ಬೆಂಗಳೂರು: ಪುಲಕೇಶಿನಗರ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನವಿಯನ್ನು ಆಲಿಸಿದ್ದು, ಅದನ್ನು ಪಕ್ಷದ ಶಿಸ್ತು ಸಮಿತಿಗೆ ನೀಡುತ್ತೇನೆ. ಶಿಸ್ತು ಸಮಿತಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಸದಾಶಿವ ನಗರದಲ್ಲಿನ ತಮ್ಮ ನಿವಾಸಕ್ಕೆ ಭೇಟಿ ನೀಡಿದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಜತೆ ಮಾತುಕತೆ ನಡೆಸಿದ ನಂತರ ಡಿ.ಕೆ.ಶಿವಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರು ಇಂದು ನನ್ನನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ನಾನು ಅವರ ಮನವಿ ಆಲಿಸಿದ್ದೇನೆ. ಗಲಭೆ ಪ್ರಕರಣದಲ್ಲಿ ಅವರಿಗೆ ಅನ್ಯಾಯವಾಗಿರುವುದು ಗೊತ್ತಿದೆ. ಈ ವಿಚಾರವಾಗಿ ನನಗೂ ತುಂಬಾ ನೋವಾಗಿದೆ ಎಂದು ಹೇಳಿದರು.
ನಮ್ಮ ಶಾಸಕರು, ಸಂಪತ್ ರಾಜ್ ಅವರ ಮೇಲೂ ಅನುಮಾನ ವ್ಯಕ್ತಪಡಿಸಿದ್ದಾರೆ. ಜತೆಗೆ ಅವರನ್ನು ಪಕ್ಷದಿಂದ ಉಚ್ಛಾಟಿಸುವಂತೆ ಪತ್ರ ನೀಡಿದ್ದಾರೆ. ಈ ಪತ್ರವನ್ನು ಪಕ್ಷದ ಶಿಸ್ತು ಸಮಿತಿಗೆ ತಲುಪಿಸುತ್ತೇನೆ' ಎಂದರು.
ಶಿಸ್ತು ಸಮಿತಿಯಿಂದ ಸೂಕ್ತ ಕ್ರಮ
ಗಲಭೆ ಪ್ರಕರಣದಲ್ಲಿ ಆರೋಪಿಯಾಗಿ ಬಂಧಿತರಾಗಿರುವ ಸಂಪತ್ ರಾಜ್ ವಿರುದ್ಧ ಪಕ್ಷದ ಅಧ್ಯಕ್ಷರಾಗಿ ನೀವು ಯಾವ ತೀರ್ಮಾನ ಕೈಗೊಳ್ಳುತ್ತೀರಿ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, 'ಯಾವುದೇ ಒಬ್ಬ ವ್ಯಕ್ತಿ ಆರೋಪಿಯಾದ ಮಾತ್ರಕ್ಕೆ ಆತನ ಮೇಲೆ ನಾನು ಏಕಾಏಕಿ ಕ್ರಮ ಜರುಗಿಸಲು ಆಗುವುದಿಲ್ಲ. ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಗಲಭೆ ಪ್ರಕರಣದ ತನಿಖೆ ಇನ್ನೂ ನಡೆಯುತ್ತಿದೆ. ಸಂಪತ್ ರಾಜ್ ಅವರ ಮೇಲಿನ ಆರೋಪ ಸಾಬೀತುಪಡಿಸಲು ಸಾಕ್ಷ್ಯಾಧಾರಗಳನ್ನು ಒದಗಿಸಬೇಕಿದೆ. ಇದೆಲ್ಲವೂ ನ್ಯಾಯಾಲಯದಲ್ಲಿ ತೀರ್ಮಾನ ಆಗಬೇಕಿದೆ. ನಾಳೆ ಯಾರಾದರೂ ಏನಾದರೂ ಹೇಳಿಕೆ ಕೊಟ್ಟರೆ ಅದರ ಆಧಾರದ ಮೇಲೆ ನಾನು ಕ್ರಮ ಕೈಗೊಳ್ಳಲು ಸಾಧ್ಯವೇ ಎಂದು ಮರುಪ್ರಶ್ನಿಸಿದರು.
ಪೊಲೀಸ್ ಅಧಿಕಾರಿಗಳು ಬಿಜೆಪಿ ನಾಯಕರು ಹಾಗೂ ಸರ್ಕಾರದ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಯಾರು ಯಾಕಾಗಿ ಯಾವ ಹೇಳಿಕೆ ನೀಡಿದ್ದಾರೆ ಎಂಬುದು ನಮಗೂ ಗೊತ್ತಿದೆ. ನಮ್ಮ ಪಕ್ಷದಲ್ಲಿ ಶಿಸ್ತು ಸಮಿತಿ ಇದೆ. ಈ ವಿಚಾರವನ್ನು ಶಿಸ್ತು ಸಮಿತಿ ಕೂಲಂಕಷವಾಗಿ ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲಿದೆ ಎಂದರು.
