ಕರ್ನಾಟಕ

karnataka

ETV Bharat / state

ಅತ್ತೆಯ ರುಂಡ ಲಾರಿಗೆಸೆದ ಸೊಸೆ ಮತ್ತು ಆಕೆಯ ಸ್ನೇಹಿತ ಅರೆಸ್ಟ್.. - ಎಡಿಜಿಪಿ ಭಾಸ್ಕರ್ ರಾವ್ ಸುದ್ದಿಗೋಷ್ಠಿ

ಕೊಲೆ ಪ್ರಕರಣದ ಆರೋಪಿಗಳು ಹಗ್ಗದಿಂದ ಲಿಂಗಮ್ಮನ ಕತ್ತು ಬಿಗಿದು ಹತ್ಯೆ ಮಾಡಿದ್ದರು. ಬಳಿಕ ಸಾಕ್ಷ್ಯಾನಾಶ ಮಾಡಲು ಆರೋಪಿ ಬಾಲಚಂದ್ರ ಅದೇ ದಿನ ರಾತ್ರಿ ನೀಡಹಳ್ಳಿ-ಹಿರೇಹಳ್ಳಿ ರೈಲ್ವೇ ಹಳಿ ನಡುವೆ ಮೃತದೇಹ ಬಿಸಾಕಿದ್ದಾನೆ. ರೈಲು ಹರಿದ ರಭಸಕ್ಕೆ ದೇಹ ಛಿದ್ರ-ಛಿದ್ರವಾಗಿತ್ತು.

accused-arrested-in-old-woman-murder-case
accused-arrested-in-old-woman-murder-case

By

Published : Jul 26, 2021, 5:24 PM IST

Updated : Jul 26, 2021, 5:57 PM IST

ಬೆಂಗಳೂರು:ಹಣ ಕೊಡಲು ಸತಾಯಿಸುತ್ತಿದ್ದ ಹಾಗೂ ಅನೈತಿಕ ಸಂಬಂಧದ ಬಗ್ಗೆ‌ ಚುಚ್ಚು ಮಾತನಾಡುತ್ತಿದ್ದ ಅತ್ತೆಯ ಕೊಲೆಗೆ ಸಂಚು ರೂಪಿಸಿ ಸೊಸೆ ಹಾಗೂ ಆಕೆಯ ಸ್ನೇಹಿತ ಮನೆಗೆ ಕರೆಯಿಸಿಕೊಂಡು ಕತ್ತು ಹಿಸುಕಿ ಸಾಯಿಸಿದ ಘಟನೆ ನಡೆದಿತ್ತು. ರೈಲ್ವೇ ಟ್ರ್ಯಾಕ್​ಗೆ ಶವ ಬಿಸಾಡಿ ರೈಲು ಹರಿದ ಬಳಿಕ ಗುರುತು ಪತ್ತೆಯಾಗದಿರಲು ದೇಹದಿಂದ‌ ಪ್ರತ್ಯೇಕವಾಗಿದ್ದ ರುಂಡವನ್ನು ಲಾರಿಯಲ್ಲಿ ಬಿಸಾಕಿದ್ದ ಆರೋಪಿಯನ್ನು ಯಶವಂತಪುರ ರೈಲ್ವೇ ಪೊಲೀಸರು ಬಂಧಿಸಿದ್ದಾರೆ.

