ಬೆಂಗಳೂರು: ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಹಾಲಿ ಹಾಗೂ ಮಾಜಿ ಶಾಸಕರು-ಸಂಸದರ ವಿರುದ್ಧ ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ಹೈಕೋರ್ಟ್ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಳ್ಳಲು ಮುಂದಾಗಿದೆ.
ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ಮತ್ತು ನ್ಯಾ.ಅಶೋಕ್ ಎಸ್. ಕಿಣಗಿ ಅವರಿದ್ದ ವಿಭಾಗೀಯ ಪೀಠ ಪಿಐಎಲ್ ಅರ್ಜಿ ದಾಖಲಿಸಲು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರಿಗೆ ನಿರ್ದೇಶಿಸಿದೆ. ಅರ್ಜಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಪ್ರತಿವಾದಿಗಳನ್ನಾಗಿಸಿಸಲು ಸೂಚಿಸಿದ್ದು, ಸೆ.23 ಕ್ಕೆ ವಿಚಾರಣೆ ನಿಗದಿಯಾಗಿದೆ. ರಾಜ್ಯ ಸರ್ಕಾರದ ಪರ ಅಡ್ವೊಕೇಟ್ ಜನರಲ್ ಅಥವಾ ಹೆಚ್ಚುವರಿ ಅಡ್ವೊಕೇಟ್ ಜನರಲ್ ವಾದಿಸಬೇಕಿದೆ.
ಇನ್ನು ಹೈಕೋರ್ಟ್ ಪರ ವಾದಿಸಲು ಹಿರಿಯ ವಕೀಲ ಆದಿತ್ಯ ಸೋಂಧಿ ಅವರನ್ನು ಅಮಿಕಸ್ ಕ್ಯೂರಿ ಆಗಿ ನೇಮಕ ಮಾಡಲಾಗಿದೆ. ದೇಶದ ಎಲ್ಲಾ ರಾಜ್ಯಗಳಲ್ಲಿ ಸಂಸದರು ಹಾಗೂ ಶಾಸಕರ ವಿರುದ್ಧದ ಕ್ರಿಮಿನಲ್ ಪ್ರಕರಣಗಳು ದೀರ್ಘಕಾಲದಿಂದ ವಿಚಾರಣಾ ಹಂತದಲ್ಲಿಯೇ ಉಳಿದಿವೆ. ಬಹುತೇಕ ಪ್ರಕರಣಗಳಲ್ಲಿ ತಡೆಯಾಜ್ಞೆ ಮುಂದುವರಿಯುತ್ತಲೇ ಬಂದಿದೆ ಎಂದು ಆಕ್ಷೇಪಿಸಿ ವಕೀಲ ಅಶ್ವಿನ್ ಕುಮಾರ್ ಉಪಾಧ್ಯಾಯ ಎಂಬುವರು ಸುಪ್ರೀಂ ಕೋರ್ಟ್ಗೆ ಪಿಐಎಲ್ ಸಲ್ಲಿಸಿದ್ದಾರೆ.
ಈ ಅರ್ಜಿ ವಿಚಾರಣೆ ನಡೆಸಿರುವ ನ್ಯಾ. ಎನ್.ವಿ. ರಮಣ ನೇತೃತ್ವದ ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ, ಸಂಸದರು-ಶಾಸಕರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಸ್ತುಸ್ಥಿತಿ ಪರಾಮರ್ಶಿಸಿ ಅವುಗಳ ತ್ವರಿತ ಇತ್ಯರ್ಥಕ್ಕೆ ಕ್ರಿಯಾಯೋಜನೆ ರೂಪಿಸಬೇಕು ಮತ್ತು ಈ ವರದಿಯನ್ನು ಸುಪ್ರೀಂಕೋರ್ಟ್‍ಗೆ ಸಲ್ಲಿಸಬೇಕು ಎಂದು ಎಲ್ಲಾ ರಾಜ್ಯಗಳ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ನಿರ್ದೇಶಿಸಿದೆ. ಅದರಂತೆ ರಾಜ್ಯ ಹೈಕೋರ್ಟ್ ಈ ಕ್ರಮ ಕೈಗೊಂಡಿದೆ.