ಬೆಂಗಳೂರು: ಕೊರೊನಾ ಕಾಲದಲ್ಲಿ ಕರುಣೆಗೆ ಕಣ್ಣಿಲ್ಲ ಎಂಬುದಕ್ಕೆ ಈಗಾಗಲೇ ಹಲವು ಘಟನೆಗಳು ಸಾಕ್ಷಿಯಾಗಿವೆ. ಇದಕ್ಕೆ ನಿದರ್ಶನ ಎಂಬಂತೆ ನಗರದಲ್ಲೂ ಕೆಲ ಪ್ರತ್ಯಕ್ಷ ಸಾಕ್ಷಿಗಳು ಬೆಳಕಿಗೆ ಬಂದಿವೆ.
ಹೌದು, ಹಣಕ್ಕಾಗಿ ಬಾಯಿಬಿಟ್ಟು ನಿಂತಿರುವ ಧನದಾಹಿಗಳ ಮಧ್ಯೆ ನಾವು ಬದುಕುತ್ತಿದ್ದೇವೆ. ಒಂದೆಡೆ ತಮ್ಮ ಆಪ್ತರ ಪ್ರಾಣ ಇನ್ನಿಲ್ಲದ ಕಸರತ್ತು ನಡೆಸಿದ್ದರೆ, ಮತ್ತೊಂದೆಡೆ ಮೃತ ಸೋಂಕಿತರ ಸಂಬಂಧಿಕರು ಅಂತ್ಯಸಂಸ್ಕಾರ ಮಾಡುವುದಕ್ಕೆ ಹಣವಿಲ್ಲದೆ ತತ್ತರಿಸಿದ್ದಾರೆ.
ಕೊರೊನಾ ಹಿನ್ನೆಲೆ ಜಯದೇವ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವ್ಯಕ್ತಿಯೊಬ್ಬರು ಉಸಿರಾಟ ತೊಂದರೆಯಿಂದ ಸಾವನ್ನಪ್ಪಿದ್ದರು. ಹೆಬ್ಬಾಳ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ಮಾಡಲು ಬಡ ಕುಟುಂಬ ನಿರ್ಧರಿಸಿತ್ತು. ಶವ ಸಾಗಿಸಲು ಆ್ಯಂಬುಲೆನ್ಸ್ ಚಾಲಕ 10 ಸಾವಿರ ರೂ.ಗೆ ಡಿಮ್ಯಾಂಡ್ ಮಾಡಿದ್ದಾನೆ. ತೀರಾ ಸಂಕಷ್ಟದಲ್ಲಿದ್ದ ಈ ಕುಟುಂಬಸ್ಥರು ಸೋಮವಾರ ಮಧ್ಯರಾತ್ರಿ ಅವರಿವರ ಬಳಿ 3 ಸಾವಿರ ರೂಪಾಯಿ ಸಂಗ್ರಹಿಸಿ ಕೊಟ್ಟಿದ್ದಾರೆ. ಆದರೆ ಮೃತನ ಸಂಬಂಧಿಕರು ತಡವಾಗಿ ಬರಲಿದ್ದಾರೆ ಎಂದು ಭಾವಿಸಿದ ಆ್ಯಂಬುಲೆನ್ಸ್ ಚಾಲಕ ಮೃಗೀಯವಾಗಿ ನಡೆದುಕೊಂಡಿದ್ದಾನೆ.
ಮೃತನ ಸಂಬಂಧಿಕರು ಬರುವ ಮುನ್ನವೇ ಚಾಲಕ ಶವವನ್ನು ಹೆಬ್ಬಾಳದ ಚಿತಾಗಾರದ ಬಳಿಯ ಫುಟ್ ಪಾತ್ ಮೇಲೆ ಎಸೆದು ಹೋಗಿದ್ದಾನೆ. ಬೀದಿಯಲ್ಲಿ ಬಿದ್ದಿದ್ದ ಶವ ಕಂಡು ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ಕಲೆ ಹಾಕಿ ಅಂತ್ಯ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಿದ್ದಾರೆ.