ಬೆಂಗಳೂರು: ಕೊಲೆ ಪ್ರಕರಣದಡಿ ಜೈಲು ಸೇರಿದ್ದ ವಿಚಾರಣಾಧೀನ ಕೈದಿ ವಿಚಾರಣೆಗಾಗಿ ಇಂದು ಸಿಟಿ ಸಿವಿಲ್ ಕೋರ್ಟ್ಗೆ ಆಗಮಿಸಿದ್ದ. ಈ ವೇಳೆ ಕೋರ್ಟ್ ಕಟ್ಟಡದ 3ನೇ ಮಹಡಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ. ಜತೀನ್ ಕುಮಾರ್ ಎಂಬಾತ ಕಟ್ಟಡದಿಂದ ಕೆಳ ಬಿದ್ದಿರುವ ಆರೋಪಿ.
ಪ್ರಕರಣವೇನು? ತಮಿಳುನಾಡು ಮೂಲದ ಜತೀನ್ ವೃತ್ತಿಯಲ್ಲಿ ಟೆಕ್ಕಿಯಾಗಿದ್ದ. ಕೆಲ ವರ್ಷಗಳ ಹಿಂದೆ ಲಕ್ಷ್ಮೀಶಂಕರಿ ಎಂಬುವರನ್ನು ಪ್ರೀತಿಸಿ ಮದುವೆಯಾಗಿದ್ದಾನೆ. ಆರಂಭದಲ್ಲಿ ಅನ್ಯೋನ್ಯವಾಗಿದ್ದ ದಂಪತಿಗೆ ಮೂರು ವರ್ಷದ ಹಾಗೂ 2 ವರ್ಷದ ಮಕ್ಕಳಿದ್ದರು. ಪತ್ನಿಯು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಜತೀನ್ಗೆ ಕೆಲಸ ಸಿಗದೆ ಓಡಾಡಿಕೊಂಡಿದ್ದ. ಇದೇ ವಿಚಾರವಾಗಿ ದಂಪತಿ ನಡುವೆ ವೈಮನಸ್ಸು ಉಂಟಾಗಿತ್ತು.
ಇದನ್ನೂ ಓದಿ:ಈಶ್ವರಪ್ಪ ಬಂಧನಕ್ಕೆ ಆಗ್ರಹಿಸಿ ಸಿಎಂ ನಿವಾಸಕ್ಕೆ ಮುತ್ತಿಗೆ ಯತ್ನ: ಎಎಪಿ ಮುಖಂಡರು ಪೊಲೀಸ್ ವಶ
ಕಳೆದ 2020 ಮಾರ್ಚ್ 20 ರಂದು ಪತ್ನಿ ಮನೆಯಲ್ಲಿ ಇಲ್ಲದಿದ್ದಾಗ ಮನೆಯಲ್ಲಿ ಊಟ ಮಾಡಿ ಮಲಗಿದ್ದ ಇಬ್ಬರು ಮಕ್ಕಳನ್ನು ಕತ್ತು ಹಿಸುಕಿ ಸಾಯಿಸಿದ್ದಾನೆ. ಪತ್ನಿ ದೂರು ನೀಡಿದ ಮೇರೆಗೆ ಹುಳಿಮಾವು ಪೊಲೀಸರು ಆತನನ್ನು ಬಂಧಿಸಿ, ಪರಪ್ಪನ ಅಗ್ರಹಾರ ಜೈಲಿಗಟ್ಟಿದ್ದರು.
ಇಂದು ಸಿಟಿ ಸಿವಿಲ್ ಕೋರ್ಟ್ನಲ್ಲಿ ಪ್ರಕರಣ ಸಂಬಂಧ ವಿಚಾರಣೆಯಿತ್ತು. ಜೈಲಿನಿಂದ ಸಿಎಆರ್ ಪೊಲೀಸರು ಎಸ್ಕಾರ್ಟ್ ಮೂಲಕ ಆರೋಪಿಯನ್ನು ಕರೆ ತಂದಿದ್ದರು. ಈ ವೇಳೆ ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ಕಟ್ಟಡದಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಜೈಲಿನಲ್ಲಿ ವಿಚಾರಣಾಧೀನ ಅವಧಿಯಲ್ಲಿ ಜೈಲಿನಿಂದಲೇ ಪತ್ನಿಗೆ ಜೀವ ಬೆದರಿಕೆ ಹಾಕಿದ್ದ ಎಂದು ಮೂಲಗಳಿಂದ ತಿಳಿದುಬಂದಿದೆ.