ಎಡಿಜಿಪಿ ಭಾಸ್ಕರ್ ರಾವ್ ಸುದ್ದಿಗೋಷ್ಠಿ

ತುಮಕೂರಿನ ಶಿರಾ‌ ಮೂಲದ ಬಾಲಚಂದ್ರ ಬಂಧಿತ ಆರೋಪಿ. ಲಿಂಗಮ್ಮ (70) ಕೊಲೆಯಾದವರು. ಹತ್ಯೆಯಾದ ಲಿಂಗಮ್ಮ ಸೊಸೆ ಲತಾ ತಲೆಮರೆಸಿಕೊಂಡಿದ್ದು, ಪತ್ತೆಗಾಗಿ ರೈಲ್ವೇ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಮಂಡ್ಯದ ತೂಬಗೆರೆಯಲ್ಲಿ ಮಗ‌ ಸತೀಶ್ ಜೊತೆ ಲಿಂಗಮ್ಮ ವಾಸವಾಗಿದ್ದರು. ಈಕೆಯ ಮೊದಲ ಮಗನನ್ನು ಆರೋಪಿತೆ ಲತಾನೊಂದಿಗೆ ಮದುವೆ ಮಾಡಲಾಗಿತ್ತು. ಕೆಲ ವರ್ಷಗಳ ಹಿಂದೆ ಅನಾರೋಗ್ಯದಿಂದ ಮಗ ಮೃತ್ತಪಟ್ಟಿದ್ದ. ಸರ್ಕಾರಿ ಶಾಲೆಯ ನಿವೃತ ಶಿಕ್ಷಕಿಯಾಗಿದ್ದ ಲಿಂಗಮ್ಮ ಪಿಂಚಣಿ ಹಣವೇ ಜೀವನಾಧಾರವಾಗಿತ್ತು. ಲತಾ ತನ್ನ ಪತಿ ಸಾವಿನ ಬಳಿಕ ಅತ್ತೆ‌ ಲಿಂಗಮ್ಮ‌ನೊಂದಿಗೆ ಜೀವನಾಂಶಕ್ಕಾಗಿ 1.50 ಲಕ್ಷ ನೀಡುವ‌ ಕುರಿತಂತೆಯೂ ಮಾತುಕತೆ ನಡೆಸಿದ್ದಳು.

ಈ ನಡುವೆ ಆರೋಪಿ ಬಾಲಚಂದ್ರನ ಪರಿಚಯವಾಗಿ ಗೆಳೆತನ ಬೆಳೆದಿದೆ. ಹಣ ನೀಡಲು ಸತಾಯಿಸುತ್ತಿದ್ದ ಲಿಂಗಮ್ಮ, ಸೊಸೆ ಲತಾ ಪರ ಪುರುಷನೊಂದಿಗೆ ಅನೈತಿಕ ಸಂಬಂಧ ಹೊಂದಿರುವುದಾಗಿ ಸಾರ್ವಜನಿಕವಾಗಿ‌ ದೂಷಿಸುತ್ತಿದ್ದಳು.‌ ಇದರಿಂದ ರೊಚ್ಚಿಗೆದ್ದ ಬಾಲಚಂದ್ರ ಹಾಗೂ ಲತಾ, ಹಣ ಕೊಡುವ ನೆಪದಲ್ಲಿ ಜುಲೈ 19ರಂದು ಲಿಂಗಮ್ಮನನ್ನು ಮನೆಗೆ ಕರೆಯಿಸಿಕೊಂಡಿದ್ದಾರೆ.

ಕವರ್​ನಲ್ಲಿ ತಲೆ ಹಾಕಿ ಲಾರಿಗೆ ಎಸೆದ ಆರೋಪಿ:

ತುಮಕೂರಿನಲ್ಲಿರುವ ಮನೆಗೆ ಕರೆಯಿಸಿಕೊಂಡ ಆರೋಪಿಗಳು ಹಗ್ಗದಿಂದ ಲಿಂಗಮ್ಮನ ಕತ್ತು ಬಿಗಿದು ಹತ್ಯೆ ಮಾಡಿದ್ದಾರೆ. ಸಾಕ್ಷ್ಯಾನಾಶ ಮಾಡಲು ಆರೋಪಿ ಬಾಲಚಂದ್ರ ಅದೇ ದಿನ ರಾತ್ರಿ ನೀಡಹಳ್ಳಿ-ಹಿರೇಹಳ್ಳಿ ರೈಲ್ವೇ ಹಳಿ ನಡುವೆ ಮೃತದೇಹ ಬಿಸಾಕಿದ್ದಾನೆ. ರೈಲು ಹರಿದ ರಭಸಕ್ಕೆ ದೇಹ ಛಿದ್ರ-ಛಿದ್ರವಾಗಿದೆ. ದೇಹದಿಂದ ತಲೆ ಬೇರ್ಪಟ್ಟಿದೆ.

