ಬೆಂಗಳೂರು:ಕೇಂದ್ರ ಸರ್ಕಾರದ ಜಲ್ ಜೀವನ್ ಮಿಷನ್ ಯೋಜನೆಯಡಿ ಎಲ್ಲಾ ಗ್ರಾಮೀಣ ಭಾಗದ ಮನೆಗಳಿಗೂ 2024ರ ಒಳಗಾಗಿ ಕಾರ್ಯಾತ್ಮಕ ನಳ (ನಲ್ಲಿ) ನೀರು ಸಂಪರ್ಕ ಕಲ್ಪಿಸುವ ಗುರಿ ಹೊಂದಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ವಿಧಾನಸಭೆಯಲ್ಲಿ ತಿಳಿಸಿದರು.
ಇಂದು ಪ್ರಶ್ನೋತ್ತರ ವೇಳೆಯಲ್ಲಿ ಎಸ್.ಎನ್.ಸುಬ್ಬಾರೆಡ್ಡಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಯೋಜನೆಗೆ ಪೂರಕವಾಗಿ ರಾಜ್ಯ ಸರ್ಕಾರದ ಯೋಜನೆಯಾದ ಕಾರ್ಯಾತ್ಮಕ ನಳದ ನೀರು 2024ರ ಅಂತ್ಯದೊಳಗೆ ಒದಗಿಸಲು ಕ್ರಮ ಜರುಗಿಸಲಾಗಿದೆ ಎಂದು ಹೇಳಿದರು.
ರಾಜ್ಯ ಸರ್ಕಾರದ 'ಮನೆ ಮನೆಗೆ ಗಂಗೆ' ಯೋಜನೆಯಡಿ ಕನಿಷ್ಠ 55 ಎಲ್‍ಪಿಸಿಡಿಯಂತೆ ಶುದ್ಧ ಕುಡಿಯುವ ನೀರನ್ನು 2023ರ ಅಂತ್ಯದೊಳಗೆ ಒದಗಿಸಲಾಗುವುದು. ಶಾಸಕರ ಅಧ್ಯಕ್ಷತೆಯಲ್ಲಿರುವ ಟಾಸ್ಕ್ ಫೋರ್ಸ್ ಸಮಿತಿ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಕ್ರಿಯಾ ಯೋಜನೆ ರೂಪಿಸಿ ಅನುಮೋದನೆ ಪಡೆಯಬಹುದು. ಅಗತ್ಯವಿರುವ ಕಡೆ ಕೊಳವೆ ಬಾವಿ ಕೊರೆಯಲು ಅವಕಾಶವಿದೆ ಎಂದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಹಂಪಸಂದ್ರ ಇತರೆ 26 ಹಳ್ಳಿಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಜಲ್ ಜೀವನ್ ಮಿಷನ್ ಯೋಜನೆಯಡಿ ಸೇರಿಸಲಾಗಿದೆ. ಈ ಯೋಜನೆಗೆ 20 ಕೋಟಿ ರೂ. ಅಂದಾಜು ಪಟ್ಟಿಗೆ ವಿನ್ಯಾಸ ತಯಾರಿಸಲಾಗಿದ್ದು, 2021-22ನೇ ಸಾಲಿನಲ್ಲಿ ಕೈಗೆತ್ತಿಕೊಂಡು ಯೋಜನೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.