ಕರ್ನಾಟಕ

karnataka

ETV Bharat / state

ಬಿಜೆಪಿ ಪ್ರಾಯೋಜಿತ ಗುತ್ತಿಗೆದಾರಿಂದ ಮಾತ್ರ ಕಮಿಷನ್ ಆರೋಪ: ಡಿಸಿಎಂ ಡಿ ಕೆ ಶಿವಕುಮಾರ್ - ಪಾರದರ್ಶಕ ಆಡಳಿತ

''ಬಿಜೆಪಿ ಪ್ರಾಯೋಜಿತ ಗುತ್ತಿಗೆದಾರರು ಮಾತ್ರ ಕಮಿಷನ್ ಆರೋಪ ಮಾಡುತ್ತಿದ್ದಾರೆ. ನಮ್ಮ ಸರ್ಕಾರವು ಪಾರದರ್ಶಕವಾಗಿ ಆಡಳಿತ ಮಾಡಲು ಬದ್ಧವಿದೆ'' ಎಂದು ಡಿಸಿಎಂ ಡಿ ಕೆ ಶಿವಕುಮಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

DCM D.K. Shivakumar
ಡಿಸಿಎಂ ಡಿ.ಕೆ. ಶಿವಕುಮಾರ್

By

Published : Aug 12, 2023, 4:15 PM IST

ಬೆಂಗಳೂರು:''ಕೇವಲ ಬಿಜೆಪಿ ಪ್ರಾಯೋಜಿತ ಗುತ್ತಿಗೆದಾರರು ಮಾತ್ರ ಸರ್ಕಾರದ ವಿರುದ್ಧ ಕಮಿಷನ್ ಆರೋಪ ಮಾಡುತ್ತಿದ್ದಾರೆ'' ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.

ಸದಾಶಿವ ನಗರ ನಿವಾಸದ ಬಳಿ ಮಾತನಾಡಿದ ಅವರು, ''ನಮ್ಮ ಸರ್ಕಾರದ ಸಚಿವರು, ಶಾಸಕರು ಲಂಚ ಕೇಳಿಲ್ಲ ಎಂದು ಕೇವಲ ಕೆಂಪಣ್ಣ ಮಾತ್ರವಲ್ಲ, ಇತರೆ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ನಾವು ರಾಜ್ಯದ ಜನರಿಗೆ ದಕ್ಷ, ಭ್ರಷ್ಟಾಚಾರ ರಹಿತ ಆಡಳಿತ ನೀಡುವ ವಚನ ನೀಡಿ ಅಧಿಕಾರಕ್ಕೆ ಬಂದಿದ್ದು, ಪಾರದರ್ಶಕವಾಗಿ ಆಡಳಿತ ಮಾಡಲು ಬದ್ಧರಾಗಿದ್ದೇವೆ. ಕರ್ನಾಟಕವನ್ನು ದಕ್ಷ ಆಡಳಿತ ರಾಜ್ಯವಾಗಿ ಮಾಡುವುದು ನಮ್ಮ ಕನಸು. ಇದಕ್ಕಾಗಿ ಜನ ನಮಗೆ ಆಶೀರ್ವಾದ ಮಾಡಿದ್ದಾರೆ'' ಎಂದರು.

