತಪ್ಪಿಸಿ, ಚಿತಾಗಾರಗಳನ್ನು ಬುಕಿಂಗ್ ಮಾಡಿ ಹೋಗಲು ಕೇಂದ್ರೀಕೃತ ವ್ಯವಸ್ಥೆ ಜಾರಿ ಮಾಡಿದ ಮೂರೇ ದಿನದಲ್ಲಿ ಕೇಂದ್ರ ಕಚೇರಿಗೆ ಆನ್ ಲೈನ್ ಒತ್ತಡ ಹೆಚ್ಚಿದ ಕಾರಣ ವ್ಯವಸ್ಥೆ ವಿಫಲವಾಗಿತ್ತು. ಮತ್ತೆ ಮೊದಲಿನ ರೀತಿಯಲ್ಲೇ ವಲಯವಾರು ನಿರ್ವಹಣೆಗೆ ಜವಾಬ್ದಾರಿ ನೀಡಲಾಗಿದೆ.
ಅಂತ್ಯಕ್ರಿಯೆಗೆ ಕ್ಯೂ ನಿಲ್ಲುತ್ತಿರುವ ಕಾರಣ, ಒಂದೆರಡು ದಿನ ಕಾಯಬೇಕಾಗುತ್ತಿರುವ ಹಿನ್ನೆಲೆ ಮೃತದೇಹ ಕೆಡದಂತೆ ಸಂರಕ್ಷಿಸಿಡಲು ಚಿತಾಗಾರಗಳಲ್ಲಿ ಫ್ರೀಜರ್ ಬಳಸಲಾಗ್ತಿದೆ. ಮೇಡಿ ಅಗ್ರಹಾರದಲ್ಲಿ 8, ಕೂಡ್ಲುವಿನಲ್ಲಿ 10 ಫ್ರೀಜರ್ ಒದಗಿಸಲಾಗಿದೆ.
ಇನ್ನುಳಿದಂತೆ ಕ್ರಿಶ್ಚನ್, ಮುಸ್ಲಿಂ ಉದಾಯದ ಕೋವಿಡ್ ಮೃತದೇಹಗಳನ್ನು ಮಣ್ಣು ಮಾಡಲು, ಅವರದ್ದೇ ನಿಗದಿತ ರುದ್ರಭೂಮಿಗಳಿಗೆ ತಗೆದುಕೊಂಡು ಹೋಗುತ್ತಿದ್ದಾರೆ.
ಮಂಗಳಮುಖಿಯವರ ಕೋವಿಡ್ ಮೃತದೇಹವನ್ನೂ ಮುಸ್ಲಿಂ ಸಮುದಾಯದವರು ಅಂತ್ಯಕ್ರಿಯೆ ಮಾಡ್ತಾರೆ. ಮಾರ್ಗಸೂಚಿಯಂತೆ ಕೋವಿಡ್ ಮೃತದೇಹ ಮಣ್ಣು ಮಾಡಲಾಗ್ತಿದೆ. ಇನ್ನು ಕೆಲವರು ಊರುಗಳಿಗೆ ಮೃತದೇಹ ತೆಗೆದುಕೊಂಡು ಹೋಗುತ್ತಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.