ಕರ್ನಾಟಕ

karnataka

ETV Bharat / state

ಬೆಂಗಳೂರಿನ ಚರ್ಚ್ ಸ್ಟ್ರೀಟ್​ನಲ್ಲಿ ಮದ್ಯದ ಅಮಲಿನಲ್ಲಿದ್ದ ಯುವತಿಯ ರಂಪಾಟ.. ಮನೆಗೆ ತಲುಪಿಸುವಷ್ಟರಲ್ಲಿ ಪೊಲೀಸರು ಹೈರಾಣ

ತಡರಾತ್ರಿ ಬೆಂಗಳೂರಿನ ಚರ್ಚ್ ಸ್ಟ್ರೀಟ್​ನಲ್ಲಿ ಯುವತಿಯೊಬ್ಬಳು ಮದ್ಯ ಸೇವಿಸಿ ಪೊಲೀಸರಿಗೆ ತಲೆನೋವಾದ ಘಟನೆ ನಡೆದಿದೆ.

ಯುವತಿಯನ್ನು ಸಂಬಾಳಿಸುತ್ತಿರುವ ಪೊಲೀಸರು
ಯುವತಿಯನ್ನು ಸಂಬಾಳಿಸುತ್ತಿರುವ ಪೊಲೀಸರು

By

Published : Aug 6, 2023, 1:06 PM IST

Updated : Aug 6, 2023, 1:25 PM IST

ಬೆಂಗಳೂರು:ವಾರಾಂತ್ಯದ ಪಾರ್ಟಿ ನೆಪದಲ್ಲಿ ಪುಂಡಾಟಿಕೆ ಮೆರೆಯುವ ಪ್ರಕರಣಗಳು ನಗರದಲ್ಲಿ ಆಗಾಗ ವರದಿಯಾಗುತ್ತಲೇ ಇರುತ್ತವೆ. ಅಂಥಹದ್ದೇ ಮತ್ತೊಂದು ಪ್ರಕರಣ ಶನಿವಾರ ತಡರಾತ್ರಿ ನಗರದ ಚರ್ಚ್ ಸ್ಟ್ರೀಟ್​ನಲ್ಲಿ ನಡೆದಿದೆ. ಮದ್ಯದ ಅಮಲಿನಲ್ಲಿದ್ದ ಯುವತಿಯೊಬ್ಬಳು ತೂರಾಡುತ್ತ ಸಾರ್ವಜನಿಕರಿಗೆ ತಲೆ ನೋವಾದ ಘಟನೆ ನಡೆದಿದೆ.

ಬುದ್ಧಿ ಹೇಳಲು ಹೋದವರ ಮೇಲೆಯೇ ಮುಗಿ ಬೀಳುತ್ತಿದ್ದ ಯುವತಿಯನ್ನು ಸಂಬಾಳಿಸುವಲ್ಲಿ ಪೊಲೀಸರೇ ಹೈರಾಣಾಗಿದ್ದಾರೆ. ರಾತ್ರಿ ಪಾಳಿಯಲ್ಲಿದ್ದ ಪೊಲೀಸ್​ ಸಿಬ್ಬಂದಿ ಯುವತಿಯನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಲು ಯತ್ನಿಸಿದ್ದಾರೆ. ಆದರೆ ಮಹಿಳಾ ಸಿಬ್ಬಂದಿಗಳಿಲ್ಲದ ಕಾರಣ ಯುವತಿಯನ್ನು ಆಟೋದಲ್ಲಿ ಕೂರಿಸಲು ಪೊಲೀಸರೇ ಅಂಗಲಾಚಿದ ಪ್ರಸಂಗ ಎದುರಾಗಿತ್ತು. ಸತತ ಒಂದು ಗಂಟೆ ಕಾಲ ಪ್ರಯತ್ನಿಸಿದ ಬಳಿಕ ಅಂತಿಮವಾಗಿ ಬೇರೆ ಯುವತಿಯರ ಸಹಾಯದಿಂದ ಆಕೆಯನ್ನು ಮನೆಗೆ ಸುರಕ್ಷಿತವಾಗಿ ಕಳಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಳೆದ ತಿಂಗಳೂ ಸಹ ಕೇಂದ್ರ ವಿಭಾಗದ ಪೊಲೀಸರ ಕಾರ್ಯಾಚರಣೆ ಸಂದರ್ಭದಲ್ಲಿ ಕೆಲ ವಿದೇಶಿ ಪ್ರಜೆಗಳು ಭಾರಿ ಹೈಡ್ರಾಮಾ ಮಾಡಿದ್ದ ಪ್ರಸಂಗ ಸಹ ನಡೆದಿತ್ತು. ವಶಕ್ಕೆ ಪಡೆಯುವ ಯತ್ನದಲ್ಲಿದ್ದ ಪೊಲೀಸರಿಂದ ತಪ್ಪಿಸಿಕೊಂಡು ಕೆಲ ವಿದೇಶಿ ಪ್ರಜೆಗಳು ದಿಕ್ಕಾಪಾಲಾಗಿ ಓಡಿದ್ದರು. ಇನ್ನೂ ಕೆಲವರು ಮದ್ಯದ ಅಮಲಿನಲ್ಲಿ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದಿದ್ದರು.

