ಬೆಂಗಳೂರು: ಕೇಂದ್ರ ಸರ್ಕಾರ ಕೃಷಿ ಕಾಯ್ದೆ ವಾಪಸ್ ಪಡೆದ ರೀತಿಯಲ್ಲಿ ರಾಜ್ಯದಲ್ಲಿ ಎಪಿಎಂಸಿ ತಿದ್ದುಪಡಿ ಕಾಯ್ದೆಗಳನ್ನು ವಾಪಸ್ ಪಡೆಯುವುದಿಲ್ಲ ಎಂದು ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಸ್ಪಷ್ಟಪಡಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ನಾಗರಾಜ್ ಯಾದವ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ವೇಳೆ ಎಪಿಎಂಸಿಗೆ ಎರಡು ತಿದ್ದುಪಡಿ ತರಲಾಗಿತ್ತು. ರೈತ ಬೆಳೆದ ಬೆಳೆಯನ್ನು ಎಪಿಎಂಸಿಯಲ್ಲೇ ಮಾರಾಟ ಮಾಡಬೇಕು ಎನ್ನುವುದು ನಿಯಮ ಇತ್ತು. ಎಲ್ಲಾದರೂ ಹೊರಗೆ ಮಾರಾಟ ಮಾಡಿದರೆ ದಂಡ ಹಾಕುವುದು ಎರಡನೇ ನಿಯಮವಿತ್ತು, ಅದಕ್ಕೆ ನಾವು ತಿದ್ದುಪಡಿ ತಂದೆವು.
ಬೆಳೆಯನ್ನು ಎಪಿಎಂಸಿಯಲ್ಲಾದರೂ ಮಾರಾಟ ಮಾಡಬಹುದು, ಹೊಲದಲ್ಲೇ ಮಾರಾಟ ಮಾಡಬಹುದು, ಅಂತಾರಾಜ್ಯ, ಹೊರದೇಶಗಳಲ್ಲಿ ಎಲ್ಲಿ ಬೇಕಾದರೂ ಮಾರಾಟ ಮಾಡಲು ಸ್ವಾತಂತ್ರ್ಯ ಕೊಡುವ ಕಾಯ್ದೆ ತಂದಿದ್ದೆವು. ಎರಡನೆಯದ್ದು ಎಪಿಎಂಸಿ ಹೊರಗಡೆ ಮಾರಾಟಕ್ಕೆ ದಂಡ ವಸೂಲಿ ಮಾಡಲಾಗುತ್ತಿತ್ತು, ಜೈಲಿಗೆ ಹಾಕುವ ನಿಯಮ ಇತ್ತು ಅದನ್ನು ತೆಗೆದುಹಾಕಿದ್ದೆವು.
ಕಾಯ್ದೆ ವಾಪಸ್ ಆಗಲ್ಲ : ದೆಹಲಿಯದ್ದೇ ಬೇರೆ ಇಲ್ಲಿಯದ್ದೇ ಬೇರೆ ಸ್ಥಿತಿ ಇದೆ. ನಮ್ಮಲ್ಲಿ ಈ ಕಾಯ್ದೆಗಳನ್ನು ಯಾರೂ ವಿರೋಧಿಸಿಲ್ಲ. ಯಾವ ರೈತರು ಪ್ರತಿಭಟನೆ ಮಾಡಿಲ್ಲ. ರೈತರ ಪರವಾಗಿ ಯಡಿಯೂರಪ್ಪ ಈ ತಿದ್ದುಪಡಿ ಮಾಡಿಸಿದ್ದರು. ಯಾರೂ ನಮಗೆ ತೊಂದರೆಯಾಗುತ್ತಿದೆ ಎಂದು ಹೇಳಿಲ್ಲ ಹಾಗಾಗಿ ಈ ಕಾಯ್ದೆಗಳನ್ನು ವಾಪಸ್ ಪಡೆಯಲ್ಲ ಎಂದು ಸ್ಪಷ್ಟಪಡಿಸಿದರು.
ಯಶಸ್ವಿನಿ ಸೌಲಭ್ಯ ಪಡೆಯಲು ಸಹಕಾರ ಸಂಘದ ಸದಸ್ಯತ್ವ ಕಡ್ಡಾಯ :ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಚಿಕಿತ್ಸೆ ಲಭ್ಯವಿರುವ ಎಲ್ಲ ರೋಗಗಳಿಗೆ ಯಶಸ್ವಿನಿ ಯೋಜನೆಯಡಿನಲ್ಲಿಯೂ ಚಿಕಿತ್ಸೆ ಲಭ್ಯವಾಗಲಿದ್ದು. ಯೋಜನೆ ಎಲ್ಲ ರೈತರಿಗೂ ಅನ್ವಯವಾಗಲ್ಲ. ಫಲಾನುಭವಿಗಳಾಗಲು ಯಾವುದಾದರೂ ಸಹಕಾರ ಸಂಘದ ಸದಸ್ಯತ್ವ ಹೊಂದಿರಬೇಕು ಎಂದು ಸಹಕಾರ ಸಚಿವ ಎಸ್. ಟಿ ಸೋಮಶೇಖರ್ ಸ್ಪಷ್ಟಪಡಿಸಿದ್ದಾರೆ.
