ಬೆಂಗಳೂರು:ಸಿಲಿಕಾನ್ ಸಿಟಿಯಲ್ಲಿ ಮತ್ತೆ ಸರಗಳ್ಳರ ಹಾವಳಿ ಹೆಚ್ಚಾಗಿದೆ. ನಿನ್ನೆ ನಗರದ ಹಲವೆಡೆ ಸರಗಳ್ಳತನ ಮಾಡಿ ಖದೀಮರು ಪರಾರಿಯಾಗಿದ್ದಾರೆ.
ಜಯನಗರದ 10ನೇ ಬ್ಲಾಕ್ನಲ್ಲಿ ವೃದ್ಧೆ ಸಂಧ್ಯಾ ಎಂಬುವರು ದೇವಸ್ಥಾನಕ್ಕೆ ಹೋಗಿ ವಾಪಸ್ ಬರುತ್ತಿದ್ದರು. ಈ ವೇಳೆ ಕೆಟಿಎಂ ಡ್ಯೂಕ್ ಬೈಕ್‌ನಲ್ಲಿ ಬಂದ ಇಬ್ಬರು ಸರಗಳ್ಳರು ವೃದ್ಧೆ ಅನ್ನೋದನ್ನೂ ನೋಡದೇ ಕುತ್ತಿಗೆಯಲ್ಲಿದ್ದ ಸರ ಎಗರಿಸಿ ಪರಾರಿಯಾಗಿದ್ದಾರೆ. ಕುತ್ತಿಗೆಯಲ್ಲಿನ ಸರ ಬರದಿದ್ದಾಗ ವೃದ್ಧೆಯನ್ನು ರಭಸವಾಗಿ ಎಳೆದು ಅಲ್ಲಿಂದ ಬೈಕ್ ಓಡಿಸಿದ್ದಾರೆ. ಈ ದೃಶ್ಯ ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸಿಸಿ ಟಿವಿಯಲ್ಲಿ ಸೆರೆಯಾದ ಸರಗಳ್ಳತನ.. ಇಷ್ಟು ದಿನ ಪಲ್ಸರ್ ಬೈಕ್‌ನಲ್ಲಿ ಬಂದು ಕಳ್ಳತನ ಮಾಡುತ್ತಿದ್ದ ಖದೀಮರು, ಇದೀಗ ಡ್ಯೂಕ್ ಬೈಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಗಲು ಹೊತ್ತಿನಲ್ಲೇ ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಈ ಕೃತ್ಯಕ್ಕೆ ಇಳಿಯುತ್ತಿದ್ದಾರೆ ಎನ್ನುತ್ತಿದ್ದಾರೆ ಸ್ಥಳೀಯರು. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ನಿನ್ನೆ ಜೆಪಿ ನಗರ, ಜಯನಗರ, ಮಾಗಡಿ ರಸ್ತೆ, ವೈಯಾಲಿಕಾವಲ್ ಸೇರಿದಂತೆ ಹಲವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣಗಳು ನಡೆದಿದ್ದು, ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ತಮ್ಮ ಸಿಬ್ಬಂದಿಗೆ ಬೀಟ್ನಲ್ಲಿ ತಿರುಗಲು ಖಡಕ್ ಸೂಚನೆ ನೀಡಿದ್ದಾರೆ.