ಇತರ ಪ್ರಕರಣಗಳು : ಉಡುಪಿಯಲ್ಲಿಯು ಕಳೆದ ನವೆಂಬರ್​ ತಿಂಗಳಿನಲ್ಲಿ ಮೇಲಿನಂಥಹದೇ ಪ್ರಕರಣ ನಡೆದಿತ್ತು. ಇಲ್ಲಿ ಯುವಕ ಯುವತಿ ಇಬ್ಬರು ಮದ್ಯ ಸೇವನೆ ಮಾಡಿ ಪಿಜ್ಜಾ ಶಾಪ್​ಗೆ ಬಂದು ಸಾರ್ವಜನಿಕರೊಂದಿಗೆ ಗಲಾಟೆ ಮಾಡಿಕೊಂಡಿದ್ದರು. ಈ ವೇಳೆ ಅಲ್ಲಿನ ಸಿಬ್ಬಂದಿ ಇಬ್ಬರನ್ನು ಹೊರಕ್ಕೆ ಕಳುಹಿಸಿದ್ದರು. ಆದರೆ ಮದ್ಯದ ಅಮಲಿನಲ್ಲಿದ್ದ ಯುವತಿ ಶಾಪ್ ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾಗಿದ್ದಳು.

ಇದರಿಂದ ಅಲ್ಲೇ ಇದ್ದ ಸಾರ್ವಜನಿಕರು ನಶೆ ಇಳಿಸಲೆಂದು ಆಕೆಯ ತಲೆ ಮೇಲೆ ತಣ್ಣೀರು ಹಾಕಿ ಹೊರಗೆ ಕಳುಹಿಸಿದ್ದಾರೆ. ಇಷ್ಟಾದರು ಅಮಲು ಇಳಿಯದ ಯುವತಿ ತನ್ನೊಂದಿಗೆ ಇದ್ದ ಯುವಕನಿಗೂ ಚಪ್ಪಲಿಯಿಂದ ಹೊಡೆದಿದ್ದಳು. ಕೊನೆಗೆ ಆಕೆಯನ್ನು ಮಣಿಪಾಲ ಠಾಣಾ ಪೊಲೀಸರು ಕರೆದೊಯ್ದು ವಿಚಾರಣೆ ನಡೆಸಿದಾಗ ಆಕೆ ಮೂಲತಃ ಬೇರೆ ರಾಜ್ಯದವಳು ಎಂಬ ವಿಚಾರ ತಿಳಿದಿದೆ. ಯುವತಿಯ ರಂಪಾಟದ ದೃಶ್ಯಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದವು.​

ನಶೆ ಎನ್ನುವಂಥದ್ದು ಎಂಥವರನ್ನು ಮೈ ಮರೆಯುವಂತೆ ಮಾಡುತ್ತದೆ. ಮದ್ಯ ಸೇವಿಸಿ ಎಂಜಾಯ್​ ಮಾಡುವುದು ಅವರವರಿಗೆ ಬಿಟ್ಟ ವಿಚಾರ. ಆದರೆ ತಮ್ಮ ಖುಷಿಗೆ ಬೇರೆಯವರ ಸಮಯವನ್ನು ವ್ಯರ್ಥ ಮಾಡುವುದು, ಸಾರ್ವಜನಿಕ ಸ್ಥಳಗಳಲ್ಲಿ ರಂಪಾಟದೊಂದಿಗೆ ಇತರರಿಗೆ ತೊಂದರೆಯನ್ನುಂಟು ಮಾಡುವುದು ಖಂಡಿತ ತಪ್ಪು.

ಇದನ್ನೂ ಓದಿ:ಚಾರ್ಜಿಂಗ್​ ಬಳಿಕ ಸ್ಟಾರ್ಟ್ ಮಾಡುತ್ತಿದ್ದಂತೆ ಹೊತ್ತಿ ಉರಿದ ಎಲೆಕ್ಟ್ರಿಕ್​​ ಬೈಕ್: ವಿಡಿಯೋ

Last Updated : Aug 6, 2023, 1:25 PM IST

ABOUT THE AUTHOR

...view details