ಹಾಸನ ಜಿಲ್ಲಾ ನಾಯಕರ ಜೊತೆ ಡಿಕೆಶಿ ಮಹತ್ವದ ಸಭೆ
ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಹಾಸನ ಜಿಲ್ಲಾ ಕಾಂಗ್ರೆಸ್ ಮುಖಂಡರ ಸಭೆ ನಡೆಸಿದರು.
ಪಕ್ಷ ಸಂಘಟನೆ ವಿಚಾರವಾಗಿ ಮಹತ್ವದ ಚರ್ಚೆ ನಡೆಸುವ ಉದ್ದೇಶದಿಂದ ಈ ಸಭೆ ಕರೆಯಲಾಗಿತ್ತು. ಮುಂಬರುವ ವಿಧಾನಸಭೆ ಚುನಾವಣೆ ವೇಳೆಗೆ ಜಿಲ್ಲೆಯಲ್ಲಿ ಅತಿ ಹೆಚ್ಚು ವಿಧಾನಸಭಾ ಕ್ಷೇತ್ರ ಗೆದ್ದುಕೊಳ್ಳುವ ಹಾಗೂ ಆ ಭಾಗದಲ್ಲಿ ಪ್ರಭಾವಿಯಾಗಿರುವ ಜೆಡಿಎಸ್ ಹಾಗೂ ಬಿಜೆಪಿ ಪಕ್ಷದ ಮುಖಂಡರು ಮಾಜಿ ಶಾಸಕರು, ಹಾಲಿ ಶಾಸಕರು ಕಾಂಗ್ರೆಸ್ನತ್ತ ಬರುವ ಆಸಕ್ತಿ ತೋರಿದರೆ ಅವರನ್ನ ಪಕ್ಷಕ್ಕೆ ಪರಿಚಯಿಸಿ ಮುಂದಿನ ದಿನಗಳಲ್ಲಿ ಅಗತ್ಯತೆ ಆಧರಿಸಿ ಸೇರ್ಪಡೆ ಮಾಡಿಕೊಳ್ಳುವ ವಿಚಾರವಾಗಿ ಶಿವಕುಮಾರ್ ಜಿಲ್ಲೆಯ ಮುಖಂಡರ ಜೊತೆ ಮಹತ್ವದ ಚರ್ಚೆ ನಡೆಸಿದರು.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಶತಾಯಗತಾಯ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿರುವ ಶಿವಕುಮಾರ್ ಹಳೇ ಮೈಸೂರು ಭಾಗದಲ್ಲಿ ಪ್ರಭಾವಿ ಜೆಡಿಎಸ್ ಮುಖಂಡರನ್ನು ಕಾಂಗ್ರೆಸ್ನತ್ತ ಸೆಳೆಯುವ ಮಹತ್ವದ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಈ ಭಾಗಗಳಲ್ಲಿ ಸಾಕಷ್ಟು ಪ್ರಭಾವಿ ಆಗಿದ್ದು, ಇಲ್ಲಿಗೆ ಬಿಜೆಪಿ ಪ್ರವೇಶವನ್ನು ತಡೆಯುವ ಸಲುವಾಗಿ ಶಿವಕುಮಾರ್ ಆಪರೇಷನ್ ಜೆಡಿಎಸ್ಗೆ ಮುಂದಾಗಿದ್ದಾರೆ. ಇಂದಿನ ಸಭೆಯಲ್ಲಿ ಸಹ ಅತ್ಯಂತ ಪ್ರಮುಖವಾಗಿ ಇದೇ ವಿಚಾರದ ಚರ್ಚೆ ನಡೆದಿದೆ ಎಂಬ ಮಾಹಿತಿ ಇದೆ.
ಈ ವೇಳೆ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಮಾಜಿ ಸಚಿವ ಬಿ.ಶಿವರಾಂ, ವಿಧಾನ ಪರಿಷತ್ ಸದಸ್ಯ ಗೋಪಾಲಸ್ವಾಮಿ, ಮಾಜಿ ಸಂಸದ ಜವರೇಗೌಡ, ಸಿ.ಎನ್.ರಾಜಪ್ಪ, ಹಾಸನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಾವಗಲ್ ಮಂಜುನಾಥ್ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.