ಬೆಂಗಳೂರು: ಪಂಜಾಬ್ ಮಾತ್ರವಲ್ಲದೇ ಇಡೀ ದೇಶದಲ್ಲಿ ಆಮ್ ಆದ್ಮಿ ಪಾರ್ಟಿಯ ಪರ್ವ ಆರಂಭವಾಗಿದ್ದು, ಮುಂದಿನ ಚುನಾವಣೆಗಳಲ್ಲಿ ಕರ್ನಾಟಕದಲ್ಲೂ ಪಕ್ಷವು ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಲಿದೆ ಎಂದು ಎಎಪಿಯ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹೇಳಿದರು.
ಪಂಜಾಬ್ ಫಲಿತಾಂಶದ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದೆಹಲಿಯಲ್ಲಿ ಕೇಜ್ರಿವಾಲ್ ಸರ್ಕಾರ ನೀಡಿದ ಜನಪರ ಹಾಗೂ ಪಾರದರ್ಶಕ ಆಡಳಿತವು ಪಂಜಾಬ್‌ನಲ್ಲಿ ಪಕ್ಷಕ್ಕೆ ಭರ್ಜರಿ ಬಹುಮತ ತಂದುಕೊಟ್ಟಿದೆ. ಕರ್ನಾಟಕ ಕೂಡ ಆಮ್ ಆದ್ಮಿ ಪಾರ್ಟಿಯ ಆಡಳಿತವನ್ನು ಬಯಸುತ್ತಿದ್ದು, ಮುಂದಿನ ಬಿಬಿಎಂಪಿ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಸಾಮರ್ಥ್ಯವು ಇಲ್ಲಿ ಕೂಡ ಸಾಬೀತಾಗಲಿದೆ. ಈಗಿನ ಕಾಲಕ್ಕೆ ತಕ್ಕಂತಹ ಅಭಿವೃದ್ಧಿಯನ್ನು ನೀಡುವ ಹಾಗೂ ಘೋಷಣೆಗಳನ್ನು ಸರಿಯಾದ ರೀತಿಯಲ್ಲಿ ಅನುಷ್ಠಾನಕ್ಕೆ ತರುವ ಏಕೈಕ ಪಕ್ಷವೆಂದರೆ ಎಎಪಿ. ಇದರ ಬೆಳವಣಿಗೆಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ಪಂಜಾಬ್, ರಾಷ್ಟ್ರೀಯ ರಾಜಕೀಯದಲ್ಲಿ ಎಎಪಿ ಆರ್ಭಟ: ಈ ಮಟ್ಟಕ್ಕೆ ಬೆಳೆಯುವ ಪಕ್ಷದ ಶ್ರಮ ಎಂತಹುದು ಗೊತ್ತಾ!?
ಬಿಜೆಪಿ ಹಾಗೂ ಕಾಂಗ್ರೆಸ್ ಎಂಬ ಎರಡು ಹಳೆಯ ಹಾಗೂ ಭ್ರಷ್ಟ ಪಕ್ಷಗಳೇ ದೇಶದ ಜನರಿಗೆ ಇರುವ ಆಯ್ಕೆಗಳು ಎಂಬ ವಾತಾವರಣವಿತ್ತು. ಆದರೆ, ಈಗ ಆಮ್ ಆದ್ಮಿ ಪಾರ್ಟಿಯು ಎರಡು ರಾಜ್ಯಗಳಲ್ಲಿ ಅಧಿಕಾರ ಪಡೆಯುವ ಮೂಲಕ ದೇಶದ ರಾಜಕೀಯದಲ್ಲಿ ಹೊಸ ಶಕೆ ಆರಂಭವಾಗಿದೆ. ಜಾತಿಗಳ ನಡುವೆ, ಧರ್ಮಗಳ ನಡುವೆ ವೈಷಮ್ಯ ಬಿತ್ತದೆಯೇ ಹಾಗೂ ಚುನಾವಣೆಯನ್ನು ಸ್ವಚ್ಛ ರೀತಿಯಲ್ಲಿ ಎದುರಿಸಿಯೂ ಗೆಲ್ಲಬಹುದು ಎಂಬುದನ್ನು ಎಎಪಿ ತೋರಿಸಿಕೊಟ್ಟಿದೆ. ಶ್ರೀಮಂತರು ಹಾಗೂ ಉದ್ಯಮಿಗಳ ಹಿತ ಕಾಪಾಡುವುಕ್ಕಾಗಿಯೇ ಇರುವ ಪಕ್ಷಗಳು ಮೂಲೆಗುಂಪಾಗಿ, ಸಾಮಾನ್ಯ ಜನರ ಹಿತ ಕಾಪಾಡುವ ಎಎಪಿ ಅಧಿಕಾರಕ್ಕೆ ಬರುತ್ತಿರುವುದು ದೇಶವು ಹೆಮ್ಮೆ ಪಡುವಂತಹ ವಿಚಾರ ಎಂದು ಪೃಥ್ವಿ ರೆಡ್ಡಿ ಅಭಿಪ್ರಾಯಪಟ್ಟರು.
ರಾಜ್ಯಾದ್ಯಂತ ಸಂಭ್ರಮಾಚರಣೆ:ಪಂಜಾಬ್‌ನಲ್ಲಿ ಎಎಪಿಯು ಭರ್ಜರಿ ಗೆಲುವು ಪಡೆದಿದ್ದಕ್ಕೆ ಕರ್ನಾಟಕದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ವಿಜಯೋತ್ಸವ ಆಚರಿಸುವ ಮೂಲಕ ಎಎಪಿ ಕಾರ್ಯಕರ್ತರು ಸಂಭ್ರಮಿಸಿದರು. ಬೆಂಗಳೂರಿನ ಜೈನ್ ಭವನದಲ್ಲಿ ನೂರಕ್ಕೂ ಹೆಚ್ಚು ಕಾರ್ಯಕರ್ತರು ಸಿಹಿ ಹಂಚಿ, ಘೋಷಣೆ ಕೂಗಿ ಸಂತಸ ವ್ಯಕ್ತಪಡಿಸಿದರು. ಪಕ್ಷದ ಅನೇಕ ಮುಖಂಡರು ವಿಜಯೋತ್ಸವದಲ್ಲಿ ಭಾಗವಹಿಸಿದ್ದರು.