ಯಶಸ್ವಿನಿ ಮತ್ತು ಆಯುಷ್ಮಾನ್ ವಿಲೀನ : ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಮಧು ಮಾದೇಗೌಡ ಪ್ರಶ್ನೆಗೆ ಉತ್ತರಿಸಿದ ಸಚಿವರು, ಯಶಸ್ವಿನಿ ಯೋಜನೆಯನ್ನು ಎಸ್.ಎಂ.ಕೃಷ್ಣ ಅವಧಿಯಲ್ಲಿ ವಿಶ್ವನಾಥ್ ಸಚಿವರಾಗಿದ್ದಾಗ ತರಲಾಗಿತ್ತು.
ಸಹಕಾರ ಸಂಘದಲ್ಲಿ ನೋಂದಾಯಿಸಿಕೊಂಡವರಿಗೆ ಯೋಜನೆಯಲ್ಲಿ ಅವಕಾಶವಿತ್ತು, ನಂತರ ಆಯುಷ್ಮಾನ್ ಭಾರತ್ ನಡಿ ಯೋಜನೆ ವಿಲೀನವಾಯಿತು. ಆದರೆ, ಯಶಸ್ವಿನಿ ಮರುಜಾರಿಗೆ ಸಹಕಾರಿ ಸಮುದಾಯದಿಂದ ಬೇಡಿಕೆ ಬಂದಿತ್ತು.
ಮತ್ತೆ ಯಶಸ್ವಿನಿ ಜಾರಿ : ಆರೋಗ್ಯ ಇಲಾಖೆಯಡಿ ವಿಲೀನವಾಗಿದ್ದರಿಂದ ಈವರೆಗೆ ಅನುಮತಿ ಸಿಕ್ಕಿರಲಿಲ್ಲ. ಈಗ ಸಿಎಂ ನೇತೃತ್ವದಲ್ಲಿ ಮತ್ತೆ ಯಶಸ್ವಿನಿ ಜಾರಿಗೆ ನಿರ್ಧಾರ ಮಾಡಿ ಬಜೆಟ್ನಲ್ಲಿ 300 ಕೋಟಿ ಘೋಷಿಸಿ 100 ಕೋಟಿ ಬಿಡುಗಡೆ ಮಾಡಲಾಗಿದೆ ಎಂದರು.
ಅಕ್ಟೋಬರ್ 2ರಂದು ಘೋಷಣೆ: ಕಳೆದ ಬಾರಿ ಯೋಜನೆಯಲ್ಲಿದ್ದ ಲೋಪದೋಷಗಳನ್ನು ಸರಿಪಡಿಸಲಾಗಿದೆ. ಸರಿಯಾಗಿ ಸ್ಪಂದಿಸುವ ಆಸ್ಪತ್ರೆಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಆಯುಷ್ಮಾನ್ನಲ್ಲಿ ಇರುವ 1,650 ರೋಗಗಳನ್ನೂ ಯಶಸ್ವಿನಿಯಲ್ಲಿ ಅಳವಡಿಕೆ ಮಾಡಲಾಗಿದೆ. ಟ್ರಸ್ಟ್, ಆಸ್ಪತ್ರೆ ಗುರುತಿಸುವ ಕೆಲಸ ಮಾಡಲಾಗಿದೆ. ಅಕ್ಟೋಬರ್ 2 ರಂದು ಯೋಜನೆ ಜಾರಿ ಮಾಡಲು ಸಿದ್ಧತೆ ಮಾಡಿದ್ದೇವೆ. ಹಣಕಾಸು ಇಲಾಖೆ ಒಪ್ಪಿಗೆ ಪಡೆದು ಟ್ರಸ್ಟ್ ರಚಿಸಿ ಅ.2 ರಂದು ಘೋಷಣೆ ಮಾಡಲಾಗುತ್ತದೆ ಎಂದರು.
ಸಹಕಾರ ಸಂಸ್ಥೆಯಲ್ಲಿರುವ ಸದಸ್ಯರಿಗೆ ಮಾತ್ರವೇ ಇದು ಅನ್ವಯವಾಗಲಿದೆ. ಎಲ್ಲ ರೈತರಿಗೆ ಇದು ಅನ್ವಯವಾಗಲ್ಲ, ಈ ಯೋಜನೆ ಸೌಲಭ್ಯ ಪಡೆಯಲು ಯಾವುದಾದರೂ ಸಹಕಾರ ಸಂಘದಲ್ಲಿ ಸದಸ್ಯತ್ವ ಹೊಂದಿರಬೇಕು ಎಂದರು.
