ಬೆಂಗಳೂರು:ಪ್ರಾಸಿಕ್ಯೂಷನ್ ಅನುಮತಿ ನೀಡುವ ವಿಚಾರದಲ್ಲಿನ ಲೋಪದಿಂದಾಗಿ ಮಾಡಾಳ್ ವಿರೂಪಾಕ್ಷಪ್ಪ ಮತ್ತು ದೇವೇಂದ್ರಪ್ಪ ಸೇರಿದಂತೆ ಇತರರ ಮೇಲಿದ್ದ ಭ್ರಷ್ಟಾಚಾರ ಪ್ರಕರಣಗಳು ನ್ಯಾಯಾಲಯಗಳಲ್ಲಿ ವಜಾಗೊಳ್ಳುತ್ತಿರುವುದು ಬೇಸರದ ಸಂಗತಿ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ ಹೇಳಿದರು.
ಪ್ರಾಸಿಕ್ಯೂಷನ್ ಅನುಮತಿ ನೀಡುವಲ್ಲಿ ಆಗುತ್ತಿರುವ ಲೋಪದಿಂದಾಗಿ ಭ್ರಷ್ಟಾಚಾರಿಗಳ ವಿರುದ್ಧದ ಪ್ರಕರಣಗಳು ನ್ಯಾಯಾಲಯದಲ್ಲಿ ವಜಾಗೊಳ್ಳುತ್ತಿವೆ. ಲೋಕಾಯುಕ್ತ ಹಾಗೂ ರಾಜ್ಯ ಸರ್ಕಾರ ಭ್ರಷ್ಟರಿಗೆ ಕಠಿಣ ಶಿಕ್ಷೆ ಕೊಡಿಸುವಲ್ಲಿ ವಿಫಲವಾಗುತ್ತಿರುವುದನ್ನು ಖಂಡಿಸಿ ಎಎಪಿ ನಗರದ ಫ್ರೀಡಂ ಪಾರ್ಕ್‌ನಲ್ಲಿ ಇಂದು ಪ್ರತಿಭಟನೆ ನಡೆಸಿತು.
ಈ ವೇಳೆ ಮಾತನಾಡಿದ ಮೋಹನ್ ದಾಸರಿ, ನೂರಾರು ಕೋಟಿ ಲೂಟಿ ಮಾಡಿರುವ ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧದ ಪ್ರಕರಣವನ್ನು ಪ್ರಾಸಿಕ್ಯೂಷನ್ ಅನುಮತಿ ಪಡೆದಿಲ್ಲ ಎಂದು ರದ್ದು ಮಾಡಲಾಗುತ್ತದೆ. ದೇವೇಂದ್ರಪ್ಪ ಮೇಲೆ ದಾಳಿಯಾದಾಗ ಕರ್ನಾಟಕದಾದ್ಯಂತ ದೊಡ್ಡ ಮಟ್ಟದ ಸುದ್ದಿಯಾಗಿತ್ತು. ದೇವೇಂದ್ರಪ್ಪ 20 ಲಕ್ಷ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಆದರೂ, ಅವರೀಗ ರಾಜಾರೋಷವಾಗಿ ಹೊರಗಿದ್ದಾರೆ. ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪರನ್ನು ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಸೇರುವಂತೆ ಮಾಡಿದ್ದು ಸಂತೋಷ್ ಹೆಗಡೆ ಅವರಿದ್ದ ಲೋಕಾಯುಕ್ತ ಸಂಸ್ಥೆ. ಆಗ ಲೋಕಾಯುಕ್ತ ಎಂದರೆ ಎಲ್ಲರಿಗೂ ಭಯವಿತ್ತು. ಆದರೆ, ಸಿದ್ದರಾಮಯ್ಯ ಎಸಿಬಿ ರಚಿಸಿ, ಲೋಕಾಯುಕ್ತ ಸಂಸ್ಥೆಯನ್ನು ಹಲ್ಲು ಕಿತ್ತ ಹಾವಿನಂತೆ ಮಾಡಿದರು. ಎಸಿಬಿ ರದ್ದಾದ ಬಳಿಕವೂ ಲೋಕಾಯುಕ್ತಕ್ಕೆ ಸಂಪೂರ್ಣ ಅಧಿಕಾರ ನೀಡಿಲ್ಲ ಎಂದು ದೂರಿದರು.
ನಂತರ ಬಂದ ಬಿಜೆಪಿ ಸರ್ಕಾರ ಕೋವಿಡ್ ಅವಧಿಯಲ್ಲಿ ಹಗರಣಗಳನ್ನು ಮಾಡಿತು. 45 ರೂ ಬೆಲೆ ಬಾಳುವ ಮಾಸ್ಕ್‌ಗೆ 450 ರೂ. ಬಿಲ್ ಮಾಡಲಾಗಿತ್ತು ಎಂದು ಅದೇ ಪಕ್ಷದ ನಾಯಕರೇ ಹೇಳಿದ್ದಾರೆ. ಹಗರಣಳಾಗಿವೆ ಎಂದು ಬಿಜೆಪಿ ನಾಯಕರೇ ಹೇಳಿದ್ದರೂ, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ತಲೆಕೆಡಿಸಿಕೊಳ್ಳುತ್ತಿಲ್ಲ. ಬಿಜೆಪಿಯವರನ್ನೂ ಸೇರಿ ನಮ್ಮನ್ನು ನಾವು ಕಾಪಾಡಿಕೊಳ್ಳುತ್ತೇವೆ ಎಂದು ಸುಮ್ಮನಿದ್ದಾರೆ ಎಂದರು.