''ನಾನು, ಸಿದ್ದರಾಮಯ್ಯ ಅವರು ನಮ್ಮದೇ ಆದ ರಾಜಕೀಯ ಹಿನ್ನೆಲೆ ಹೊಂದಿದ್ದೇವೆ. ಕೆಂಪಣ್ಣ ಅವರು ಬಹಳ ಹಿರಿಯ ಹಾಗೂ ಗೌರವಾನ್ವಿತ ವ್ಯಕ್ತಿ. ಅವರು ಬಹಳ ಜವಾಬ್ದಾರಿ ಹೊಂದಿದ್ದಾರೆ. ಅವರು ಬಿಜೆಪಿ ಸರ್ಕಾರ ಬಾಕಿ ಉಳಿಸಿರುವ ಬಿಲ್ ಪಾವತಿ ಬಗ್ಗೆ ಮನವಿ ಮಾಡಲು ನನ್ನನ್ನು ಭೇಟಿ ಮಾಡಿದ್ದರು. ಬಿಜೆಪಿ ಸರ್ಕಾರ ಯಾಕೆ ಬಿಲ್ ಪಾವತಿ ಮಾಡಲಿಲ್ಲ ಎಂಬುದು ನನ್ನ ಪ್ರಶ್ನೆ. ಈಗ ನಮ್ಮ ಮುಖ್ಯಮಂತ್ರಿಗಳ ನಿರ್ದೇಶನದಂತೆ ಕಾಮಗಾರಿಗಳ ತನಿಖೆ ಮಾಡಿ ಪ್ರಾಮಾಣಿಕವಾಗಿ ಕೆಲಸ ಮಾಡಿರುವವರಿಗೆ ಬಿಲ್ ಪಾವತಿ ಮಾಡಲಾಗುವುದು. ಯಾವುದೇ ಗುತ್ತಿಗೆದಾರರಿಗೆ ಕಿರುಕುಳ ನೀಡುವುದು ನಮ್ಮ ಉದ್ದೇಶವಲ್ಲ'' ಎಂದು ತಿಳಿಸಿದರು.

''ಕೆಂಪಣ್ಣ ಮಾತ್ರ ಅಲ್ಲ, ಇತರೆ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಸರ್ಕಾರದ ಯಾವುದೇ ಸಚಿವರು ಲಂಚ ಕೇಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ, ಈ ವಿಚಾರ ರಾಜಕೀಯ ಮಾಡಿ, ಗುತ್ತಿಗೆದಾರರನ್ನು ಬಳಸಿಕೊಂಡು ಅಶೋಕ್, ಅಶ್ವತನಾರಾಯಣ್, ಗೋಪಾಲಯ್ಯ ಅವರು ತಮ್ಮ ತಿಮಿಂಗಳಗಳ ರಕ್ಷಣೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಬಿಜೆಪಿ ಪ್ರಾಯೋಜಿತ ಗುತ್ತಿಗೆದಾರರು ಮಾತ್ರ ಈ ಆರೋಪ ಮಾಡುತ್ತಿದ್ದಾರೆ'' ಎಂದು ದೂರಿದರು.

ಅಶೋಕ್, ಅಶ್ವತ್ಥನಾರಾಯಣ್ ಅಪಪ್ರಚಾರ:ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರದ ವಿರುದ್ಧ ಪೋಸ್ಟರ್ ಬಿಡುಗಡೆ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್, ''ಅವರಿಗೆ ನಮ್ಮ ಐದು ಗ್ಯಾರಂಟಿ ಯೋಜನೆಗಳನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವರ ಕ್ಷೇತ್ರದ ಮಹಿಳೆಯರು ತಿಂಗಳಿಗೆ 2 ಸಾವಿರ ಪ್ರೋತ್ಸಾಹ ಧನ, ಉಚಿತ ಬಸ್ ಪ್ರಯಾಣ ಮಾಡುತ್ತಿದ್ದು, ಉಚಿತ ಅಕ್ಕಿ ಹಾಗೂ ವಿದ್ಯುತ್ ಪಡೆಯುತ್ತಿದ್ದು, ನೀವು ಅಧಿಕಾರದಲ್ಲಿದ್ದಾಗ ಇಂತಹ ಒಂದು ಕಾರ್ಯಕ್ರಮ ಮಾಡಲಿಲ್ಲ ಎಂದು ಕೇಳುತ್ತಿದ್ದಾರೆ. ಹೀಗಾಗಿ ಗ್ಯಾರಂಟಿ ಯೋಜನೆಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಅಶೋಕ್, ಅಶ್ವತ್ಥನಾರಾಯಣ್ ಅವರು ಇಂತಹ ಸುಳ್ಳು ಆರೋಪ ಮಾಡುವ ಪ್ರಯತ್ನಕ್ಕೆ ಮುಂದಾಗಿದ್ದಾರೆ'' ಎಂದು ತಿಳಿಸಿದರು.

