ಬೆಂಗಳೂರಿನಲ್ಲಿ ಅಗರಬತ್ತಿ ಕಾರ್ಖಾನೆಯಲ್ಲಿ ಅಗ್ನಿ ಅವಘಡ ಬೆಂಗಳೂರು:ಆನೇಕಲ್ನ ಅತ್ತಿಬೆಲೆ ಪಟಾಕಿ ಬೆಂಕಿ ದುರಂತ ಮಾಸುವ ಮುನ್ನವೇ ಮತ್ತೇ ಇಂತಹದೇ ಘಟನೆ ನಡೆದಿದೆ.ಇಂದುಬೆಳ್ಳಂಬೆಳಗ್ಗೆ ಸಂಭವಿಸಿದ ಆಕಸ್ಮಿಕ ಅಗ್ನಿ ಅವಘಡದಿಂದ ಅಗರಬತ್ತಿ ಫ್ಯಾಕ್ಟರಿಗೆ ಹೊತ್ತಿ ಉರಿದ ಘಟನೆ ಜೋಗುಪಾಳ್ಯದ ಪೈಪ್ ಲೈನ್ ರಸ್ತೆಯಲ್ಲಿ ನಡೆದಿದೆ. ಅವಘಡದಿಂದಾಗಿ ಫ್ಯಾಕ್ಟರಿಯಲ್ಲಿದ್ದ ಕೆಮಿಕಲ್ ಲಿಕ್ವಿಡ್ ಹರಿದು ರಸ್ತೆಗೂ ಬೆಂಕಿ ಹಬ್ಬಿದ್ದು, 8 ಬೈಕ್ ಅಗ್ನಿಗಾಹುತಿಯಾಗಿವೆ.
ತಕ್ಷಣ ಸ್ಥಳಿಯರು ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದು, ಸ್ಥಳಕ್ಕೆ ದೌಡಾಯಿಸಿದ ಎರಡು ಅಗ್ನಿಶಾಮಕ ವಾಹನದ ಸಿಬ್ಬಂದಿ ಬೆಂಕಿ ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಫ್ಯಾಕ್ಟರಿಯಲ್ಲಿ ಬೆಂಕಿ ಅವಘಡ ಉಂಟಾಗಲು ಕಾರಣ ಏನು ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ.
8 ಬೈಕ್ ಸುಟ್ಟು ಭಸ್ಮ:ಫ್ಯಾಕ್ಟರಿಯಲ್ಲಿದ್ದ ಕೆಮಿಕಲ್ ಲಿಕ್ವಿಡ್ ರಸ್ತೆಗೆ ಹರಿದಿದ್ದರಿಂದ ಬೆಂಕಿ ರಸ್ತೆಗೂ ಹಬ್ಬಿತ್ತು. ಇದರಿಂದಾಗಿ ಫ್ಯಾಕ್ಟರಿ ಎದುರು ನಿಲ್ಲಿಸಿದ್ದ ಬೈಕ್ಗಳಿಗೆ ಬೆಂಕಿ ತಗುಲಿದೆ. ಪರಿಣಾಮವಾಗಿ ರಾಯಲ್ ಎನ್ಫೀಲ್ಡ್, ಪಲ್ಸರ್, ಹೊಂಡಾ ಆ್ಯಕ್ಟಿವಾ ಸ್ಕೂಟರ್ ಸೇರಿದಂತೆ 8 ದ್ವಿಚಕ್ರ ವಾಹನಗಳು ಅಗ್ನಿಗಾಹುತಿಯಾಗಿವೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.
ಇನ್ನು ಮೊನ್ನೆ ತಾನೇ ಅಕ್ಟೋಬರ್ 7 ರಂದು ಆನೇಕಲ್ನ ಅತ್ತಿಬೆಲೆಯ ಗಡಿಯಲ್ಲಿರುವ ಬಾಲಾಜಿ ಕ್ರಾಕರ್ಸ್ ಎಂಬ ಪಟಾಕಿ ಮಳಿಗೆಯ ಗೋಡೌನ್ಲ್ಲಿ ಬೆಂಕಿ ಕಾಣಿಸಿಕೊಂಡು ದೊಡ್ಡ ಮಟ್ಟದ ಅವಘಡ ಸಂಭವಿಸಿತ್ತು. ಸಣ್ಣ ಬೆಂಕಿ ಕಿಡಿಯಿಂದ ಇಡೀ ಪಟಾಕಿ ಅಂಗಡಿಯೇ ಸ್ಫೋಟಗೊಂಡಿತ್ತು. ಘಟನೆಯಲ್ಲಿ ಇದುವರೆಗೆ ಸಾವನ್ನಪ್ಪಿದವರ ಸಂಖ್ಯೆ 16 ಆಗಿದೆ. ಘಟನೆ ಸಂದರ್ಭದಲ್ಲಿ ಗೋದಾಮಿನಲ್ಲಿಯೇ 12 ಜನ ಸಜೀವ ದಹನವಾಗಿದ್ದರು. ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ 4 ಮಂದಿ ಉಸಿರು ಚೆಲ್ಲಿದ್ದರು.
ಮೇಲಿಂದ ಮೇಲೆ ಬೆಂಕಿ ಅವಘಡ, ಸಾವಿನಿಂದ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ಅವರವರ ಅಧಿಕಾರ ವ್ಯಾಪ್ತಿಯಲ್ಲಿರುವ ಪಟಾಕಿ ಅಂಗಡಿ, ಗೋದಾಮುಗಳನ್ನು ಪರಿಶೀಲನೆ ಮಾಡುತ್ತಿದ್ದು, ಬೆಂಕಿ ಸಂಭವಿಸುವಂತಹ ಅಂಗಡಿಗಳಿಗೆ ಎಚ್ಚರಿಕೆ ಕೂಡ ನೀಡಲಾಗಿದೆ. ಅತ್ತಿಬೆಲೆ ದುರಂತದಲ್ಲಿ ಸಾವನ್ನಪ್ಪಿದವರ ಕುಟುಂಬದವರಿಗೆ, ಗಾಯಗೊಂಡವರಿಗೆ ಕರ್ನಾಟಕ ರಾಜ್ಯ ಸರ್ಕಾರ ಹಾಗೂ ತಮಿಳುನಾಡು ಸರ್ಕಾರ ಪರಿಹಾರ ಘೋಷಿಸಿದೆ. ಜತೆಗೆ ಘಟನೆ ಬಗ್ಗೆ ತೀವ್ರ ತನಿಖೆ ಕೂಡ ನಡೆಯುತ್ತಿದೆ. ಇನ್ನು ದುರಂತಕ್ಕೆ ಕಾರಣರಾದವರಿಗೆ ಕಠಿಣ ಶಿಕ್ಷೆ ನೀಡಲು ಒತ್ತಾಯಿಸಲಾಗುತ್ತಿದೆ.
ಇದನ್ನೂ ಓದಿ:ಬೈಕ್ನಲ್ಲಿ ಚಲಿಸುತ್ತಿರುವಾಗಲೇ ಟಿಪ್ಪರ್ ಚಕ್ರಕ್ಕೆ ಸಿಲುಕಿದ ವ್ಯಕ್ತಿ.. 2 ಕಾಲುಗಳಿಗೂ ಗಂಭೀರ ಗಾಯ - ವಿಡಿಯೋ