ಬೆಂಗಳೂರು: ಟ್ರೆಂಡ್ ತಕ್ಕಂತೆ ಸೈಬರ್ ಖದೀಮರು ತಮ್ಮ ವಂಚನೆ ಮಾದರಿ ಬದಲಾಯಿಸುತ್ತಿದ್ದು, ದಿನೇ ದಿನೆ ಹೊಸ ಹೊಸ ಶೈಲಿಯಲ್ಲಿ ಸಾರ್ವಜನಿಕರಿಗೆ ಮೋಸ ಮಾಡುವ ಕಲೆ ಕರಗತ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಎಂಬಂತೆ ಮಹಿಳೆಗೆ ಅರಿವಿಲ್ಲದಂತೆ ಆಕೆಯ ಬೆರಳಚ್ಚು ಬಳಸಿ ಬ್ಯಾಂಕ್ ಖಾತೆಯಿಂದ ವಂಚಕರು 20 ಸಾವಿರ ರೂಪಾಯಿ ಹಣ ಎಗರಿಸಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ರಾಜ್ಯದಲ್ಲಿ ಆಧಾರ್ ಸಕ್ರಿಯಗೊಳಿಸಿದ ಪಾವತಿ ವ್ಯವಸ್ಥೆಯ (ಎಇಪಿಎಸ್ ) ವಂಚನೆಯಾದ ಮೊದಲ ಪ್ರಕರಣ ಎಂದು ಹೇಳಲಾಗುತ್ತಿದೆ. ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಸಂತನಗರದಲ್ಲಿ ವಾಸವಿರುವ ಸುನಿತಾ ರವಿಕುಮಾರ್ ಎಂಬುವರು ನೀಡಿದ ದೂರಿನ ಮೇರೆಗೆ ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಮನೆಗೆಲಸ ಮಾಡುವ ಸುನಿತಾ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದಾರೆ. ಯೂನಿಯನ್ ಬ್ಯಾಂಕ್ನಲ್ಲಿ ಖಾತೆ ಹೊಂದಿರುವ ಸುನಿತಾ ಅವರಿಗೆ ಸೆಪ್ಟೆಂಬರ್ 6 ರಂದು 10 ಸಾವಿರ ಹಾಗೂ ಸೆ.7ರಂದು 10 ಸಾವಿರ ಹಣ ಕಡಿತವಾಗಿರುವ ಬಗ್ಗೆ ಗೆ ಎರಡು ಬಾರಿ ಮೆಸೇಜ್ ಬಂದಿದೆ. ಇದನ್ನ ಕಂಡು ಸುನಿತಾ ಆಶ್ವರ್ಯಕ್ಕೊಳಗಾಗಿದ್ದರು. ಹಣ ವಿತ್ ಡ್ರಾ ಮಾಡಿಕೊಳ್ಳಲು ಬ್ಯಾಂಕ್ಗೆ ಯಾವುದೇ ಚೆಕ್ ನೀಡಿರಲಿಲ್ಲ. ಅಲ್ಲದೇ ಮೊಬೈಲ್ ಗೆ ಓಟಿಪಿ ಸಹ ಬಂದಿರಲಿಲ್ಲ. ಕೂಡಲೇ ಬ್ಯಾಂಕ್ ಗೆ ಹೋಗಿ ವಿಚಾರಣೆ ನಡೆಸಿದ ಮಹಿಳೆಗೆ ಗೊತ್ತಾಗಿದ್ದೇ ಎಇಪಿಎಸ್ ವಂಚನೆ.
ಏನಿದು Aeps ವಂಚನೆ ?:ಸರಳವಾಗಿ ಹೇಳುವುದಾದರೆ ಬ್ಯಾಂಕ್ ಖಾತೆ ಆಧಾರ್ ಖಾತೆ ವಿಲೀನಗೊಳಿಸಿ ಬಯೋಮೆಟ್ರಿಕ್ ಬಳಸಿ ಹಣ ರವಾನೆ ಅಥವಾ ವಿತ್ ಡ್ರಾ ಮಾಡಿಕೊಳ್ಳುವ ವ್ಯವಸ್ಥೆಯೇ AEPS. ಆಧಾರ್ ಕಾರ್ಡ್ ದಾರರು ತಮ್ಮ ಆಧಾರ್ ಕಾರ್ಡ್ ಸಂಖ್ಯೆ ಹಾಗೂ ಬಯೋಮೆಟ್ರಿಕ್ ದೃಢೀಕರಣಗೊಳಿಸಿದ ಬಳಿಕ ಹಣದ ವಹಿವಾಟು ನಡೆಸಬಹುದಾಗಿದೆ. ಸೈಬರ್ ಚೋರರು ಮಹಿಳೆಯ ಬಯೋಮೆಟ್ರಿಕ್ ಬಳಸಿಕೊಂಡು ಹಣ ವಂಚಿಸಿದ್ದಾರೆ ಎಂಬುದು ಪೊಲೀಸರ ತನಿಖೆ ವೇಳೆ ತಿಳಿದುಬಂದಿದೆ.