ಮೃತ ಮುಖದ ಚಹರೆ ಗುರುತು ಸಿಗದಿರಲು‌ ಆರೋಪಿ ಬಾಲಚಂದ್ರ ಕವರ್​​ನಲ್ಲಿ ತಲೆ ಹಾಕಿಕೊಂಡು ಸ್ಥಳದಿಂದ ಕಾಲ್ಕಿತ್ತಿದ್ದ. ಇದಕ್ಕೂ ಮುನ್ನ‌ ಆಕೆಯ ಕತ್ತಿನಲ್ಲಿದ್ದ 6 ಸಾವಿರ ಮೌಲ್ಯದ ಚಿನ್ನ ತೆಗೆದಿರಿಸಿಕೊಂಡಿದ್ದ. ನಂತರ ತುಮಕೂರಿನ‌ ಜಾಸ್ ಟೋಲ್ ಬಳಿ ಲಾರಿಯೊಳಗೆ ತಲೆ ಬಿಸಾಕಿ ನಾಪತ್ತೆಯಾಗಿದ್ದ ಎಂದು ರೈಲ್ವೇ ಇಲಾಖೆಯ ಎಡಿಜಿಪಿ ಭಾಸ್ಕರ್ ರಾವ್ ಹೇಳಿದ್ದಾರೆ.

ಮುಂಡವಿಲ್ಲದ ತಲೆ ಇಳಕಲ್​ನಲ್ಲಿ ಪತ್ತೆ:

ಅಪರಿತ ಲಾರಿಯೊಂದಕ್ಕೆ ಮೃತಳ ತಲೆ ಬಿಸಾಕಿ ಆರೋಪಿ ನಾಪತ್ತೆಯಾಗಿದ್ದ. ಲಾರಿಯು ಇಳಕಲ್ ಬಳಿಯ ಶಹರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಲೆ ಪತ್ತೆಯಾಗಿದ್ದು, ಈ ಸಂಬಂಧ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಲಿಂಗಮ್ಮ ತನ್ನ ಸೊಸೆ ಲತಾ ಮನೆಗೆ ಹೋಗಿ ಬರುವುದಾಗಿ ಹೋಗಿದ್ದು, ಹಿಂತಿರುಗಿ ಬಂದಿಲ್ಲ ಎಂದು ಲಿಂಗಮ್ಮಳ ಇನ್ನೋರ್ವ ಮಗ ಸತೀಶ್ ಮಂಡ್ಯ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

20 ರಂದು ಶವ ಪತ್ತೆಯಾಗಿದ್ದು, ಯುಡಿಆರ್ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಶವವನ್ನು ತುಮಕೂರಿನ‌ ಸರ್ಕಾರಿ ಶವಾಗಾರದಲ್ಲಿ ಇಟ್ಟಿದ್ದರು. ಮಂಡ್ಯ ಪೊಲೀಸರು ಹಾಗೂ ರೈಲ್ವೇ ಪೊಲೀಸರಿಗೆ ಮಾಹಿತಿ ವಿನಿಮಯ ಹಿನ್ನೆಲೆಯಲ್ಲಿ‌ ಶವಾಗಾರದಲ್ಲಿದ್ದ ಲಿಂಗಮ್ಮ ಕೈ -ಕಾಲು ನೋಡಿ ಶವವನ್ನು ಗುರುತು ಹಿಡಿದಿದ್ದರು. ಮತ್ತೊಂದೆಡೆ ಇಳಕಲ್​ನಲ್ಲಿ ತಲೆ ಪತ್ತೆಯಾಗಿರುವ ಮಾಹಿತಿ ಸಂಗ್ರಹಿಸಿ, ತನಿಖೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಎಸ್​ಪಿ ಸಿರಿಗೌರಿ ಮಾರ್ಗದರ್ಶನದಲ್ಲಿ ಯಶವಂತಪುರ‌ ಠಾಣೆಯ ಇನ್ ಸ್ಪೆಕ್ಟರ್ ಶಿವಕುಮಾರ್ ನೇತೃತ್ವದ ತಂಡ ಯಶಸ್ವಿಯಾಗಿದೆ.

Last Updated : Jul 26, 2021, 5:57 PM IST

ABOUT THE AUTHOR

...view details