ಬೆಂಗಳೂರು:ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಕಾಲೇಜು ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡೀ ರಾಜ್ಯವೇ ಆಕ್ರೋಶ ವ್ಯಕ್ತಪಡಿಸಿದೆ. ಇದರ ಬೆನ್ನಲ್ಲೇ ಮೈಸೂರು ವಿಶ್ವವಿದ್ಯಾಲಯ, ಕ್ಯಾಂಪಸ್ನಲ್ಲಿ ವಿದ್ಯಾರ್ಥಿನಿಯರ ಚಲನವಲನದ ಮೇಲೆ ನಿರ್ಬಂಧ ವಿಧಿಸಿತ್ತು. ಈ ಸಂಬಂಧ ನಟ ಚೇತನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಂಜೆ 6.30ರ ನಂತರ ವಿದ್ಯಾರ್ಥಿನಿಯರು ಹೊರಗೆ ಓಡಾಡುವಂತಿಲ್ಲ ಎಂದು ವಿವಿಯಿಂದ ಸುತ್ತೋಲೆ ಹೊರಡಿಸಲಾಗಿತ್ತು. ಆದರೆ ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸುತ್ತೋಲೆ ಹಿಂಪಡೆಯಲಾಗಿದೆ.
ಈ ಬಗ್ಗೆ ನಟ ಚೇತನ್ ಅಹಿಂಸಾ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದು, ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ವಿಶ್ವವಿದ್ಯಾಲಯವು ಹೆಣ್ಣು ಮಕ್ಕಳು ಸಂಜೆ 6.30ರ ಮೇಲೆ ಒಬ್ಬಂಟಿಯಾಗಿ ಕ್ಯಾಂಪಸ್ನಲ್ಲಿ ಓಡಾಡಬಾರದೆಂಬ ನಿಯಮವನ್ನು ಜಾರಿಗೆ ತಂದಿದೆ. ಇದು ಹೆಸರಾಂತ ಶೈಕ್ಷಣಿಕ ಸಂಸ್ಥೆಗೆ ನಾಚಿಕಗೇಡಿನ ವಿಷಯ. ಮಹಿಳೆಯರ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವ ಬದಲು ಮಾನಸ ಗಂಗೋತ್ರಿಯು ಹೆಣ್ಣು ಮಕ್ಕಳಿಗೆ ರಕ್ಷಣಾತ್ಮಕ ಮತ್ತು ಸುರಕ್ಷತಾ ಕಾರ್ಯ ವಿಧಾನಗಳನ್ನು ಹೆಚ್ಚಿಸಬೇಕೆಂದು ನಟ ಚೇತನ್ ಆಗ್ರಹಿಸಿದ್ದಾರೆ.
ಇನ್ನು, ವಿಶ್ವವಿದ್ಯಾಲಯಗಳ ಕ್ಯಾಂಪಸ್ಗಳಲ್ಲಿ ವಿದ್ಯಾರ್ಥಿನಿಯರು, ಹೆಣ್ಣುಮಕ್ಕಳ ಓಡಾಟಕ್ಕೆ ನಿರ್ಬಂಧ ಹೇರುವುದು ಸರಿಯಾದ ನಿಯಮವಲ್ಲ. ಅದರ ಬದಲಿಗೆ ಕ್ಯಾಂಪಸ್ ಅನ್ನು ಸುರಕ್ಷಿತವಾಗಿಡಲು ಕ್ರಮ ಕೈಗೊಳ್ಳುವಂತೆ ಮೈಸೂರು ವಿವಿ ಕುಲಪತಿಗಳಿಗೆ ಸೂಚಿಸಿದ್ದೇನೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್ ಅಶ್ವತ್ಥ್ನಾರಾಯಣ ತಿಳಿಸಿದ್ದಾರೆ.