ಬೆಂಗಳೂರು: 'ಅವನು ಅರೆಸ್ಟ್ ಆಗಿದ್ದಾನಲ್ವಾ, ಅವನಿಗೆ ನನ್ನ ಕಣ್ಣ ಮುಂದೆಯೇ ಶಿಕ್ಷೆಯಾಗಬೇಕು' ಎಂದು ಆ್ಯಸಿಡ್ ದಾಳಿಗೊಳಗಾಗಿ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತ ಯುವತಿ ಕನವರಿಸಿದ್ದಾಳೆ ಎನ್ನಲಾಗುತ್ತಿದೆ.
ಆ್ಯಸಿಡ್ ದಾಳಿ ನಡೆಸಿದ್ದ ಆರೋಪಿ ನಾಗೇಶ್‌ನನ್ನು ಬಂಧಿಸಲಾಗಿದೆ ಎಂದು ತಿಳಿಸಿದಾಗ ದಾಳಿ ಮಾಡಿದ ಕಿರಾತಕನಿಗೆ ಶಿಕ್ಷೆ ಆಗಬೇಕು. ನಾನು ನೋವಿನಲ್ಲಿ ನರಳುವಂತೆಯೇ ಆತನಿಗೂ ಚಿತ್ರಹಿಂಸೆಯಾಗುವ ಶಿಕ್ಷೆ ಆಗಬೇಕು. ಅವನೂ ಕೂಡ ನರಳಬೇಕು ಎಂದು ಯುವತಿ ಆಕ್ರೋಶ ವ್ಯಕ್ತಪಡಿಸಿದ್ದಾಳೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಕೃತ್ಯ ನಡೆಸಿ 16 ದಿನಗಳ ಬಳಿಕ ಆರೋಪಿ ನಾಗೇಶ್ ಬಂಧನವಾದ ಬಗ್ಗೆ ಪ್ರತಿಕ್ರಿಯಿಸಿರುವ ಯುವತಿಯ ಕುಟುಂಬಸ್ಥರು, ಆತನಿಗೆ ತಕ್ಕ ಶಿಕ್ಷೆ ಆಗಬೇಕು. ಅವನು ಒಂದೇ ಸಲ ಅಲ್ಲ, ನರಳಿ ನರಳಿ ಸಾಯಬೇಕು. ಅಂತಹ ಶಿಕ್ಷೆ ಅವನಿಗೆ ಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಕೊನೆಗೂ ಆ್ಯಸಿಡ್ ನಾಗನ ಬಂಧನ.. ಖಾವಿ ಧರಿಸಿ ಧ್ಯಾನ ಮಾಡುತ್ತಿದ್ದಾಗಲೇ ಪೊಲೀಸ್ ಬಲೆಗೆ!
ಯುವತಿಯ ದೊಡ್ಡಮ್ಮ ಮಾತನಾಡಿ, ಚಾಮುಂಡಿ ಮಹಿಷಾಸುರನ ಕೊಂದ ಹಾಗೆ ಆ್ಯಸಿಡ್ ನಾಗನನ್ನ ಕೊಲ್ಲಬೇಕು. ಒಂದೇ ಸಲ ಸಾಯಿಸಬೇಡಿ. ನಮ್ಮ ಮಗಳ ನೋವು ಅವನಿಗೂ ಗೊತ್ತಾಗಬೇಕು. ಅವನಿಗೆ ಕ್ರೂರಾತಿ ಕ್ರೂರ ಶಿಕ್ಷೆ ನೀಡಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.
ಸಂತ್ರಸ್ತೆಯ ಚಿಕ್ಕಪ್ಪ ನಾಗೇಶ್ ಬಂಧಿಸಿದ ಪೊಲೀಸರಿಗೆ ಕೃತಜ್ಞತೆ ಸಲ್ಲಿಸಿದ್ದು, ಪೊಲೀಸ್ ಇಲಾಖೆಗೆ ತುಂಬಾ ಧನ್ಯವಾದಗಳು. ಪೊಲೀಸರು ನಮಗೆ ಧೈರ್ಯ ತುಂಬಿದರು. ಅವರು ಹೇಳಿದಂತೆಯೇ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಹೇಳಿದರು. ನನ್ನ ಮಗಳು ಇನ್ನೂ ಊಟ ಮಾಡಲು ಆಗುತ್ತಿಲ್ಲ. ಪೈಪ್ ಮೂಲಕವೇ ದ್ರವ ಆಹಾರ ಕೊಡಲಾಗುತ್ತಿದೆ ಎಂದು ಸಂತ್ರಸ್ತೆಯ ತಂದೆ ಹೇಳಿದ್ದಾರೆ.
ಆರೋಪಿ ನಾಗೇಶ್‌ನನ್ನು ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಸ್ವಾಮೀಜಿಯ ವೇಷದಲ್ಲಿ ಆರೋಪಿ ನಾಗ ಸಿಕ್ಕಿಬಿದ್ದಿದ್ದ. ಕೃತ್ಯ ನಡೆದು 16 ದಿನಗಳ ಬಳಿಕ ನಿರಂತರ ಶೋಧದ ಬಳಿಕ ಆರೋಪಿಯನ್ನು ಬಂಧಿಸಲಾಗಿದೆ.
ಇದನ್ನೂ ಓದಿ:ಆ್ಯಸಿಡ್ ದಾಳಿ ಕೇಸ್: ಮೂತ್ರ ವಿಸರ್ಜನೆ ನೆಪದಲ್ಲಿ ತಪ್ಪಿಸಿಕೊಳ್ಳುತ್ತಿದ್ದ ನಾಗನಿಗೆ ಪೊಲೀಸರಿಂದ ಗುಂಡೇಟು