ಬೆಂಗಳೂರು:ಕರ್ನಾಟಕ ರಾಜ್ಯ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ (ಕೆಐಎಡಿಬಿ) ಕೈಗಾರಿಕೆ ಉದ್ದೇಶಕ್ಕಾಗಿ ಪಡೆದಿರುವ ಭೂಮಿಯನ್ನು ಮಂತ್ರಿ ಗ್ರೂಪ್ ರಿಯಲ್ ಎಸ್ಟೇಟ್ ಉದ್ದೇಶಕ್ಕೆ ಬಳಸಿಕೊಂಡಿದೆ ಎಂದು ಕರ್ನಾಟಕ ಹ್ಯೂಮನ್ ರೈಟ್ಸ್ ಕೌನ್ಸಿಲ್ ಟ್ರಸ್ಟ್ ಅಧ್ಯಕ್ಷ ಧರ್ಮೇಂದ್ರ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂತ್ರಿ ಗ್ರೂಪ್ ನಗರದ ಹನ್ನೆರಡು ಕಡೆಗಳಲ್ಲಿ ಕಾನೂನು ಬಾಹಿರವಾಗಿ ಕಟ್ಟಡಗಳನ್ನು ನಿರ್ಮಿಸಿದೆ. ಉತ್ತರಹಳ್ಳಿಯ ದೊಡ್ಡಕಲ್ಲಸಂದ್ರದಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಿಸಿದೆ. ಕೆಐಎಡಿಬಿಯಿಂದ ಕೈಗಾರಿಕಾ ಉದ್ದೇಶಕ್ಕಾಗಿ ಭೂಮಿ ಪಡೆದು ಆ ಜಾಗದಲ್ಲಿ ಸೆರೆನಿಟಿ ಹೆಸರಿನ ವಸತಿ ಸಮುಚ್ಚಯ ನಿರ್ಮಿಸುತ್ತಿದೆ ಎಂದು ಹೇಳಿದರು.
ಪರಿಸರ ಇಲಾಖೆಯಿಂದ 14 ಹಂತದ ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆದು, 28 ಹಂತದ ಕಟ್ಟಡ ನಿರ್ಮಾಣ ಮಾಡುತ್ತಿದೆ. 20 ಗುಂಟೆ ಸರ್ಕಾರದ ‘ಬಿ’ ಕರಾಬು ಜಮೀನು ಒತ್ತುವರಿ ಮಾಡಿದೆ. ಜನರಿಂದ ಹಣ ಪಡೆದು ಕಳಪೆ ಕಟ್ಟಡ ನಿರ್ಮಾಣ ಮಾಡುತ್ತಿದೆ. ಈ ಸಂಬಂಧ ಬಿಬಿಎಂಪಿ, ಬಿಡಿಎ, ಕೆಎಸ್ಪಿಸಿಬಿ ಸೇರಿದಂತೆ ಸರ್ಕಾರದ ಹಲವು ಪ್ರಾಧಿಕಾರಗಳಿಗೆ ದೂರು ನೀಡಿದ್ದರೂ, ಯಾವೊಬ್ಬ ಅಧಿಕಾರಿಯೂ ಕಾನೂನಾತ್ಮಕ ಕ್ರಮ ಜರುಗಿಸುತ್ತಿಲ್ಲ ಎಂದು ದೂರಿದರು.
ಸರ್ಕಾರಿ ಜಾಗ ದುರ್ಬಳಕೆ ಆರೋಪ ಇದೇ ವೇಳೆ ವಕೀಲ ರಂಜಿತ್, ಮಂತ್ರಿ ಗ್ರೂಪ್ ಅಕ್ರಮದಲ್ಲಿ ತೊಡಗಿದ್ದು, ಕೈಗಾರಿಕಾ ಉದ್ದೇಶಕ್ಕೆ ಪಡೆದಿರುವ ಜಾಗದಲ್ಲಿ ವಸತಿ ಸಮುಚ್ಚಯ ನಿರ್ಮಿಸಿರುವುದು ಕಾನೂನು ಬಾಹಿರ. ಈ ಸಂಬಂಧ ಹೈಕೋರ್ಟ್ನಲ್ಲಿ ಪಿಐಎಲ್ ಅರ್ಜಿ ಮತ್ತು ಮಧ್ಯಂತರ ಅರ್ಜಿಗಳನ್ನು ಸಲ್ಲಿಸಿದ್ದೇವೆ. ಹೀಗಾಗಿ, ಸರ್ಕಾರ ಕೂಡಲೇ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ನಿಲ್ಲಿಸಲು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.