ಬಿಜೆಪಿ ಹಗರಣದ ಬಗ್ಗೆ ದಾಖಲೆ ಇಟ್ಟು ಮಾತನಾಡುತ್ತೇನೆ:ಯಾವುದೇ ಸಚಿವರು ಕಿಕ್ ಬ್ಯಾಕ್ ಕೇಳಿಲ್ಲ ಎಂಬ ಕೆಂಪಣ್ಣ ಅವರ ಸ್ಪಷ್ಟನೆ ಹಾಗೂ ಬಿಜೆಪಿ ಆರೋಪದ ಬಗ್ಗೆ ಕೇಳಿದಾಗ, "ಅಶೋಕ್ ಅವರ ಕಿಕ್ ಬ್ಯಾಕ್, ಬೇರೆಯವರ ಕಿಕ್ ಬ್ಯಾಕ್ ಬಗ್ಗೆ ಚರ್ಚೆ ಮಾಡಲು ಬೇರೆ ಸಮಯ ಇದೆ. ಅವರು ಕಣ್ಣು ಮುಚ್ಚಿ ಮೂರೂವರೆ ವರ್ಷಗಳ ಕಾಲ ಸರ್ಕಾರ ಮಾಡಿದರೆ? ನನಗೆ ಎಲ್ಲವೂ ಗೊತ್ತಿದೆ. ನಾನು ದಾಖಲೆ ಸಮೇತ ಮಾತನಾಡುತ್ತೇನೆ. ಯಾವುದೇ ಬಿಲ್ ಬಾಕಿ ಇದ್ದರೂ ಅವುಗಳ ಪಾವತಿ ಪ್ರಕ್ರಿಯೆ ಆರಂಭವಾಗಿಲ್ಲ. ಹೀಗಿರುವಾಗ ಕಿಕ್ ಬ್ಯಾಕ್ ಕೇಳಲು ಹೇಗೆ ಸಾಧ್ಯ? ಅವರು ಅಧಿಕಾರದಲ್ಲಿದ್ದಾಗ ಯಾಕೆ ಬಿಲ್ ಪಾವತಿ ಮಾಡಲಿಲ್ಲ? ಅವರ ಕಾರ್ಯವೈಖರಿಯನ್ನು ನಾನು ಶೀಘ್ರದಲ್ಲೇ ದಾಖಲೆ ಸಮೇತ ವಿವರಿಸುತ್ತೇನೆ'' ಎಂದು ತಿಳಿಸಿದರು.

''ನನಗೆ ನನ್ನ ಜವಾಬ್ದಾರಿ ಬಗ್ಗೆ ಅರಿವಿದೆ. ಬಿಜೆಪಿ ನಾಯಕರ ಅನೇಕ ಹಗರಣಗಳಿವೆ. ಅವರ ಹಗರಣ ಸಾಬೀತು ಮಾಡಲಿದ್ದೇನೆ. ಹೀಗಾಗಿ ನಾವು ತನಿಖೆಗೆ ಆದೇಶ ನೀಡಿದ್ದೇವೆ. ಅವರು ಸರ್ಕಾರದಲ್ಲಿದ್ದಾಗ ನಾವು ಮಲಗಿರಲಿಲ್ಲ. ಅವರು ಏನೆಲ್ಲಾ ಮಾಡಿದ್ದಾರೆ ಅನ್ನೋದು ನಮಗೆ ಗೊತ್ತಿದೆ'' ಎಂದು ಡಿಕೆಶಿ ಹೇಳಿದರು.

ಇದನ್ನೂ ಓದಿ:ಗುತ್ತಿಗೆದಾರರ ಬಿಲ್ ಬಾಕಿ - ತನಿಖೆ ಬಳಿಕ ಸತ್ಯಾಂಶ ಗೊತ್ತಾಗಲಿದೆ: ಸಿಎಂ ಸಿದ್ದರಾಮಯ್ಯ

ABOUT THE AUTHOR

...view details