ಬೆಂಗಳೂರು:ವಿಧಾನಸಭೆ ವಿಶ್ವಾಸ ಮತ ಮಂಡನೆ ಹಾಗೂ ಚರ್ಚೆ ಮಾತ್ರ ನಾಳೆ ನಡೆಯಲಿದೆ. ಮತದಾನವಾಗುವ ಸಾಧ್ಯತೆ ಬಹಳ ಕಡಿಮೆ ಇದೆ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನಾಳೆ ಸದನದಲ್ಲಿ ವಿಶ್ವಾಸಮತ ಯಾಚನೆಯ ಪ್ರಸ್ತಾಪ ಮಂಡಿಸಲಿದ್ದಾರೆ. ಚರ್ಚೆಗೆ ಸ್ಪೀಕರ್ ರಮೇಶ್ ಕುಮಾರ್ ಅವಕಾಶ ಮಾಡಿಕೊಡಲಿದ್ದಾರೆ.
ಪ್ರಸ್ತಾಪ ಮಂಡಿಸಿದ ಸಿಎಂ ಕುಮಾರಸ್ವಾಮಿ ಸುದೀರ್ಘವಾಗಿ ಭಾಷಣ ಮಾಡಲಿದ್ದಾರೆ ಎನ್ನಲಾಗುತ್ತಿದೆ. ರಾಜ್ಯ ಮೈತ್ರಿ ಸರ್ಕಾರ ರಚನೆಯಾದ ನಂತರ ಒಂದು ವರ್ಷದಲ್ಲಿ ಆಗಿರುವ ಸಾಧನೆ, ಪ್ರತಿಪಕ್ಷ ಬಿಜೆಪಿ ನೀಡಿದ ಸಮಸ್ಯೆ, ಆರನೇ ಸಾರಿ ನಡೆಸುತ್ತಿರುವ ಆಪರೇಷನ್ ಕಮಲ, ಸರ್ಕಾರ ಕೆಡವಲು, ಆತಂಕಕ್ಕೆ ಒಳಪಡಿಸಲು ನಡೆಸಿದ ಯತ್ನ, ಇದೆಲ್ಲ ಸಮಸ್ಯೆ ನಡುವೆಯೂ ಸಾಲಮನ್ನಾ, ಹಿಂದಿನ ಸರ್ಕಾರದ ಜನಪ್ರಿಯ ಯೋಜನೆ ಮುಂದುವರಿಸಿರುವುದು ಸೇರಿದಂತೆ ಹಲವು ಕಾರ್ಯಗಳ ಕುರಿತು ಸುದೀರ್ಘ ಭಾಷಣ ಮಾಡಲಿದ್ದಾರೆ.
ಆಡಳಿತ ಪಕ್ಷದ ಪರ ಯಾರಾರು ಮಾತನಾಡಲಿದ್ದಾರೆ:
ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರ್ಕಾರ ಎದುರಿಸಿದ ಸವಾಲು, ಸರ್ಕಾರ ಉಳಿಸಲು ಕೈಗೊಂಡ ನಿರ್ಧಾರ, ಮಾಡಿದ ತ್ಯಾಗ, ಆರೋಗ್ಯ ಸಮಸ್ಯೆಯನ್ನೂ ಲೆಕ್ಕಿಸದೇ ತಾವು ಸರ್ಕಾರ ಮುನ್ನಡೆಸಿದ ರೀತಿ, ಪ್ರತಿಪಕ್ಷ ನೀಡಿದ ಗೋಳು, ಇತ್ಯಾದಿ ವಿಚಾರವನ್ನು ಸಿಎಂ ಪ್ರಸ್ತಾಪಿಸಲಿದ್ದಾರೆ. ಸುದೀರ್ಘ ಭಾಷಣವನ್ನು ವಿಶ್ವಾಸಮತ ಮಂಡಿಸಿ ತಮ್ಮ ಸಮ್ಮಿಶ್ರ ಸರ್ಕಾರದ ಪರ ಶಾಸಕರು ಮತ ನೀಡಬೇಕೆಂದು ಮನವಿ ಮಾಡಲಿದ್ದಾರೆ. ಉಳಿದವರ ಭಾಷಣ ಸಿಎಂ ಭಾಷಣ ಮಾಡಿದ ನಂತರ ಆಡಳಿತ ಪಕ್ಷದ ಪರವಾಗಿ ನಾಯಕರು ಮಾತನಾಡಲಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಡಿಸಿಎಂ ಪರಮೇಶ್ವರ್, ಗೃಹ ಸಚಿವ ಎಂ.ಬಿ. ಪಾಟೀಲ್, ಕೆ.ಜೆ. ಜಾರ್ಜ್, ಡಿ.ಕೆ.ಶಿವಕುಮಾರ್, ಕೃಷ್ಣ ಬೈರೇಗೌಡ, ಆರ್.ವಿ. ದೇಶಪಾಂಡೆ, ಕೆಪಿಸಿಸಿ ಅಧ್ಯಕ್ಷ ಹಾಗೂ ಶಾಸಕ ದಿನೇಶ್ ಗಂಡೂರಾವ್, ಲಕ್ಷ್ಮಿ ಹೆಬ್ಬಾಳ್ಕರ್, ಸೌಮ್ಯ ರೆಡ್ಡಿ, ಜೆಡಿಎಸ್ ಪಕ್ಷದಿಂದ ಸಚಿವರಾದ ಎಚ್.ಡಿ. ರೇವಣ್ಣ, ಜಿ.ಟಿ. ದೇವೇಗೌಡ, ಬಂಡೆಪ್ಪ ಕಾಶೆಂಪೂರ್, ಕೆ. ಅನ್ನದಾನಿ ಮತ್ತಿತರ ನಾಯಕರು ಮಾತನಾಡಲಿದ್ದಾರೆ.