ಕರ್ನಾಟಕ

karnataka

ETV Bharat / state

ಸ್ಥಳೀಯ ಸಂಸ್ಥೆಗಳಿಂದ ಎಂಎಲ್‌ಸಿ ಚುನಾವಣೆ: ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕಿಲ್ಲ ಎಂಬ ಆದೇಶ ಎತ್ತಿ ಹಿಡಿದ ದ್ವಿ ಸದಸ್ಯ ಪೀಠ - ಮೇಲ್ಮನವಿ ಅರ್ಜಿ ವಜಾ

ಸ್ಥಳೀಯ ಸಂಸ್ಥೆಗಳಿಂದ ಎಂಎಲ್‌ಸಿ ಚುನಾವಣೆಯಲ್ಲಿ ನಾಮ ನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕಿಲ್ಲ ಎಂದು ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ದ್ವಿ ಸದಸ್ಯ ಪೀಠ ಎತ್ತಿ ಹಿಡಿದಿದೆ.

two member bench upheld the order  nominated members had no right to vote  Karnataka high court news  ಸ್ಥಳೀಯ ಸಂಸ್ಥೆಗಳಿಂದ ಎಂಎಲ್‌ಸಿ ಚುನಾವಣೆ  ನಾಮ ನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕಿಲ್ಲ  ಆದೇಶ ಎತ್ತಿ ಹಿಡಿದ ದ್ವಿ ಸದಸ್ಯ ಪೀಠ  ಏಕಸದಸ್ಯ ಪೀಠ ನೀಡಿದ್ದ ಆದೇಶ  ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿಗೆ ನಡೆಯವ ಚುನಾವಣೆ  ನಾಮ ನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕು ಇಲ್ಲ  ಮೇಲ್ಮನವಿ ಅರ್ಜಿ ವಜಾ  ವಿಚಾರಣೆ ವೇಳೆ ಪ್ರಾಣೇಶ್ ಪರ ವಾದ
ಸ್ಥಳೀಯ ಸಂಸ್ಥೆಗಳಿಂದ ಎಂಎಲ್‌ಸಿ ಚುನಾವಣೆ

By

Published : Apr 21, 2023, 11:12 AM IST

ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿಗೆ ನಡೆಯವ ಚುನಾವಣೆಯಲ್ಲಿ ಸ್ಥಳೀಯ ಸಂಸ್ಥೆಗಳ ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕು ಇಲ್ಲ ಎಂಬುದಾಗಿ ಹೈಕೋರ್ಟ್‌ನ ಏಕ ಸದಸ್ಯ ಪೀಠ ನೀಡಿದ್ದ ಆದೇಶವನ್ನು ದ್ವಿ ಸದಸ್ಯ ಪೀಠ ಎತ್ತಿ ಹಿಡಿದಿದೆ. 2022ರ ನವೆಂಬರ್ 3 ರಂದು ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ವಿಧಾನಪರಿಷತ್ ಬಿಜೆಪಿ ಸದಸ್ಯ ಎಂ.ಕೆ. ಪ್ರಾಣೇಶ್ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಅವರಿದ್ದ ವಿಭಾಗೀಯ ಪೀಠ ಗುರುವಾರ ಮೇಲ್ಮನವಿ ವಜಾಗೊಳಿಸಿ ಆದೇಶಿಸಿತು.

ಮೇಲ್ಮನವಿ ಅರ್ಜಿ ವಜಾಗೊಂಡಿದ್ದರೂ ಪ್ರಾಣೇಶ್ ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕೆಂದು ಕೋರಿ ಸಲ್ಲಿಸಲಾಗಿರುವ ಪ್ರತ್ಯೇಕ ಚುನಾವಣಾ ತಕರಾರು ಅರ್ಜಿ ವಿಚಾರಣೆಗೆ ಬಾಕಿಯಿರುವ ಹಿನ್ನೆಲೆ ಅವರ ಸದಸ್ಯತ್ವಕ್ಕೆ ತೊಂದರೆಯಾಗುವುದಿಲ್ಲ. ರಾಜ್ಯ ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳಿಂದ ವಿಧಾನ ಪರಿಷತ್ತಿನ 20 ಸ್ಥಾನಗಳಿಗೆ 2021ರ ಡಿಸೆಂಬರ್ ತಿಂಗಳಲ್ಲಿ ಚುನಾವಣೆ ನಡೆದಿತ್ತು. ಅದರಲ್ಲಿ ಬಿಜೆಪಿಯ ಎಂ.ಕೆ. ಪ್ರಾಣೇಶ್ ಅವರ ವಿರುದ್ಧ ಕೇವಲ 6 ಮತಗಳ ಅಂತರದಿಂದ ಸೋತಿದ್ದ ಕಾಂಗ್ರೆಸ್‌ನ ಗಾಯಿತ್ರಿ ಶಾಂತೇಗೌಡ ನಾಮನಿರ್ದೇಶಿತ ಸದಸ್ಯರ ಮತದಾನದ ಹಕ್ಕು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ್ದ ಏಕಸದಸ್ಯ ನ್ಯಾಯಪೀಠ, ಸಂವಿಧಾನದ ಕಲಂ 243(6) ಮತ್ತು ಕೆಎಂಸಿ ಕಾಯ್ದೆ ಪ್ರಕಾರ ನಾಮನಿರ್ದೇಶಿತ ಸದಸ್ಯರಿಗೆ ಸ್ಥಳೀಯ ಸಂಸ್ಥೆಗಳ ಸಭೆಗಳಲ್ಲೂ ಸಹ ಮತದಾನ ಮಾಡುವ ಹಕ್ಕಿಲ್ಲ. ಅವರು ಸಲಹೆ-ಸೂಚನೆಗಳನ್ನು ನೀಡಬಹುದಷ್ಟೇ. ಹಾಗಾಗಿ ವಿಧಾನಪರಿಷತ್ ಚುನಾವಣೆಯಲ್ಲೂ ಸಹ ಮತದಾನದ ಹಕ್ಕು ಇರುವುದಿಲ್ಲ ಎಂದು ಆದೇಶ ನೀಡಿತ್ತು.

