ಬೆಂಗಳೂರು:ಮತದಾನ ದಿನಕ್ಕೆ 8 ದಿನ ಬಾಕಿ ಇರುವ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆಗೆ ಮುಂದಾಗಿದೆ. ರಾಜ್ಯ ಹಾಗೂ ರಾಷ್ಟ್ರೀಯ ನಾಯಕರಿಂದ ಏಳು ಗ್ಯಾರಂಟಿ ಘೋಷಣೆ ಬಳಿಕ ನಾಳೆ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಲು ಕಾಂಗ್ರೆಸ್ ನಿರ್ಧರಿಸಿದೆ. ತುಂಬಾ ಅಳೆದು ತೂಗಿ ನಾಳೆ ಬೆಳಗ್ಗೆ 9ಕ್ಕೆ ಖಾಸಗಿ ಹೋಟೆಲ್ನಲ್ಲಿ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಆಗಲಿದೆ.
ನಾಳೆ ಕಾರ್ಯಕ್ರಮದಲ್ಲಿ ಭಾಗವಹಿಸುವ ನಾಯಕರು ಯಾರು?:ನಾಳೆಯ ಸಮಾರಂಭದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ ಜಿ ಪರಮೇಶ್ವರ ಮತ್ತಿತರ ಮುಖಂಡರು ಪಾಲ್ಗೊಳ್ಳಲಿದ್ದಾರೆ.
ಜನರನ್ನು ಸೆಳೆಯುವ ದೃಷ್ಟಿಯಿಂದ ತರಬೇಕಿದ್ದ ಪ್ರಣಾಳಿಕೆಯ ಪ್ರಮುಖ ಅಂಶವನ್ನು ಗ್ಯಾರೆಂಟಿ ಹೆಸರಿನಲ್ಲಿ ಅದಾಗಲೇ ಘೋಷಿತವಾಗಿದ್ದು, ನಿಜವಾದ ಪ್ರನಾಳಿಕೆಗೆ ನಿರೀಕ್ಷೆ ಕಡಿಮೆ ಆಗುವಂತೆ ಮಾಡಿದೆ. ಆದಾಗ್ಯೂ 2013ರ ವಿಧಾನಸಭೆ ಚುನಾವಣೆಯಲ್ಲಿ 160 ಭರವಸೆ ನೀಡಿ ಎಲ್ಲವನ್ನೂ ಈಡೇರಿಸಿದ್ದೆವು ಎಂದು ಹೇಳಿಕೊಂಡಿದ್ದ ಪಕ್ಷ, 2018ರಲ್ಲಿ ಮತ್ತಷ್ಟು ಕೊಡುಗೆ ಘೋಷಿಸಿತ್ತು. ಆದರೆ, ಮೈತ್ರಿ ಸರ್ಕಾರದಲ್ಲಿ ಎಲ್ಲವನ್ನೂ ಈಡೇರಿಸಲು ಸಾಧ್ಯವಾಗಿಲ್ಲ. ಇದೀಗ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಉದ್ದೇಶದಿಂದ ಈಗಾಗಲೇ ಪ್ರಮುಖ 7 ಘೋಷಣೆಗಳನ್ನು ಮಾಡಿರುವ ಕಾಂಗ್ರೆಸ್, ಈಗ ಇನ್ನಷ್ಟು ಘೋಷಣೆಗಳನ್ನು ನಾಳೆ ಬಿಡುಗಡೆ ಮಾಡಲು ತೀರ್ಮಾನಿಸಿದೆ.
ಈಗಾಗಲೇ ಬಿಡುಗಡೆಯಾದ ಬಿಜೆಪಿ ಪ್ರಣಾಳಿಕೆ:ಬಿಜೆಪಿ ಪಕ್ಷ ಇಂದು ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಇದಕ್ಕಿಂತ ಮುನ್ನ ಜೆಡಿಎಸ್ ಪಕ್ಷ ಪ್ರಣಾಳಿಕೆ ಬಿಡುಗಡೆ ಮಾಡಿದೆ. ವಿಶೇಷ ಅಂದರೆ, ಪುತ್ತೂರು ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅರುಣ್ ಪುತ್ತಿಲ ಸಹ ತಮ್ಮ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಕಾಂಗ್ರೆಸ್ ರಾಷ್ಟ್ರೀಯ ನಾಯಕರು ದಿನಕ್ಕೊಂದು ಕಡೆ ಪ್ರಚಾರದಲ್ಲಿ ತೊಡಗಿದ್ದಾರೆ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ನಿರಂತರ ಪ್ರಚಾರದಲ್ಲಿದ್ದು, ಪ್ರಣಾಳಿಕೆ ಬಿಡುಗಡೆಗೆ ಒಂದೆಡೆ ಸೇರಲು ರಾಜ್ಯ ನಾಯಕರು ಪುರುಸೊತ್ತು ಸಿಕ್ಕಿರಲಿಲ್ಲ. ಆದರೆ, ಸಮಾರಂಭ ಆಯೋಜಿಸಿ ಪ್ರಣಾಳಿಕೆ ಬಿಡುಗಡೆಗೆ ಅಂತಿಮ ತೀರ್ಮಾನ ಕೈಗೊಂಡಿದ್ದಾರೆ.
ಜನಪ್ರಿಯ ಬೇಡಿಕೆಗಳು ಆಗಲೇ ಘೋಷಣೆ:ಈಗಾಗಲೇ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಅಂತ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸಮ್ಮುಖದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ತಮ್ಮ ಉಪಸ್ಥಿತಿಯಲ್ಲಿ ಐದು ಘೋಷಣೆಗಳನ್ನು ಮಾಡಿದ್ದಾರೆ. ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ನೀಡಿಕೆ ಮೊದಲ ಘೋಷಣೆ. ಬೆಳಗಾವಿಯ ಚಿಕ್ಕೋಡಿಯಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯ ಉದ್ಘಾಟನಾ ಸಮಾವೇಶದಲ್ಲಿ ಕಾಂಗ್ರೆಸ್ ಈ ಘೋಷಣೆ ಮಾಡಿತ್ತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಅವರು ಘೋಷಣೆ ಮಾಡಿದ್ದರು.