ಚಿನ್ನದ ಮೇಲಿನ ಸಾಲಕ್ಕೆ ಏಕರೂಪದ ಬಡ್ಡಿ ವ್ಯವಸ್ಥೆ ಅಸಾಧ್ಯ:ಡಿಸಿಸಿ ಬ್ಯಾಂಕ್ನಲ್ಲಿ ರೈತರು ಅಡ ಇಡುವ ಚಿನ್ನಕ್ಕೆ ಏಕರೂಪದ ಬಡ್ಡಿ ದರ ನಿಗದಿ ಮಾಡಲು ಸಾಧ್ಯವಿಲ್ಲ ಎಂದು ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಸ್ಪಷ್ಟಪಡಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಪ್ರಶ್ನೆಗೆ ಉತ್ತರಿಸಿದ ಸಚಿವರು, ಒಂದೊಂದು ಬ್ಯಾಂಕ್ನಲ್ಲಿ ಒಂದೊಂದು ರೀತಿ ಬಡ್ಡಿ ದರ ಇದೆ. ಕನಿಷ್ಠ ಡಿಸಿಸಿ ಬ್ಯಾಂಕ್ನಲ್ಲಿ ಕಡಿಮೆ ಬಡ್ಡಿ ದರವನ್ನ ನಿಗದಿ ಮಾಡಿ. ಇದರಿಂದ ರೈತರಿಗೆ ಅನುಕೂಲ ಆಗುತ್ತೆ ಎಂದು ಸದಸ್ಯರು ಕೇಳುತ್ತಿದ್ದಾರೆ. ಆದರೆ, ಡಿಸಿಸಿ ಬ್ಯಾಂಕ್ನಲ್ಲಿ ಏಕರೂಪದ ಚಿನ್ನದ ಮೇಲಿನ ಬಡ್ಡಿ ದರ ನಿಗದಿ ಮಾಡಲು ಸಾಧ್ಯವಿಲ್ಲ. ಡಿಸಿಸಿ ಬ್ಯಾಂಕ್ಗಳಿಗೆ ಕಂಡಿಷನ್ ಹಾಕಲು ಸಾಧ್ಯವಿಲ್ಲ ಎಂದರು.
ಡಿಸಿಸಿ ಬ್ಯಾಂಕ್ ಬಂಡವಾಳ ವೆಚ್ಚ, ಸಿಬ್ಬಂದಿ ವೆಚ್ಚ, ಮಾರ್ಜಿನನ್ನು ಆಧರಿಸಿ ಸಾಲಗಳ ಬಡ್ಡಿ ದರ ನಿಗದಿ ಮಾಡಲಾಗುತ್ತದೆ. 5 ರಿಂದ 40 ಲಕ್ಷದವರೆಗೆ ಡಿಸಿಸಿ ಬ್ಯಾಂಕ್ನಲ್ಲಿ ಚಿನ್ನದ ಮೇಲೆ ಸಾಲ ನೀಡಲಾಗುತ್ತಿದೆ. ಡಿಸಿಸಿ ಬ್ಯಾಂಕ್ಗಳು ಹೆಚ್ಚು ಬಡ್ಡಿ ತೆಗೆದುಕೊಳ್ಳುವಂತಿಲ್ಲ. ಈ ಬಗ್ಗೆ ನಾನೇ ಸಭೆ ಮಾಡಿ ಸೂಚನೆ ನೀಡಿದ್ದೇನೆ. ಈಗಾಗಲೇ ಡಿಸಿಸಿ ಬ್ಯಾಂಕ್ಗಳಲ್ಲಿ ಶೇ 7.50 ರಿಂದ ಶೇ 8ರ, ಬಡ್ಡಿ ತೆಗೆದುಕೊಳ್ಳುತ್ತಿದ್ದಾರೆ. ಒಂದೇ ಒಂದು ಬ್ಯಾಂಕ್ ಮಾತ್ರ ಶೇ 12 ಬಡ್ಡಿ ತೆಗೆದುಕೊಳ್ಳುದ್ದಾರೆ. ಇದನ್ನ ಕಡಿಮೆ ಮಾಡಲು ಸೂಚನೆ ನೀಡಲಾಗಿದೆ ಎಂದರು.
ಇದನ್ನೂ ಓದಿ :ವಿಧಾನಸಭೆಯಲ್ಲಿ ನಾಲ್ಕು ವಿಧೇಯಕಗಳಿಗೆ ಅಂಗೀಕಾರ