ವಿಚಾರಣೆ ವೇಳೆ ಪ್ರಾಣೇಶ್ ಪರ ವಾದ ಮಂಡಿಸಿದ ವಕೀಲರು, ನಾಮ ನಿರ್ದೇಶಿತರ ಸದಸ್ಯರಿಗೆ ಸ್ಥಳೀಯ ಸಂಸ್ಥೆಗಳ ಸಭೆಗಳಲ್ಲಿ ಮತದಾನದ ಹಕ್ಕಿಲ್ಲ ಎಂದಾಕ್ಷಣ ವಿಧಾನಪರಿಷತ್ ಚುನಾವಣೆಯಲ್ಲೂ ಮತದಾನದ ಹಕ್ಕಿಲ್ಲ ಎಂದು ಹೇಳಲಾಗದು. ಸ್ಥಳೀಯ ಸಂಸ್ಥೆಗಳ ಸಭೆ ಬೇರೆ ಮತ್ತು ವಿಧಾನ ಪರಿಷತ್ ಚುನಾವಣೆಯೇ ಬೇರೆ. ನಾಮ ನಿರ್ದೇಶಿತರಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಚುನಾವಣೆಯಲ್ಲಿ ಮತದಾನದ ಹಕ್ಕಿಲ್ಲ ಎಂದು ಎಲ್ಲಿಯೂ ನಿರ್ಬಂಧವಿಲ್ಲ ಎಂದು ವಾದ ಮಂಡಿಸಿದ್ದರು.

ಪ್ರಕರಣದ ಹಿನ್ನೆಲೆ ಏನು ?:ಕೇಂದ್ರ ಚುನಾವಣಾ ಆಯೋಗ 2021ರ ನ.9ರಂದು ಚಿಕ್ಕಮಗಳೂರು ಸೇರಿದಂತೆ ರಾಜ್ಯದ 20 ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳಿಂದ 25 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಸಿತ್ತು. ಆ ಚುನಾವಣೆಯಲ್ಲಿ ಎಂ.ಕೆ.ಪ್ರಾಣೇಶ್ 1182 ಮತಗಳನ್ನು ಮತ್ತು ಗಾಯಿತ್ರಿ ಅವರು 1176 ಮತಗಳನ್ನು ಪಡೆದಿದ್ದರು. ಎಂ.ಕೆ.ಪ್ರಾಣೇಶ್ 6 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು.

ಚುನಾವಣಾ ಫಲಿತಾಂಶ ಪ್ರಶ್ನಿಸಿ ಗಾಯಿತ್ರಿ ಶಾಂತೇಗೌಡ ಹೈಕೋರ್ಟ್ ಮೆಟ್ಟಿಲೇರಿದ್ದರು. ಮೂಡಿಗೆರೆ, ಎನ್.ಆರ್.ಪುರ, ಶೃಂಗೇರಿ ಮತ್ತು ಕೊಪ್ಪ ಸ್ಥಳೀಯ ಸಂಸ್ಥೆಗಳ 12 ನಾಮ ನಿರ್ದೇಶಿತ ಸದಸ್ಯರಿಗೆ ಕಾನೂನು ಬಾಹಿರವಾಗಿ ಮತದಾನದ ಹಕ್ಕು ನೀಡಿರುವುದರಿಂದ ತಮ್ಮ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಆದರೆ, ಸಂವಿಧಾನದ ನಿಯಮಗಳಲ್ಲಿ ನಾಮ ನಿರ್ದೇಶಿತ ಸದಸ್ಯರಿಗೆ ವಿಧಾನಪರಿಷತ್ ಚುನಾವಣೆಯಲ್ಲಿ ಮತದಾನದ ಹಕ್ಕಿಲ್ಲ. ತಮ್ಮ ಪ್ರತಿಸ್ಪರ್ಧಿಯ ಆಯ್ಕೆ ಅಕ್ರಮ ಹಾಗೂ ಕಾನೂನು ಬಾಹಿರ. ಹಾಗಾಗಿ ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕಿಲ್ಲ ಎಂದು ಘೋಷಿಸಬೇಕು ಎಂದು ಕೋರಿದ್ದರು.

ಓದಿ:ರಾಮಕಥಾ ಗಾಯಕಿ ಅತ್ಯಾಚಾರ ಪ್ರಕರಣ: ರಾಘವೇಶ್ವರ ಶ್ರೀ, ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧದ ದೋಷಾರೋಪ ಪಟ್ಟಿ ರದ್ದು

ABOUT THE AUTHOR

...view details