ಬೆಂಗಳೂರು : ಪ್ರೀತಿ ವಿಚಾರಕ್ಕೆ ಇಬ್ಬರು ಸ್ನೇಹಿತರ ನಡುವೆ ನಡೆದ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸ್ನೇಹಿತನನ್ನು ಕುತ್ತಿಗೆ ಬಿಗಿದು ಹತ್ಯೆ ಮಾಡಿ ಬಳಿಕ ಕಟ್ಟಡದಿಂದ ತಳ್ಳಿ ಸಹಜ ಸಾವು ಎಂದು ಬಿಂಬಿಸಲು ಹೋಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಅಸ್ಸಾಂ ಮೂಲದ ಗೌತಮ್ ತಟಿ (26) ಎಂದು ಗುರುತಿಸಲಾಗಿದ್ದು, ಸನು ಉರಂಗ್ ಮೃತ ದುರ್ದೈವಿಯಾಗಿದ್ದಾನೆ.
ಅಸ್ಸೋಂ ಮೂಲದವರಾದ ಇಬ್ಬರು ಸ್ನೇಹಿತರು ಕಳೆದ ಒಂದೂವರೆ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದ್ದರು. ಹುಳಿಮಾವಿನಲ್ಲಿ ಒಂದೇ ಬಾಡಿಗೆ ಮನೆಯಲ್ಲಿ ಇಬ್ಬರು ವಾಸವಾಗಿದ್ದರು. ಮೃತ ಸನು ಉರಂಗ್ ಅರಕೆರೆ ಬಳಿ ಇರುವ ಗುರು ಗಾರ್ಡನ್ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದ. ಇನ್ನು, ಗೌತಮ್ ಅದೇ ಏರಿಯಾದಲ್ಲಿದ್ದ ಬೇರೊಂದು ಹೊಟೇಲ್ನಲ್ಲಿ ಕೆಲಸ ಮಾಡುತ್ತಿದ್ದ. ಈ ಗೆಳೆಯರಿಬ್ಬರು ಊರಿನಲ್ಲಿ ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ದರು ಎಂದು ಹೇಳಲಾಗಿದೆ. ಇದೇ ವಿಚಾರಕ್ಕಾಗಿ ಇಬ್ಬರ ನಡುವೆ ಆಗಾಗ ವಾಗ್ವಾದ ನಡೆಯುತ್ತಿತ್ತು. ಮಾತ್ರವಲ್ಲದೆ ಜಗಳವೂ ನಡೆಯುತ್ತಿತ್ತು ಎಂದು ತಿಳಿದುಬಂದಿದೆ.
ನಿನ್ನೆ ರಾತ್ರಿ ಮದ್ಯ ಸೇವಿಸಿ ಇಬ್ಬರು ಮನೆಯಲ್ಲಿರುವಾಗ ತಾವು ಪ್ರೀತಿಸುತ್ತಿದ್ದ ಹುಡುಗಿಯ ವಿಷಯ ಪ್ರಸ್ತಾಪವಾಗಿದೆ. ಇದರಿಂದಾಗಿ ಮತ್ತೆ ಇಬ್ಬರ ನಡುವೆ ಮಾತಿನ ಚಕಮಕಿ ಶುರುವಾಗಿದೆ. ಈ ವೇಳೆ ನಶೆಯಲ್ಲಿದ್ದ ಗೌತಮ್, ಸನುವಿನ ಕುತ್ತಿಗೆಯನ್ನು ಬಿಗಿದಿದ್ದಾನೆ. ಈ ವೇಳೆ ಉಸಿರುಗಟ್ಟಿ ಸನು ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.