ಬೆಂಗಳೂರು: ಪುಸ್ತುತ ಪೂರ್ವ ಮುಂಗಾರು, ಮುಂಗಾರು, ಹಿಂಗಾರು ಹಾಗೂ ಬೇಸಿಗೆ ಹಂಗಾಮುಗಳಲ್ಲಿ ಬೆಳೆ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ. ಸಮೀಕ್ಷೆ ಮಾಹಿತಿಯಲ್ಲಿನ ವ್ಯತ್ಯಾಸಗಳನ್ನು ರೈತರು ಬೆಳೆ ದರ್ಶಕ್ ಆಪ್ ನಲ್ಲಿ ಆಕ್ಷೇಪಣೆಗಳನ್ನು ಸಲ್ಲಿಸಿ ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ ಎಂದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಅವರು ತಿಳಿಸಿದ್ದಾರೆ.
ನಗರದ ಕೃಷಿ ಆಯುಕ್ತರ ಕಚೇರಿಯಲ್ಲಿ ರೈತ ಸಹಾಯವಾಣಿ ಕೇಂದ್ರದ ಉದ್ಘಾಟನೆ ಹಾಗೂ ಬೆಳೆ ಸಮೀಕ್ಷೆ ಕುರಿತು ತರಬೇತುದಾರರಿಗೆ ರಾಜ್ಯ ಮಟ್ಟದ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿದ ಬಳಿಕ ಸಚಿವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯದಲ್ಲಿ 2017ಕ್ಕೂ ಮುನ್ನ ಬೆಳೆ ವಿಸ್ತೀರ್ಣ ಅಂಕಿ - ಅಂಶಗಳ ಅಂದಾಜು ಕಾರ್ಯವನ್ನು ಅಧಿಕಾರಿಗಳು ಭೌತಿಕವಾಗಿ ಮಾಡುತ್ತಿದ್ದುದರಿಂದ, ಸಮಯಕ್ಕೆ, ಸರಿಯಾಗಿ ಸರ್ವ/ಹಿಸ್ಸಾವಾರು ಬೆಳೆ ಮಾಹಿತಿಯ ದಾಖಲೆಯು ಸಾಧ್ಯವಾಗುತ್ತಿರಲಿಲ್ಲ. ಇದರಿಂದಾಗಿ, ಪಹಣಿಯಲ್ಲಿ ಬೆಳ ಮಾಹಿತಿ ದಾಖಲಿಸುವ ಕಾರ್ಯ ಸಮಯಕ್ಕೆ ಸರಿಯಾಗಿ ಆಗಲೇ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವ ಹಾಗೂ ರಾಜ್ಯದ ಬೆಳೆವಾರು ವಿಸ್ತೀರ್ಣ ಮತ್ತು ಉತ್ಪಾದನೆಯನ್ನು ಅಂದಾಜಿಸುವ ಕಾರ್ಯವು ವಿಳಂಬವಾಗುತ್ತಿತ್ತು ಎಂದರು.
ಹೀಗಾಗಿ, ಸಕಾಲದಲ್ಲಿ ಸರ್ವೆ ನಂಬರ್‌ವಾದು/ಹಿಸ್ಸಾವಾರು/ತಾಕುವಾರು ಬೆಳೆ ಮಾಹಿತಿ ಪಡೆಯಲು ಪರಿಣಾಮಕಾರಿಯಾದ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸುವುದು ಅವಶ್ಯಕವಾಗಿತ್ತು. ಈ ಹಿನ್ನೆಲೆಯಲ್ಲಿ 2017 ನೇ ಸಾಲಿನಿಂದ ಡಿ.ಪಿ.ಎ.ಆರ್ (ಇ-ಆಡಳಿತ) ಇಲಾಖಾ ವತಿಯಿಂದ ಅಭಿವೃದ್ಧಿ ಪಡಿಸಲಾದ ಜಿಪಿಎಸ್ ಆಧಾರಿತ ಮೊಬೈಲ್ ತಂತ್ರಾಂಶವನ್ನು ಬಳಸಿ ಸರ್ವ ನಂಬರ್/ಹಿಸ್ಸಾವಾರು ಬೆಳೆ ಮಾಹಿತಿಯನ್ನು ದಾಖಲಿಸುವ ಕಾರ್ಯ ಚಾಲ್ತಿಯಲ್ಲಿದೆ.
2019-20ನೇ ಸಾಲಿನಿಂದ ಕೃಷಿ ಇಲಾಖೆಯನ್ನು ನೋಡಲ್ ಇಲಾಖೆಯಾಗಿ ನೇಮಿಸಿದ್ದು, ಕಂದಾಯ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಸಿಬ್ಬಂದಿಗಳನ್ನು ಬಳಸಿಕೊಂಡು ಖಾಸಗಿ ನಿವಾಸಿಗಳ (ಪಿ.ಆರ್-ಪ್ರೈವೇಟ್ ರೆಸಿಡೆಂಟ್ಸ್(ಪಿ.ಆರ್. ಮೊಬೈಲ್ ಆಪ್) ಮೂಲಕ ಜಿಲ್ಲಾಧಿಕಾರಿಗಳ ನೇರ ಉಸ್ತುವಾರಿಯಲ್ಲಿ ಕೈಗೊಳ್ಳಲಾಗುತ್ತಿದೆ. 2020ನೇ ಸಾಲಿನಿಂದ ರೈತರೇ ನೇರವಾಗಿ ತಮ್ಮ ಜಮೀನಿನ ಬೆಳೆ ವಿವರಗಳನ್ನು ರೈತರ ಮೊಬೈಲ್ ಆಪ್ ಮೂಲಕ ದಾಖಲಿಸಲು ಪ್ರೋತ್ಸಾಹಿಸಲಾಗಿದೆ ಎಂದು ಮಾಹಿತಿ ನೀಡಿದರು.